Indian Soldiers, Armed Forces
Indian Soldiers, Armed Forces Image for representative purpose

ಬಡ್ತಿ ಕೇಡರ್ ಪರೀಕ್ಷೆ ಎದುರಿಸದಿದ್ದರೆ ವೇತನ ಹೆಚ್ಚಳ ಹಕ್ಕು ಸೇನಾ ಸಿಬ್ಬಂದಿಗಿಲ್ಲ: ಸಶಸ್ತ್ರಪಡೆಗಳ ನ್ಯಾಯಮಂಡಳಿ

ಅಧಿಕಾರಿಗಳಗಿಂತ ಕೆಳಸ್ತರದ ಸಿಬ್ಬಂದಿ ಶ್ರೇಣಿಗೆ (ಪಿಬಿಒಆರ್) ವೇತನ ಬಡ್ತಿಗೆ ಸಂಬಂಧಿಸಿದ ದಾವೆಯನ್ನು ವಿಸ್ತೃತ ಪೀಠ ನಿರ್ಧರಿಸಬೇಕು ಎಂಬ ಆಧಾರದಲ್ಲಿ ಚಂಡೀಗಢ ಎಎಫ್‌ಟಿ ಈ ತೀರ್ಪು ನೀಡಿದೆ.

ಬಡ್ತಿ ಕೇಡರ್‌ ಪರೀಕ್ಷೆ ಎದುರಿಸದಿದ್ದರೆ ಪರಿಷ್ಕೃತ ವೃತ್ತಿ ಪ್ರಗತಿ ಖಾತರಿ ಯೋಜನೆ (ಎಂಎಸಿಪಿ) ಅಡಿಯಲ್ಲಿ ಸೇನಾ ಸಿಬ್ಬಂದಿಗೆ ಕಾಲಕಾಲಕ್ಕೆ ನೀಡುವ ವೇತನ ಹೆಚ್ಚಳ ದೊರೆಯದಂತಾಗುತ್ತದೆ ಎಂದು ಚಂಡೀಗಢದ ಸಶಸ್ತ್ರಪಡೆಗಳ ನ್ಯಾಯಮಂಡಳಿ (ಎಎಫ್‌ಟಿ) ಈಚೆಗೆ ತಿಳಿಸಿದೆ [ಚಂಚಲ್ ಸಿಂಗ್ ಮತ್ತು ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅಧಿಕಾರಿ ಶ್ರೇಣಿಗಿಂತಲೂ ಕೆಳಸ್ತರದ ಸಿಬ್ಬಂದಿ (ಪಿಬಿಒಆರ್) ವೇತನ ಬಡ್ತಿಗೆ ಸಂಬಂಧಿಸಿದ ದಾವೆಯನ್ನು ವಿಸ್ತೃತ ಪೀಠ ನಿರ್ಧರಿಸಬೇಕು ಎಂಬ ಆಧಾರದಲ್ಲಿ ಚಂಡೀಗಢ ಎಎಫ್‌ಟಿ ನ್ಯಾಯಮೂರ್ತಿಗಳಾದ ಶೇಖರ್‌ ಧವನ್‌, ಸುಧೀರ್‌ ಮಿತ್ತಲ್‌ ಹಾಗೂ ಏರ್‌ ಮಾರ್ಷಲ್‌ ಮನ್ವೇಂದ್ರ ಸಿಂಗ್‌ ಅವರಿದ್ದ ಪೀಠ ಈ ತೀರ್ಪು ನೀಡಿದೆ.

“ಆರ್ಥಿಕ ನಿಶ್ಚಲತೆ ತಡೆಯುವುದಕ್ಕಾಗಿ 8, 16 ಮತ್ತು 24 ವರ್ಷಗಳ ಸೇವೆಯ ನಂತರ ವೇತನ ಬಡ್ತಿ ನೀಡಬೇಕಾಗುತ್ತದೆ. ಆದರೆ ಒಬ್ಬ ವ್ಯಕ್ತಿ ಬಡ್ತಿಗೆ ಕೇಡರ್ ಪರೀಕ್ಷೆ ಎದುರಿಸಲು ಇಷ್ಟವಿಲ್ಲದಿದ್ದರೆ ಅಥವಾ ಬಡ್ತಿ ಪಡೆಯಲು ಇಷ್ಟವಿಲ್ಲದಿದ್ದರೆ ಇಲ್ಲವೇ ಅವರು ಯಾವುದೇ ಶಿಸ್ತು ಪ್ರಕ್ರಿಯೆ ಎದುರಿಸುತ್ತಿದ್ದರೆ ಅಥವಾ ಅಸಮರ್ಥರಾಗಿದ್ದರೆ  ಅಂತಹವರನ್ನು ಸಕ್ಷಮ ಪ್ರಾಧಿಕಾರ ಪ್ರತ್ಯೇಕವಾಗಿ ಪರಿಗಣಿಸಬೇಕು ಮತ್ತು ಎಂಸಿಎಪಿ ಯೋಜನೆ ಪ್ರಕಾರ ಅಂತಹವರು ವೇತನ ಬಡ್ತಿಗೆ ಅರ್ಹರಾಗುವುದಿಲ್ಲ” ಎಂದು ಎಎಫ್‌ಟಿ ತೀರ್ಪು ನೀಡಿದೆ.

