ವಿಮೆದಾರ ಅಪಘಾತದಲ್ಲಿ ಮೃತಪಟ್ಟರೆ ಜೀವ ವಿಮಾ ಪರಿಹಾರ ಪ್ರಕ್ರಿಯೆಗೆ ಎಫ್‌ಐಆರ್‌ ಅಗತ್ಯವಿಲ್ಲ: ಜೆ&ಕೆ ಹೈಕೋರ್ಟ್‌

ಎಫ್‌ಐಆರ್‌ ಇಲ್ಲದ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿ ಎಲ್‌ಐಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದೆ.
High Court of Jammu & Kashmir, Srinagar
High Court of Jammu & Kashmir, Srinagar
Published on

ಅಪಘಾತದಲ್ಲಿ ವಿಮೆದಾರ ಸಾವನ್ನಪ್ಪಿರುವುದನ್ನು ಸಾಬೀತುಪಡಿಸಲು ಇತರೆ ಹಲವು ಮಹತ್ವದ ಸಾಕ್ಷ್ಯಗಳು ಲಭ್ಯವಿದ್ದರೆ ಜೀವ ವಿಮಾ ಪಾಲಿಸಿಯ ಪರಿಹಾರ ಪ್ರಕ್ರಿಯೆಗೆ ಎಫ್‌ಐಆರ್‌ ದಾಖಲಿಸುವುದು ಅಗತ್ಯವಲ್ಲ ಎಂದು ಈಚೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಹೈಕೋರ್ಟ್‌ ಹೇಳಿದೆ [ಭಾರತೀಯ ಜೀವ ವಿಮಾ ನಿಗಮ ಮತ್ತು ಇತರರು ವರ್ಸಸ್‌ ಹಮಿದಾ ಬನೊ ಮತ್ತು ಇತರರು].

ದೂರುದಾರ ಪ್ರತಿವಾದಿಗಳಿಗೆ ₹6 ಲಕ್ಷ ಪರಿಹಾರದ ಮೊತ್ತ ಹಾಗೂ ಅದಕ್ಕೆ ಶೇ.9ರಷ್ಟು ಬಡ್ಡಿ ಜೊತೆಗೆ ₹25,000 ಕಾನೂನು ವೆಚ್ಚ ಪಾವತಿಸುವಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಮಾಡಿದ್ದ ಆದೇಶ ಹಾಗೂ ಎಫ್‌ಐಆರ್‌ ಪ್ರತಿ ಇಲ್ಲದಿರುವುದನ್ನು ಪ್ರಶ್ನಿಸಿ ಭಾರತೀಯ ಜೀವ ವಿಮಾ ನಿಗಮ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಕುಮಾರ್‌ ಮತ್ತು ಮೋಕ್ಷ ಖಜುರಿಯಾ ಕಾಜ್ಮಿ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಈ ಪ್ರಕರಣದಲ್ಲಿ ಆಯೋಗ ಮಾಡಿರುವ ಆದೇಶಕ್ಕೆ ನಮ್ಮ ಒಪ್ಪಿಗೆ ಇದೆ. ವಿಮೆದಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿರುವಾಗ ವಿಮಾ ಪಾಲಿಸಿಯ ಪರಿಹಾರ ಪ್ರಕ್ರಿಯೆ ಮುಂದುವರಿಕೆಗೆ ಎಫ್‌ಐಆರ್‌ ಅಗತ್ಯವಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಪ್ರತಿವಾದಿಯ ಜೀವ ಪಡೆದಿರುವ ಇಂಥ ಅಪಘಾತ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸುವ ಅಗತ್ಯ ಕಾಣುತ್ತಿಲ್ಲ. ವರಾಂಡದಲ್ಲಿ ವ್ಯಕ್ತಿಯು ಬಿದ್ದು ಗಾಯಗೊಂಡಿರುವುದಕ್ಕೆ ಯಾರನ್ನೂ ಹೊಣೆ ಮಾಡಲಾಗದು” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಸಾವನ್ನಪ್ಪಿರುವ ವಿಮೆದಾರ ವ್ಯಕ್ತಿಯು ₹3 ಲಕ್ಷ ಜೀವ ವಿಮಾ ಪಾಲಿಸಿ ಪಡೆದಿದ್ದು, 2006ರ ಮಾರ್ಚ್‌ 28ರಂದು ಎಲ್‌ಐಸಿ ವಿಮೆ ನೀಡಿತ್ತು. ಇದರಲ್ಲಿ ದುಪ್ಪಟ್ಟು ಅಪಘಾತ ಪರಿಹಾರ ಅವಕಾಶ ಕಲ್ಪಿಸಲಾಗಿತ್ತು. ವಿಮೆ ಚಾಲ್ತಿಯಲ್ಲಿರುವಾಗ ವಿಮೆದಾರ ಸಾವನ್ನಪ್ಪಿದರೆ ವಿಮಾ ಕಂಪೆನಿಯು ದುಪ್ಪಟ್ಟು ಹಣ ಪಾವತಿಸಬೇಕು ಎಂಬ ಷರತ್ತು ಇತ್ತು. ವಿಮೆ ಚಾಲ್ತಿಯಲ್ಲಿರುವಾಲೇ ವಿಮೆದಾರ ಮನೆಯ ವರಾಂಡದಲ್ಲಿ ಜಾರಿ ಬಿದ್ದು, ತಲೆಗೆ ತೀವ್ರ ಪೆಟ್ಟುಬಿದ್ದು, ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದರು. ಈ ವಿಚಾರವನ್ನು ಸಾವನ್ನಪ್ಪಿದ ವ್ಯಕ್ತಿಯ ಮನೆಯವರು ಎಲ್‌ಐಸಿಗೆ ತಿಳಿಸಿದ್ದು, ವೈದ್ಯಕೀಯ ವರದಿ, ಕುಪ್ವಾರಾ ಪೊಲೀಸ್‌ ಸ್ಟೇಷನ್‌ ನೀಡಿದ್ದ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿ, ₹6 ಲಕ್ಷ ಡಬಲ್‌ ಆಕ್ಸಿಡೆಂಟ್‌ ಬೆನಿಫಿಟ್‌ ಕೋರಿದ್ದರು. ಇದಕ್ಕೆ ಪೂರಕವಾಗಿ ಎಫ್‌ಐಆರ್‌ ಪ್ರತಿ ಹಾಕಿಲ್ಲ ಎಂದು ಎಲ್‌ಐಸಿ ವಿಮೆ ನಿರಾಕರಿಸಿತ್ತು.

Kannada Bar & Bench
kannada.barandbench.com