'ಆಪರೇಷನ್ ಸಿಂಧೂರ್' ಹೆಸರಿನ ವಾಣಿಜ್ಯ ಚಿಹ್ನೆ ಕೋರಿಕೆ: ರಿಲಯನ್ಸ್, ದೆಹಲಿ ಮೂಲದ ವಕೀಲರ ಸಹಿತ ನಾಲ್ಕು ಅರ್ಜಿ ಸಲ್ಲಿಕೆ

ರಿಲಯನ್ಸ್, ಮುಖೇಶ್ ಚೇತ್ರಮ್ ಅಗರವಾಲ್, ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್ ಹಾಗೂ ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
Operation Sindoor
Operation Sindoor
Published on

ಭಯೋತ್ಪಾದಕರ ನಿಗ್ರಹಕ್ಕಾಗಿ ಭಾರತೀಯ ಸೇನಾಕಾರ್ಯಾಚರಣೆ 'ಆಪರೇಷನ್‌ ಸಿಂಧೂರ್‌ʼ ಹೆಸರು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಆ ಹೆಸರಿನ ಬಳಕೆ ಕೋರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೊದಲ ವಾಣಿಜ್ಯ ಚಿಹ್ನೆ ಅರ್ಜಿಯನ್ನು ಕಂಟ್ರೋಲರ್‌ ಜನರಲ್‌ ಆಫ್‌ ಪೇಟೆಂಟ್ಸ್‌ ಡಿಸೈನ್‌ ಅಂಡ್‌ ಟ್ರೇಡ್‌ಮಾರ್ಕ್ಸ್‌ಗೆ ಸಲ್ಲಿಸಿದೆ.

ಅದಾಗಿ 24 ಗಂಟೆ ಕಳೆಯುವುದರೊಳಗೆ ತಮಗೆ ಆ ಹೆಸರಿನ ಮೇಲೆ ವಿಶೇಷ ಹಕ್ಕು ನೀಡುವಂತೆ ಕೋರಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು ಮನರಂಜನೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮಾಧ್ಯಮ ಸೇವೆಗಳನ್ನು ಒಳಗೊಂಡಿರುವ ವರ್ಗ 41ರ ಅಡಿಯಲ್ಲಿ ಮನವಿ ಮಾಡಲಾಗಿದೆ.

ಮೇ 7, 2025 ರಂದು ಬೆಳಿಗ್ಗೆ 10:42ರಿಂದ ಸಂಜೆ 6:27ರ ನಡುವೆ ರಿಲಯನ್ಸ್ ಸಂಸ್ಥೆ, ಮುಂಬೈ ನಿವಾಸಿ ಮುಖೇಶ್ ಚೆತ್ರಮ್ ಅಗರವಾಲ್, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್‌ ಹಾಗೂ ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ಅರ್ಜಿಯಲ್ಲಿಯೂ ಆ ಹೆಸರನ್ನು ವಾಣಿಜ್ಯ ಉದ್ದೇಶಗಳಿಗಾಗಿ ʼಬಳಸುವ ಪ್ರಸ್ತಾಪವಿದೆʼ ಎಂದು ಹೇಳಲಾಗಿದೆ.

Also Read
ಪಹಲ್ಗಾಮ್‌ ದಾಳಿ: ತನಿಖೆಗೆ ಕೋರಿದ್ದ ಪಿಐಎಲ್‌ ವಿಚಾರಣೆಗೆ ನಕಾರ, ಸೇನಾ ಪಡೆಗಳ ಸ್ಥೈರ್ಯ ಕುಗ್ಗಿಸಬಾರದು ಎಂದ ಸುಪ್ರೀಂ

ಭಾರತದ ಗಡಿಯಾಚೆಗಿನ ಸೇನಾ ದಾಳಿಗೆ ಇಡಲಾಗಿರುವ ಆಪರೇಷನ್‌ ಸಿಂಧೂರ್‌ ಹೆಸರು ದೇಶದ ಗಮನ ಸೆಳೆದಿದೆ. "ಸಿಂಧೂರ್" ಎಂಬುದು ತ್ಯಾಗ ಮತ್ತು ಶೌರ್ಯದ ಸಾಂಪ್ರದಾಯಿಕ ಭಾರತೀಯ ಕಲ್ಪನೆಯನ್ನು ಹೇಳುತ್ತದೆ. ಪ್ರಬಲ ಭಾವನಾತ್ಮಕ ಮತ್ತು ದೇಶಭಕ್ತಿಯನ್ನು ಹೆಸರು ಸಂಕೇತಿಸುವುದರಿಂದ ಚಲನಚಿತ್ರ, ಮಾಧ್ಯಮ ಮತ್ತು ಸಾರ್ವಜನಿಕ ಸಂವಾದಗಳಲ್ಲಿ ಬಳಸಲಾಗುತ್ತಿದ್ದ ಈ ಪದಗುಚ್ಛ ಇದೀಗ ವಾಣಿಜ್ಯ ಚಿಹ್ನೆಯ ಬೇಡಿಕೆ ಪಡೆದಿದೆ.

Also Read
ಪಹಲ್ಗಾಮ್‌ ದಾಳಿ: ತನಿಖೆಗೆ ಕೋರಿದ್ದ ಪಿಐಎಲ್‌ ವಿಚಾರಣೆಗೆ ನಕಾರ, ಸೇನಾ ಪಡೆಗಳ ಸ್ಥೈರ್ಯ ಕುಗ್ಗಿಸಬಾರದು ಎಂದ ಸುಪ್ರೀಂ

ನಾಲ್ವರು ಅರ್ಜಿದಾರರು ನೈಸ್ ವರ್ಗೀಕರಣದ 41 ನೇ ವರ್ಗದ ಅಡಿಯಲ್ಲಿ ಶಿಕ್ಷಣ ಮತ್ತು ತರಬೇತಿ ಸೇವೆ; ಚಲನಚಿತ್ರ ಮತ್ತು ಮಾಧ್ಯಮ ನಿರ್ಮಾಣ; ನೇರ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳು; ಡಿಜಿಟಲ್ ವಸ್ತು ವಿಷಯ ವಿತರಣೆ ಮತ್ತು ಪ್ರಕಟಣೆ; ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ

ಈ ವರ್ಗವನ್ನು ಹೆಚ್ಚಾಗಿ ಒಟಿಟಿ ವೇದಿಕೆಗಳು, ನಿರ್ಮಾಣ ಸಂಸ್ಥೆಗಳು, ಪ್ರಸಾರಕರು ಮತ್ತು ಈವೆಂಟ್ ಕಂಪನಿಗಳು ಬಳಸುತ್ತವೆ - "ಆಪರೇಷನ್ ಸಿಂಧೂರ್" ಶೀಘ್ರದಲ್ಲೇ ಚಲನಚಿತ್ರ ಶೀರ್ಷಿಕೆ, ವೆಬ್ ಸರಣಿ ಅಥವಾ ಸಾಕ್ಷ್ಯಚಿತ್ರ ಬ್ರ್ಯಾಂಡ್ ಆಗಬಹುದು ಎಂಬುದನ್ನು ಅರ್ಜಿ ಸಲ್ಲಿಕೆಯ ಬೆಳವಣಿಗೆ ಸೂಚಿಸುತ್ತದೆ.

Kannada Bar & Bench
kannada.barandbench.com