ಕಾರ್ಮಿಕ ವ್ಯಾಜ್ಯಗಳಲ್ಲಿ ವೇತನ ಸಹಿತವಾಗಿ ಕೆಲಸಕ್ಕೆ ಮರುನೇಮಕ ಮಾಡುವುದು ಸ್ವಯಂಚಾಲಿತ ಪರಿಹಾರವಲ್ಲ: ದೆಹಲಿ ಹೈಕೋರ್ಟ್

ಕೆಲ ವೇಳೆ ಕಾರ್ಮಿಕರನ್ನು ಕೆಲಸಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವಂತೆ ಆದೇಶಿಸುವ ಬದಲು ಸಮರ್ಪಕ ಪರಿಹಾರ ಕೂಡ ಪಾವತಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
Delhi High Court
Delhi High Court
Published on

ಕೈಗಾರಿಕಾ ವ್ಯಾಜ್ಯ ಕಾಯಿದೆ- 1947ರ ಅಡಿ ಕಾರ್ಮಿಕ ನಿಯಮಾವಳಿ ಉಲ್ಲಂಘಿಸಿರುವ ಪ್ರಕರಣಗಳಲ್ಲಿ ವೇತನ ಸಹಿತವಾಗಿ ಕಾರ್ಮಿಕರನ್ನು ಕೆಲಸಕ್ಕೆ ಮರುನೇಮಕ ಮಾಡಲು ಅನುಮತಿಸುವುದು ಸ್ವಯಂಚಾಲಿತವಾಗಿ ನೀಡುವ ಪರಿಹಾರವಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಮನೋಜ್ ಕುಮಾರ್ ನಡುವಣ ಪ್ರಕರಣ].

ಕೆಲ ವೇಳೆ ಕಾರ್ಮಿಕರನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳುವಂತೆ ಆದೇಶಿಸುವ ಬದಲು ಸೂಕ್ತ ಪರಿಹಾರ ಕೂಡ ಪಾವತಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Also Read
[ಪರಿಹಾರ ಪಾವತಿ] ಕಾರ್ಮಿಕ ಪರಿಹಾರ ಆಯುಕ್ತರ ಮುಂದೆ ಹಣ ಠೇವಣಿ ಇಟ್ಟಮಾತ್ರಕ್ಕೆ ಹೊಣೆಗಾರಿಕೆ ಪೂರ್ಣವಲ್ಲ: ಹೈಕೋರ್ಟ್‌

ಮರುನೇಮಕ ಎಂಬುದು ಉದ್ಯೋಗಿಯನ್ನು ತಪ್ಪಾಗಿ ವಜಾಗೊಳಿಸಿದ್ದ ನಡೆಯನ್ನು ಸರಿಪಡಿಸುವ ಕ್ರಿಯೆಯಾಗಿದ್ದು, ಉದ್ಯೋಗಿಯನ್ನು ಈ ಹಿಂದಿನ ಸ್ಥಾನಕ್ಕೆ ಅದೇ ನಿಯಮಾವಳಿ, ಷರತ್ತುಗಳಡಿಯಲ್ಲಿ ಮರುಸ್ಥಾಪಿಸುವುದಾಗಿದೆ. ಆದರೆ ಕಾರ್ಮಿಕ ವ್ಯಾಜ್ಯಗಳಲ್ಲಿ ವೇತನ ಸಹಿತವಾಗಿ ಕೆಲಸಕ್ಕೆ ಮರುಸೇರ್ಪಡೆ ಮಾಡುವ ಸಾಮಾನ್ಯ ತತ್ವಗಳು ಎಲ್ಲಾ ಪ್ರಕರಣಗಳಲ್ಲಿಯೂ ಸ್ವಯಂಚಾಲಿತವಾಗಿ ಒದಗುವ ಪರಿಹಾರವಲ್ಲ ಮತ್ತು ಕೆಲ ವೇಳೆ ಕಾರ್ಮಿಕರನ್ನು ಕೆಲಸಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವಂತೆ ಆದೇಶಿಸುವ ಬದಲು ಸಾಕಷ್ಟು ಪರಿಹಾರ ಕೂಡ ಪಾವತಿಸಬಹುದಾಗಿದೆ ಎಂಬುದು ಅನೇಕಾನೇಕ ತೀರ್ಪುಗಳ ಮೂಲಕ ಈಗಾಗಲೇ ಸ್ಥಾಪಿತವಾಗಿರುವ ನ್ಯಾಯತತ್ವವಾಗಿದೆ" ಎಂಬುದಾಗಿ ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ತಾತ್ಕಾಲಿಕ ಆಧಾರದ ಮೇಲೆ ಕಸ ಗುಡಿಸುವ ಹುದ್ದೆಗೆ ಸೇರಿಕೊಂಡಿದ್ದ ಮನೋಜ್ ಕುಮಾರ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೈಗಾರಿಕಾ ನ್ಯಾಯಮಂಡಳಿ ಹಾಗೂ ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್‌ ಈ ತೀರ್ಪು ನೀಡಿದೆ.