2002ರಲ್ಲಿ ಸೇನೆಗೆ ಸೇರಿ 2019ರಲ್ಲಿ ಅಮಾನ್ಯಗೊಂಡಿದ್ದ ಚಂಚಲ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಫ್‌ಟಿ ಅಧ್ಯಕ್ಷರ ಆದೇಶದ ಮೇರೆಗೆ ಕಳೆದ ವರ್ಷ ಚಂಡೀಗಢದಲ್ಲಿ ಪೀಠ ಸ್ಥಾಪಿಸಲಾಗಿತ್ತು.

ಚಂಚಲ್‌ ಸಿಂಗ್‌ ಅವರು ಎಂಟು ವರ್ಷಗಳ ಸೇವೆ ಪೂರ್ಣಗೊಳಿಸಿದ ಬಳಿಕ ಮೊದಲನೇ ಎಂಎಸಿಪಿ ವೇತನ ಬಡ್ತಿ ಪಡೆದಿದ್ದರು. ನಂತರ ಬಡ್ತಿ ಕೇಡರ್‌ ಪರೀಕ್ಷೆ ಎದುರಿಸಲು ಅವರಿಗೆ ಇಷ್ಟ ಇಲ್ಲದ ಕಾರಣಕ್ಕೆ 16 ವರ್ಷ ಸೇವಾವಧಿ ಪೂರ್ಣಗೊಂಡ ಬಳಿಕ ಅವರಿಗೆ ಮತ್ತೊಂದು ವೇತನ ಬಡ್ತಿ ದೊರೆಯಲಿಲ್ಲ.

2008ರಲ್ಲಿ ಸಚಿವ ಸಂಪುಟವು ಎಂಎಸಿಪಿ ಅಡಿಯಲ್ಲಿ ಸಿಬ್ಬಂದಿಗೆ ಆವರ್ತಕ ಸೌಲಭ್ಯ ನೀಡಲು ಅನುಮೋದಿಸಿದ ನಂತರ, ಕಾರ್ಯಾಂಗ ಯಾವುದೇ ಷರತ್ತು ವಿಧಿಸುವಂತಿಲ್ಲ ಎಂದು ಸಿಂಗ್ ಪರ ವಕೀಲರು ವಾದಿಸಿದರು. ಆದರೆ, ಒಬ್ಬ ವ್ಯಕ್ತಿ ಸ್ವತಃ ಬಡ್ತಿ ನಿರಾಕರಿಸಿದಾಗ, ಅವನು ವೇತನ ಬಡ್ತಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತು.

ವಾದಗಳನ್ನು ಆಲಿಸಿದ ನ್ಯಾಯಾಲಯ ವೃತ್ತಿಜೀವನದಲ್ಲಿ ದೀರ್ಘಕಾಲದ ಆರ್ಥಿಕ ನಿಶ್ಚಲತೆಗೆ ಸಂಬಂಧಿಸಿದ ಅಡೆತಡೆ ನಿವಾರಿಸಲು ಎಂಎಸಿಪಿ ಜಾರಿಗೊಳಿಸಲಾಗಿದ್ದು 8, 16 ಮತ್ತು 24 ವರ್ಷಗಳ ಅವಧಿಯಲ್ಲಿ ಒಬ್ಬ ವ್ಯಕ್ತಿಗೆ ಬಡ್ತಿ ನೀಡದೆ ಇದ್ದರೆ ವೇತನ ಬಡ್ತಿ ನೀಡಬೇಕಾಗುತ್ತದೆ. ಕೇಡರ್ ನಿಯಂತ್ರಣ ಪ್ರಾಧಿಕಾರ ವಿಧಿಸುವ ಷರತ್ತುಗಳಿಗೆ ಈ ಯೋಜನೆ ಒಳಪಟ್ಟಿರುತ್ತದೆ ಎಂದು ಎಎಫ್‌ಟಿ ತಿಳಿಸಿದೆ.   

ಹೀಗಾಗಿ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡ್ತಿ ಕೇಡರ್‌ ಪರೀಕ್ಷೆ ಎದುರಿಸಲು ಒಪ್ಪದ ಅರ್ಜಿದಾರರ ವಿರುದ್ಧ ಮೇ 30ರಂದು ಎಎಫ್‌ಟಿ ತೀರ್ಪು ನೀಡಿತು.

Kannada Bar & Bench
kannada.barandbench.com