ಚುನಾವಣಾ ವೆಚ್ಚ ಮಿತಿಗೊಳಿಸುವುದು ಭ್ರಷ್ಟಾಚಾರ ನಿಯಂತ್ರಿಸುವ ಮೊದಲ ಹೆಜ್ಜೆ: ಕರ್ನಾಟಕ ಹೈಕೋರ್ಟ್‌

ಚುನಾವಣಾ ವೆಚ್ಚದ ಮಾಹಿತಿ ನೀಡಲಾಗಿಲ್ಲ ಎಂದು ಪುರಸಭೆ ಸದಸ್ಯರ ಆಯ್ಕೆ ಅನರ್ಹಗೊಳಿಸಿದ್ದನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.
Justice Krishna S Dixit and Karnataka HC
Justice Krishna S Dixit and Karnataka HC

ಚುನಾವಣಾ ವೆಚ್ಚದ ಮಾಹಿತಿ ನೀಡಲ್ಲ ಎಂದು ಅನರ್ಹಗೊಂಡಿದ್ದ ಪುರಸಭೆ ಮಾಜಿ ಸದಸ್ಯರು ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ (ಕೆ ಶ್ರೀನಿವಾಸ್‌ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಹ್ಯ ಚುನಾವಣಾ ಆಯೋಗ).

ಚುನಾವಣಾ ವೆಚ್ಚದ ದಾಖಲೆಯನ್ನು ಸಲ್ಲಿಸುವಂತೆ ಸೂಚಿಸುವುದು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಅಭ್ಯರ್ಥಿಗಳಿಗೆ ಹೊಣೆಗಾರಿಕೆ ನಿಗದಿಪಡಿಸುವುದಾಗಿದೆ ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.

“ಚುನಾವಣಾ ಪ್ರಕ್ರಿಯೆಯ ಶುದ್ಧತೆ ಕಾಪಾಡಲು ವಿಭಿನ್ನ ಬಗೆಯ ವಿಧಾನ ಅನುಸರಿಸಬೇಕಿದೆ. ಇದರಲ್ಲಿ ಹಣದ ಪ್ರಭಾವ ಕೊನೆಗಾಣಿಸುವುದು, ಕ್ರಿಮಿನಲ್‌ಗಳ ನುಸುಳುವಿಕೆ ತಪ್ಪಿಸುವುದು, ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಕಾರ್ಯಚಟುವಟಿಕೆಯಲ್ಲಿ ಕಠಿಣವಾದ ಹಣಕಾಸು ಪಾರದರ್ಶಕತೆ ಅಳವಡಿಸಿಕೊಳ್ಳುವುದು ಸೇರಿದೆ. ಭ್ರಷ್ಟಚಾರ ಮಿತಿಗೊಳಿಸಲು ಚುನಾವಣಾ ವೆಚ್ಚವನ್ನು ನಿಯಂತ್ರಿಸುವುದು ಮೊದಲ ಹೆಜ್ಜೆಯಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ನಿಗದಿತ 30 ದಿನಗಳಲ್ಲಿ ಚುನಾವಣಾ ವೆಚ್ಚವನ್ನು ಸಲ್ಲಿಸಲು ಪುರಸಭೆ ಸದಸ್ಯರು ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಅರ್ಜಿದಾರರನ್ನು ಅನರ್ಹಗೊಳಿಸಿತ್ತು.

ಕರ್ನಾಟಕ ಪುರಸಭೆ ಕಾಯಿದೆಯ ಸೆಕ್ಷನ್‌ 16ಸಿ ಪ್ರಕಾರ (ಚುನಾವಣಾ ವೆಚ್ಚ ದಾಖಲೆ ಸಲ್ಲಿಸಲು ವಿಫಲ) ಚುನಾಯಿತ ಸದಸ್ಯರು ನ್ಯಾಯಸಮ್ಮತವಾಗಿ ಚುನಾವಣಾ ವೆಚ್ಚದ ಮಾಹಿತಿಯನ್ನು 30 ದಿನಗಳ ಒಳಗಾಗಿ ಚುನಾವಣಾಧಿಕಾರಿಗೆ ಸಲ್ಲಿಸಲು ವಿಫಲವಾದರೆ ಅಂಥವರನ್ನು ಅನರ್ಹಗೊಳಿಸಬಹುದಾಗಿದೆ ಎಂದು ಹೇಳುತ್ತದೆ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

Also Read
ಬುದ್ದಿಮಾಂದ್ಯ ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಮಹಿಳೆಯ ಜೀವಹರಣ; ಪತಿ, ಅತ್ತೆ, ನಾದಿನಿ ಅಪರಾಧಿಗಳು ಎಂದ ಹೈಕೋರ್ಟ್‌

ಕರ್ನಾಟಕ ಪುರಸಭೆ ಕಾಯಿದೆ ಸೆಕ್ಷನ್‌ 16ಸಿ, ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್‌ 77(1) (ಚುನಾವಣಾ ವೆಚ್ಚದ ಖಾತೆ ವಿವರ), ಸೆಕ್ಷನ್‌ 78 (ಜಿಲ್ಲಾ ಚುನಾವಣಾಧಿಕಾರಿಗೆ ಚುನಾವಣಾ ವೆಚ್ಚದ ವಿವರ ಸಲ್ಲಿಕೆ) ಜೊತೆಗೆ ಚುನಾವಣಾ ನಿಯಮಗಳ ಸಂಹಿತೆ ನಿಯಮ 86ಕ್ಕೆ ಪೂರಕವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ನಿಬಂಧನೆಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಲಂಚ ನಿಯಂತ್ರಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ.

ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸದಲ್ಲಿ ನಿರತವಾಗಿದ್ದು, ಚುನಾವಣಾ ವೆಚ್ಚದ ದಾಖಲೆ ಸಲ್ಲಿಸಬೇಕೆಂಬ ಮಾಹಿತಿ ಇರಲಿಲ್ಲ ಎಂಬ ಅರ್ಜಿದಾರರ ವಾದವನ್ನು ಏಕಸದಸ್ಯ ಪೀಠವು ಪುರಸ್ಕರಿಸಿಲ್ಲ. ಸಕಾರಣವಿಲ್ಲದೆ ಈ ವಿನಾಯಿತಿ ಕೋರಿಕೆಯು ತಪ್ಪು ಪೀಠಿಕೆ ಹಾಕುವುದರ ಜೊತೆಗೆ ದುರ್ಬಳಕೆಗೆ ನಾಂದಿಯಾಗಬಹುದು ಎಂದು ಪೀಠ ಹೇಳಿದ್ದು, ಅರ್ಜಿದಾರರ ಪ್ರತಿಕ್ರಿಯೆಯನ್ನು ಗಿಳಿ ಪಾಠ ಎಂದು ವಜಾ ಮಾಡಿದೆ.

Related Stories

No stories found.
Kannada Bar & Bench
kannada.barandbench.com