ಎಚ್‌ಯುಎಫ್ ಉಳಿತಾಯ ಖಾತೆಯಲ್ಲಿ ಠೇವಣಿಯಿಟ್ಟ ಹಣಕ್ಕೆ ಬಡ್ಡಿ ನೀಡಲು ನಿರಾಕರಣೆ: ಅಂಚೆ ಇಲಾಖೆಗೆ ಹೈಕೋರ್ಟ್‌ ತರಾಟೆ

ಠೇವಣಿ ಖಾತೆ ತೆರೆಯುವಾಗ ಯೋಜನೆ ಅವಧಿ ಮುಕ್ತಾಯವಾಗಿರುವ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಖಾತೆ ತೆರೆದ 12 ವರ್ಷಗಳ ನಂತರ ಪತ್ರ ಬರೆದು, ಬಡ್ಡಿ ನೀಡುವುದಿಲ್ಲ ಎಂದು ತಿಳಿಸಿರುವುದು ನಿಯಮಬಾಹಿರ ಎಂದು ಆಕ್ಷೇಪಿಸಿದ್ದ ಅರ್ಜಿದಾರರು.
Karnataka High Court
Karnataka High Court
Published on

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯಡಿ ತೆರೆಯಲಾದ ಹಿಂದು ಅವಿಭಕ್ತ ಕುಟುಂಬ (ಎಚ್‌ಯುಎಫ್) ಉಳಿತಾಯ ಖಾತೆಯಲ್ಲಿ ಠೇವಣಿಯಿಟ್ಟ ಹಣಕ್ಕೆ ಬಡ್ಡಿ ನೀಡಲು ನಿರಾಕರಿಸಿದ್ದ ಭಾರತೀಯ ಅಂಚೆ ಇಲಾಖೆಯನ್ನು ಈಚೆಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಖಾತೆದಾರರಿಗೆ ಬಡ್ಡಿ ಸಹಿತ ಠೇವಣಿ ಹಣ ಹಿಂದಿರುಗಿಸುವಂತೆ ತಾಕೀತು ಮಾಡಿದೆ.

ಉಳಿತಾಯ ಖಾತೆಯ ಠೇವಣಿಗೆ ಬಡ್ಡಿ ಪಾವತಿಸುವುದಿಲ್ಲ ಎಂದು ತಿಳಿಸಿ ಪತ್ರ ಕಳುಹಿಸಿದ ಭಾರತೀಯ ಅಂಚೆ ಇಲಾಖೆಯ ಧೋರಣೆ ಆಕ್ಷೇಪಿಸಿ ಬೆಂಗಳೂರು ನಿವಾಸಿ ಕೆ ಶಂಕರ್ ಲಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಸಕದಸ್ಯ ಪೀಠವು ಪುರಸ್ಕರಿಸಿದೆ.

ಠೇವಣಿ ಖಾತೆ ತೆರೆಯುವಾಗ ಯೋಜನೆ ಅವಧಿ ಮುಕ್ತಾಯವಾಗಿರುವ ಬಗ್ಗೆ ಅಂಚೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಖಾತೆ ತೆರೆದ 12 ವರ್ಷಗಳ ನಂತರ ಪತ್ರ ಬರೆದು, ಬಡ್ಡಿ ನೀಡುವುದಿಲ್ಲ ಎಂಬುದಾಗಿ ತಿಳಿಸಿರುವುದು ನಿಯಮಬಾಹಿರ ಕ್ರಮ ಎಂದು ಆಕ್ಷೇಪಿಸಿದ್ದರು.

ಅರ್ಜಿ ಪುರಸ್ಕರಿಸಿದ ಹೈಕೋರ್ಟ್, ಉಳಿತಾಯ ಯೋಜನೆ ಅವಧಿ ಮುಕ್ತಾಯಗೊಂಡ ಬಳಿಕವೂ ಠೇವಣಿ ಸ್ವೀಕರಿಸಿ ಬಡ್ಡಿ ನೀಡುವುದಿಲ್ಲ ಎನ್ನುವುದು ನ್ಯಾಯಸಮ್ಮತವಲ್ಲ. ಒಂದೊಮ್ಮೆ ಖಾತೆದಾರರು ಅವಧಿ ಮುಗಿದ ನಂತರ ಖಾತೆ ತೆರೆದು, ಠೇವಣಿ ಇಟ್ಟಿದ್ದಾರೆ ಎಂಬುದು ತಿಳಿದು ಬಂದ ಕೂಡಲೇ ಅದನ್ನು ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕಿತ್ತು. ಇದನ್ನು ಮಾಡದಿರುವುದು ಸಂಬಂಧಪಟ್ಟ ಅಧಿಕಾರಿಯ ಕರ್ತವ್ಯ ಲೋಪವಾಗಲಿದೆ. ಆದ್ದರಿಂದ, ಅರ್ಜಿದಾರರಿಗೆ ಬಡ್ಡಿ ಸಹಿತ ಠೇವಣಿ ಹಣ ಹಿಂದಿರುಗಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ಇಂತಹ ಖಾತೆಗಳನ್ನು ನಿರ್ವಹಿಸುವ ಎಲ್ಲ ಅಂಚೆ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು. ಇದರಿಂದ ಸಾಮಾನ್ಯ ಜನರು ಅನಗತ್ಯ ವ್ಯಾಜ್ಯಗಳಿಗೆ ಹಣ ಖರ್ಚು ಮಾಡುವುದು ಉಳಿಯುತ್ತದೆ ಎಂದು ಆದೇಶದಲ್ಲಿ ಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು 2009ರಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಎಚ್‌ಯುಎಫ್ ಪಿಪಿಎಫ್ ಖಾತೆ ತೆರೆದು ಒಟ್ಟು 12,96,412 ರೂಪಾಯಿ ಠೇವಣಿ ಇಟ್ಟಿದ್ದರು. ಇದು 2025ಕ್ಕೆ ಮುಕ್ತಾಯವಾಗಿ ಹಣ ಬರಬೇಕಿತ್ತು. ಉಳಿತಾಯ ಖಾತೆ ತೆರೆದ 12 ವರ್ಷದ ನಂತರ ಅಂದರೆ 2021ರ ಸೆಪ್ಟೆಂಬರ್‌ 23ರಂದು ಪೋಸ್ಟ್ ಮಾಸ್ಟರ್ ಪತ್ರ ಕಳುಹಿಸಿ, ‘ನೀವು 2009ರಲ್ಲಿ ಎಚ್‌ಯುಎಫ್ ಪಿಪಿಎಫ್ ಖಾತೆ ತೆಗೆದಿದ್ದೀರಿ. ಆದರೆ, ಆ ಯೋಜನೆ ಅವಧಿ 2005ರ ಮೇ 31ಕ್ಕೆ ಮುಗಿದಿದೆ. ಹೀಗಾಗಿ, ನಿಮಗೆ ಬಡ್ಡಿ ನೀಡಲಾಗದು’ ಎಂದು ತಿಳಿಸಿದ್ದರು.

Kannada Bar & Bench
kannada.barandbench.com