ನೆಲವಾಗಿಲು ಗ್ರಾಮಸ್ಥರಿಗೆ ಪುನರ್ವಸತಿ: ಸೂಕ್ತ ಆದೇಶ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ; ಮನವಿ ಇತ್ಯರ್ಥ

ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮಸ್ಥರಿಗೆ ಕೊಡಿಯಾಲದಲ್ಲಿ ಪುನರ್ವಸತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 1993ರಲ್ಲಿ ಆದೇಶ ಹೊರಡಿಸಿದ್ದರೂ ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.
High Court of Karnataka
High Court of Karnataka

ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮವನ್ನು ಅದೇ ಜಿಲ್ಲೆಯ ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ವಿಚಾರ ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮಸ್ಥರಿಗೆ ಕೊಡಿಯಾಲದಲ್ಲಿ ಪುನರ್ವಸತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 1993ರಲ್ಲಿ ಆದೇಶ ಹೊರಡಿಸಿದ್ದರೂ ಇದುವರೆಗೂ ಯಾವುದೇ ಕ್ರಮವಾಗದಿರುವುದರ ಕುರಿತು ರೇಣುಕಾ ಹಾಗೂ ಮತ್ತಿರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರು ತಮ್ಮ ಕುಂದುಕೊರತೆ ಕುರಿತು ರಾಜ್ಯ ಸರ್ಕಾರಕ್ಕೆ ಹೊಸದಾಗಿ ಮನವಿ ಪತ್ರ ಸಲ್ಲಿಸಬೇಕು. ಆ ಮನವಿ ಪತ್ರ ಸಲ್ಲಿಸಿದ ದಿನದಿಂದ ಮುಂದಿನ ಮೂರು ತಿಂಗಳ ಒಳಗೆ ಸರ್ಕಾರವು ಅರ್ಜಿದಾರರ ಕುಂದುಕೊರತೆ ಆಲಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ ಪೀಠವು ಮನವಿ ಇತ್ಯರ್ಥಪಡಿಸಿದೆ.

ಹರಿಹರ ಪಾಲಿ ಫೈಬರ್ ಕಂಪೆನಿಯಿಂದ ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ನೆಲವಾಗಿಲು ಗ್ರಾಮಸ್ಥರಿಗೆ ಕೊಡಿಯಾಲ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಒಟ್ಟು 432 ಮನೆಗಳನ್ನು ಕೊಡಿಯಾಲಯದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿ, ನೆಲವಾಗಿಲು ಗ್ರಾಮದ ಸ್ಥಳಾಂತರಕ್ಕೆ ಸರ್ಕಾರ 1993ರಲ್ಲಿ ಆದೇಶ ಹೊರಡಿಸಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

Also Read
[ನೆಲವಾಗಿಲು ಪುನರ್ವಸತಿ] ಹಂಚಿಕೆಯಾಗಿದ್ದ ಮನೆಗಳನ್ನು ಫಲಾನುಭವಿಗಳು ಮಾರಿರುವ ಬಗ್ಗೆ ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಕಂಪೆನಿಯು ಆರಂಭದಲ್ಲಿ ಯೋಜನೆ ಜಾರಿಗೆ 2.61 ಕೋಟಿ ರೂಪಾಯಿ ಠೇವಣಿ ಇಟ್ಟಿತ್ತು. ಮನೆ ನಿರ್ಮಾಣ ಕಾಮಗಾರಿ ವೆಚ್ಚ ಹೆಚ್ಚಳವಾದ ಕಾರಣಕ್ಕೆ ಆರಂಭದಲ್ಲಿ ನೀಡಿದ್ದ 2.61 ಕೋಟಿ ರೂಪಾಯಿ ಸೇರಿದಂತೆ ಒಟ್ಟು 10 ಕೋಟಿ ಹಣ ಪುನರ್ವಸತಿ ಯೋಜನೆಗೆ ನೀಡುವಂತೆ 2017ರಲ್ಲಿ ಹೈಕೋರ್ಟ್ ಕಂಪೆನಿಗೆ ಆದೇಶಿಸಿತ್ತು. ಆದರೆ, ಯೋಜನೆ ಜಾರಿಗೆ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದ್ದ ಅರ್ಜಿದಾರರು, ಪುನರ್ವಸತಿ ಯೋಜನೆ ಜಾರಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಅರ್ಜಿದಾರರ ಕಂದುಕೊರತೆ ಆಲಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು. ಆದರೆ, ಪ್ರಕರಣದ ಸಂಬಂಧ ಹರಿಹರ ಪಾಲಿ ಫೈಬರ್ ಕಂಪೆನಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ಮನವಿ ಇತ್ಯರ್ಥಪಡಿಸಿದೆ.

Related Stories

No stories found.
Kannada Bar & Bench
kannada.barandbench.com