ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠಗಳ ರಚನೆ ಸಂಬಂಧ ಕಾನೂನು ಜಾರಿಗೆ ತರಲು ಕೇಂದ್ರದ ಬೆಂಬಲ ಕೋರಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಪಿ ವಿಲ್ಸನ್ ಅವರು ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಅವರು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ಅವಧಿಯನ್ನು 62 ವರ್ಷಗಳ ಬದಲಿಗೆ 65 ವರ್ಷಗಳಿಗೆ ಹೆಚ್ಚಳ ಮಾಡುವಂತೆಯೂ ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಸಾಮಾಜಿಕ ವೈವಿಧ್ಯ ಮತ್ತು ಎಲ್ಲಾ ರಾಜ್ಯಗಳ ಪ್ರಾತಿನಿಧ್ಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳು ಕ್ರಮಕ್ಕೆ ಮುಂದಾಗುವಂತೆ ಅವರು ಸೆಪ್ಟೆಂಬರ್ 4ರಂದು ಬರೆದ ಪತ್ರದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಹಳ ಹಿಂದಿನಿಂದಲೂ ಪ್ರಾದೇಶಿಕ ಪೀಠ ರಚನೆಯನ್ನು ಪ್ರತಿಪಾದಿಸುತ್ತಾ ಬಂದವರು ಪಿ ವಿಲ್ಸನ್. ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ನಾಯಕ ವೈಕೋ ಅವರೊಡಗೂಡಿ ಇವರು ತಿಂಗಳುಗಳ ಕಾಲ ರಾಜ್ಯಸಭೆಯಲ್ಲಿ ಪ್ರಾದೇಶಿಕ ಪೀಠ ರಚನೆ ಪರ ಧ್ವನಿ ಎತ್ತಿದ್ದಾರೆ.
ಸಾಂವಿಧಾನಿಕ ಅಡೆತಡೆಗಳಿಂದಾಗಿ ಸುಪ್ರೀಂಕೋರ್ಟ್‌ನ ಪ್ರಾದೇಶಿಕ ನ್ಯಾಯಪೀಠಗಳನ್ನು ಸ್ಥಾಪಿಸಲು ಸಾಧ್ಯವಿಲ್ಲವೆಂದೂ ಮತ್ತು ರಾಷ್ಟ್ರೀಯ ಪ್ರಕರಣಗಳನ್ನು ಆಲಿಸಲೆಂದೇ ರಾಷ್ಟ್ರೀಯ ನ್ಯಾಯಾಲಯ ಸ್ಥಾಪನೆ ಸಂಬಂಧ ಸಲ್ಲಿಸಲಾಗಿರುವ ಅರ್ಜಿಯೊಂದು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಎಂದು ಈ ಹಿಂದಿನ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ವಿಲ್ಸನ್ ಮತ್ತು ವೈಕೊ ಅವರನ್ನು ಉದ್ದೇಶಿಸಿ ಬರೆದ ಪತ್ರಗಳಲ್ಲಿ ತಿಳಿಸಿದ್ದರು.
ಪ್ರಾದೇಶಿಕ ಪೀಠಗಳ ರಚನೆಗೆ ಸಂಬಂಧಿಸಿದಂತೆ ಪತ್ರದಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಅಂಶಗಳು:
ಭೌಗೋಳಿಕವಾಗಿ ಸುಪ್ರೀಂಕೋರ್ಟ್ ಸಮೀಪ ಇರುವವರು ಮತ್ತು ಆರ್ಥಿಕ ಸವಲತ್ತು ಹೊಂದಿರುವ ವರ್ಗಕ್ಕೆ ಮಾತ್ರ ಸರ್ವೋಚ್ಚ ನ್ಯಾಯಾಲಯ ಕೈಗೆಟಕುವಂತಿದೆ.
ನ್ಯಾಯ ಪಡೆಯುವುದು ಮೂಲಭೂತ ಹಕ್ಕಾಗಿದ್ದು ಉತ್ತರ, ದಕ್ಷಿಣ, ಪಶ್ಚಿಮ ಹಾಗೂ ಪೂರ್ವ ವಲಯಗಳಿಗೆ ಕ್ರಮವಾಗಿ ದೆಹಲಿ, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಸುಪ್ರೀಂಕೋರ್ಟ್‌ನ ಶಾಶ್ವತ ಪ್ರಾದೇಶಿಕ ಪೀಠ ಸ್ಥಾಪಿಸುವ ತುರ್ತು ಅಗತ್ಯವಿದೆ.
ನಾನು ಈ ವಿಷಯವನ್ನು ಸಂಸತ್ತಿನಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದೇನೆ ಮತ್ತು ನವದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ್‌ನ ಶಾಶ್ವತ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸಲು ಸಂವಿಧಾನದ 130 ನೇ ವಿಧಿಯನ್ನು ತಿದ್ದುಪಡಿ ಮಾಡಲು ಖಾಸಗಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದೇನೆ.
ನ್ಯಾಯಕ್ಕಾಗಿ ಸಾರ್ವಜನಿಕರ ಹಕ್ಕುಗಳನ್ನು ಎತ್ತಿ ಹಿಡಿಯಲು ಪೀಠಗಳು ಅಗತ್ಯವಿದ್ದು ಅವುಗಳ ರಚನೆಗಾಗಿ ಖಾಸಗಿ ಮಸೂದೆ ಜಾರಿಗೊಳಿಸಲು ಕೇಂದ್ರವನ್ನು ವಿನಂತಿಸುತ್ತಿದ್ದೇನೆ.
