Digital news
Digital news

ಡಿಜಿಟಲ್‌ ಸುದ್ದಿ ತಾಣ ನಿಯಂತ್ರಣಕ್ಕೆ ಮುಂದಾದ ಕೇಂದ್ರ; ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ಮಸೂದೆಗೆ ತಿದ್ದುಪಡಿ

ಡಿಜಿಟಲ್‌ ಸುದ್ದಿ ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಸೂದೆಯು ಮೊದಲ ಹೆಜ್ಜೆಯಾಗಿದ್ದು ಅವುಗಳನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ಅಡಿ ತರುವ ಉದ್ದೇಶ ಹೊಂದಲಾಗಿದೆ.
Published on

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ಮಸೂದೆ 2019ಕ್ಕೆ ತಿದ್ದುಪಡಿ ಮಾಡಿ ಅದರ ವ್ಯಾಪ್ತಿಗೆ ಡಿಜಿಟಲ್‌ ಸುದ್ದಿ ಮಾಧ್ಯಮಗಳನ್ನು ತರುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಭಾರತದಲ್ಲಿ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳ ಮೇಲಿನ ನಿಯಂತ್ರಣ ಹೊಂದಿರುವ ಬ್ರಿಟಿಷರ ಕಾಲದ ಮಾಧ್ಯಮ ಮತ್ತು ಪುಸ್ತಕಗಳ ನೋಂದಣಿ ಕಾಯಿದೆಯನ್ನು ಮಸೂದೆಯ ಮೂಲಕ ಬದಲಾವಣೆ ಮಾಡಲಾಗುತ್ತಿದ್ದು, ಇದು ಡಿಜಿಟಲ್‌ ಸುದ್ದಿ ಮಾಧ್ಯಮಕ್ಕೆ ಸಂಬಂಧಿಸಿದ ಮೊದಲ ನಿಯಂತ್ರಣ ಕ್ರಮವಾಗಿದೆ.

ಮಸೂದೆಗೆ ಪ್ರಧಾನಿ ಕಾರ್ಯಾಲಯ ಮತ್ತು ಇತರೆ ಸಂಬಂಧಿತ ಇಲಾಖೆಗಳಿಂದ ಇನ್ನಷ್ಟೇ ಒಪ್ಪಿಗೆ ದೊರೆಯಬೇಕಿದೆ. ಕಾನೂನು ಅಸ್ತಿತ್ವಕ್ಕೆ ಬಂದ 90 ದಿನಗಳಲ್ಲಿ ಡಿಜಿಟಲ್‌ ಸುದ್ದಿ ಪ್ರಸಾರಕರು ನೋಂದಣಿಗೆ ಅರ್ಜಿ ಸಲ್ಲಿಸಬೇಕಿದೆ. ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳುವ ಅಧಿಕಾರ ಹೊಂದಿರುವ ಮಾಧ್ಯಮ ರಿಜಿಸ್ಟ್ರಾರ್‌ ಜನರಲ್‌ ಅವರಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬೇಕಿದೆ. ನೋಂದಣಿಯನ್ನು ರದ್ದುಪಡಿಸಿ, ದಂಡ ವಿಧಿಸುವ ಅಧಿಕಾರ ರಿಜಿಸ್ಟ್ರಾರ್‌ ಅವರಿಗಿದೆ.

ಅಲ್ಲದೆ, ಭಾರತೀಯ ಪತ್ರಿಕಾ ಮಂಡಳಿಯ ಮುಖ್ಯಸ್ಥರ ನೇತೃತ್ವದಲ್ಲಿ ದೂರುಗಳ ತೀರ್ಮಾನಕ್ಕೆ ಮೇಲ್ಮನವಿ ಮಂಡಳಿಯನ್ನು ರಚಿಸಲಾಗುತ್ತದೆ ಎಂದು ವರದಿಯಾಗಿದೆ. ಜುಲೈ 18ರಿಂದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗ ಮಸೂದೆಯನ್ನು ಸದನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Kannada Bar & Bench
kannada.barandbench.com