ಬ್ಯಾಂಕ್‌ನಿಂದ ವಜಾಗೊಂಡಿದ್ದ ನೌಕರ ಮನೋಜ್‌ ಅವರು ತನ್ನ ಸೇವೆ ಕಾಯಂಗೊಳಿಸುವಂತೆ ಮತ್ತು ಬಾಕಿ ವೇತನದೊಂದಿಗೆ ತಮ್ಮನ್ನು ಕೆಲಸಕ್ಕೆ ಮರುಸೇರ್ಪಡೆಗೊಳಿಸುವಂತೆ ಕೋರಿ ನ್ಯಾಯಮಂಡಳಿಯೆದುರು ಕಾರ್ಮಿಕ ಮೊಕದ್ದಮೆ ದಾಖಲಿಸಿದ್ದರು.

ಮನೋಜ್‌  ಅವರ ಮನವಿಯನ್ನು  ಭಾಗಶಃ ಅಂಗೀಕರಿಸಿದ್ದ ನ್ಯಾಯಮಂಡಳಿ. ಅವರನ್ನು ಸೇವೆಯಿಂದ ವಜಾಗೊಳಿಸಿರುವುದು ಕಾನೂನುಬಾಹಿರ ಮತ್ತು ಅವರು ಪೂರ್ಣ ಬಾಕಿ ವೇತನ ಪಡೆದು ಕೆಲಸಕ್ಕೆ ಮರುಸೇರ್ಪಡೆಯಾಗಲು ಅರ್ಹರು ಎಂದಿತ್ತು. ಇದನ್ನು ಬ್ಯಾಂಕ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.  

ಇದೇ ವೇಳೆ ತಮ್ಮನ್ನು ಕಾಯಂಗೊಳಿಸುವಂತೆ ಮಾಡಿದ್ದ ಮನವಿಯನ್ನು ನ್ಯಾಯಮಂಡಳಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ತೀರ್ಪನ್ನು ಮನೋಜ್‌ ಅವರೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಅಕ್ಟೋಬರ್ 16 ರಂದು ನೀಡಿದ ಸಾಮಾನ್ಯ ಆದೇಶದಲ್ಲಿ ಎರಡೂ ವಿಷಯಗಳ ಕುರಿತು ಹೈಕೋರ್ಟ್ ತೀರ್ಪು ನೀಡಿದೆ.

Also Read
ಹಿರಿಯ ವಕೀಲ, ಕಾರ್ಮಿಕ ಮುಖಂಡ ಸುಬ್ಬರಾವ್ ನಿಧನ

ಮನೋಜ್‌ ಅವರನ್ನು ಸೇವೆಯಿಂದ ವಜಾಗೊಳಿಸಿದ್ದು ಕಾನೂನುಬಾಹಿರ ಎಂದು ನ್ಯಾಯಾಲಯ ಒಪ್ಪಿಕೊಂಡಿತಾದರೂ ಅವರನ್ನು ಮತ್ತೆ ಸೇವೆಗೆ ಸೇರ್ಪಡೆ ಮಾಡುವ ಬದಲಿಗೆ ಸಾಕಷ್ಟು ವಿತ್ತೀಯ ಪರಿಹಾರ ನೀಡಬಹುದು ಎಂದು ತೀರ್ಮಾನಿಸಿತು. ಅದರಂತೆ ಮನೋಜ್ ಕುಮಾರ್‌ಗೆ ₹ 2.5 ಲಕ್ಷ ಪರಿಹಾರ ನೀಡುವಂತೆ ಬ್ಯಾಂಕ್‌ಗೆ ನ್ಯಾಯಾಲಯ ಆದೇಶಿಸಿತು.

ಮತ್ತೊಂದಡೆ ಸರ್ಕಾರಿ ಕೆಲಸಕ್ಕೆ ಸೂಕ್ತ ನೇಮಕಾತಿಯಾಗಿದ್ದರೆ ಮಾತ್ರ ಕಾಯಂ ಮಾಡಲು ಸಾಧ್ಯವಿದ್ದು ಈ ಪ್ರಕರಣದಲ್ಲಿ ಮನೋಜ್‌ ಅವರು ಅಕ್ರಮವಾಗಿ ನೇಮಕವಾಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಮತ್ತು ಅವರಿಗೆ ಯಾವುದೇ ಅಧಿಕೃತ ನೇಮಕಾತಿ ಪತ್ರ ನೀಡದಿರುವ ಕಾರಣಕ್ಕೆ ಸೇವೆ ಕಾಯಂಗೊಳಿಸಲು ಅವರು ಅರ್ಹರಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

Kannada Bar & Bench
kannada.barandbench.com