ನ್ಯಾಯಮೂರ್ತಿಗಳ ನೇಮಕಾತಿ, ಬಾಕಿ ಪ್ರಕರಣಗಳ ನಿವರ್ಹಣೆ, ನಿವೃತ್ತಿ ವಯೋಮಿತಿ ಮುಂತಾದ ವಿಷಯಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಿರು ಮುಖ್ಯ ಅಂಶಗಳು ಹೀಗಿವೆ:
ಉನ್ನತ ನ್ಯಾಯಾಂಗದಲ್ಲಿ ಪ್ರಕರಣಗಳ ವಿಳಂಬ ತೀವ್ರ ರೀತಿಯಲ್ಲಿ ಸಾರ್ವಜನಿಕ ಕಳವಳದ ವಿಚಾರವಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, 58, 669 ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ ಮತ್ತು ಸುಮಾರು 45 ಲಕ್ಷ ಪ್ರಕರಣಗಳು ಹೈಕೋರ್ಟ್‌ಗಳಲ್ಲಿ ಬಾಕಿ ಇವೆ
ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದು ಪ್ರಕರಣಗಳ ಇತ್ಯರ್ಥ ವಿಳಂಬಕ್ಕೆ ಮುಖ್ಯ ಕಾರಣ.
ನ್ಯಾಯಮೂರ್ತಿಗಳು ನಿವೃತ್ತರಾದರೆ ಅವರ ಸ್ಥಾನಕ್ಕೆ ಕೂಡಲೇ ನೂತನ ನ್ಯಾಯಮೂರ್ತಿಗಳ ನೇಮಕವಾಗುವುದಿಲ್ಲ ಎಂಬ ಅಂಶ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಈ ಪರಿಸ್ಥಿತಿಯನ್ನು ಸುಧಾರಿಸುವ ಒಂದು ಮಾರ್ಗವೆಂದರೆ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸನ್ನು 62 ರಿಂದ 65 ವರ್ಷಗಳಿಗೆ ಹೆಚ್ಚಿಸುವುದಾಗಿದೆ.
ಸಂವಿಧಾನಕ್ಕೆ ಹದಿನೈದನೇ ತಿದ್ದುಪಡಿ ಮಾಡುವ ಮೂಲಕ 1963 ರಲ್ಲಿ ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಗಳಿಗೆ ಹೆಚ್ಚಿಸಲಾಗಿತ್ತು. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿ ತನ್ನ 107ನೇ ವರದಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 62 ರಿಂದ 65 ವರ್ಷಗಳಿಗೆ ಹೆಚ್ಚಿಸಲು ಶಿಫಾರಸು ಮಾಡಿದೆ
ತೀರ್ಪಿನ ಗುಣಮಟ್ಟ ಹೆಚ್ಚಲು ಸಾಮಾಜಿಕ ವೈವಿಧ್ಯತೆ ಮೂಲಭೂತ ಅಂಶವಾಗಿದೆ. ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರೂ ಸೇರಿದಂತೆ ಅನೇಕ ಸಾಮಾಜಿಕ ಗುಂಪುಗಳು ಸೂಕ್ತ ಪ್ರಾತಿನಿಧ್ಯವಿಲ್ಲ, ಇದರರ್ಥ ಅವರ ಹಕ್ಕುಗಳ ಸೂಕ್ತ ರಕ್ಷಣೆ ಆಗುತ್ತಿಲ್ಲ.
ನಿರ್ದಿಷ್ಟ ವರ್ಗಕ್ಕೆ ಸೇರಿದ ಅತ್ಯಂತ ಕಿರಿದಾದ, ಏಕರೂಪದ ನ್ಯಾಯಮೂರ್ತಿಗಳ ಗುಂಪು ಒಟ್ಟಾರೆಯಾಗಿ ಸಮಾಜದ ದೃಷ್ಟಿಕೋನಗಳನ್ನು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸಲು ಸಾಧ್ಯವಿಲ್ಲ ಎಂದು ಜನ ಆತಂಕಗೊಂಡಿದ್ದಾರೆ, ವಿಶೇಷವಾಗಿ ವೈವಿಧ್ಯಮಯ ಭಾಷಾ, ಸಾಂಸ್ಕೃತಿಕ ಮತ್ತು ಪೀಳಿಗೆಯ ವಿಷಯಗಳ ಬಗ್ಗೆ ಅವರಿಗೆ ಹೆಚ್ಚಿನ ದೃಷ್ಟಿಕೋನ ಅಗತ್ಯವಿರುತ್ತದೆ.
ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ನೇಮಕಾತಿ ಮಾಡಿದ ಮೂವರು ನ್ಯಾಯಮೂರ್ತಿಗಳು ಮಹಿಳೆಯರೇ ಆಗಿರುವುದು ಸಂತಸದ ವಿಚಾರ. ಇಂತಹ ನೇಮಕಾತಿಗಳು ಭವಿಷ್ಯದಲ್ಲಿಯೂ ಮುಂದುವರೆಯಬೇಕು.