ದಾನದ ನೆಪದಲ್ಲಿ ಧಾರ್ಮಿಕ, ದತ್ತಿ ಸಂಸ್ಥೆಗಳಿಂದ ಸಂಪತ್ತು ಸಂಗ್ರಹ; ನಿಯಂತ್ರಣಕ್ಕೆ ಕಾನೂನು ಅಗತ್ಯ: ಕೇರಳ ಹೈಕೋರ್ಟ್‌

ಭಾರತದಲ್ಲಿ ದತ್ತಿ ಸಂಸ್ಥೆಗಳನ್ನು ನಿಯಂತ್ರಿಸುವ ಕೇಂದ್ರ ಮಟ್ಟದಲ್ಲಿ ಒಂದೇ ಒಂದು ಶಾಸನವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Kerala High Court
Kerala High Court

ದಾನ-ಧರ್ಮದ ನೆಪದಲ್ಲಿ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳು ಸಂಪತ್ತನ್ನು ಸಂಗ್ರಹಿಸುತ್ತಿದ್ದು, ಇಂಥ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸಲು ದೇಶದುದ್ದಗಲಕ್ಕೂ ಅನ್ವಯವಾಗುವ ಕಠಿಣವಾದ ಕೇಂದ್ರೀಯ ಕಾನೂನಿನ ಅಗತ್ಯವಿದೆ ಎಂದು ಕೇರಳ ಹೈಕೋರ್ಟ್‌ ಗುರುವಾರ ಹೇಳಿದೆ.

2018ರ ಚರ್ಚ್‌ ಹಗರಣಕ್ಕೆ ಸಂಬಂಧಿಸಿದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪಿ ಸೋಮರಾಜನ್‌ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಆಸ್ತಿ ಮತ್ತು ಸಂಪತ್ತು ಸಂಗ್ರಹಿಸಲು ʼದಾನʼ ಎಂಬ ಪದವನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಇಲ್ಲಿ ಸಂಗ್ರಹಿಸಲಾದ ಸಂಪತ್ತು ಯಾವುದೇ ಪ್ರಾಧಿಕಾರದ ಹೊಣೆಗಾರಿಕೆಗೂ ಒಳಪಟ್ಟಿಲ್ಲ. ಭಾರತ ಸಂವಿಧಾನದ 19(1)(ಸಿ) ನೇ ವಿಧಿಯು ಎಲ್ಲಾ ಪ್ರಜೆಗಳಿಗೂ ಸಂಘಟನೆ ಅಥವಾ ಒಕ್ಕೂಟ ಮಾಡಿಕೊಳ್ಳುವ ಹಕ್ಕು ಖಾತರಿಪಡಿಸಿದೆ. ಅಪಾರ ಪ್ರಮಾಣದ ಆಸ್ತಿ ಮತ್ತು ಸಂಪತ್ತನ್ನು ದಾನದ ಹೆಸರಿನಲ್ಲಿ ವಶಪಡಿಸಿಕೊಳ್ಳುತ್ತಿರುವಾಗ ಇದು ಯಾವುದೇ ಕಾನೂನಿನ ಮಾನ್ಯತೆಗೆ ಒಳಪಡಬಾರದು ಎಂದಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ದತ್ತಿ ಸಂಸ್ಥೆಗಳು ಮತ್ತು ಅವುಗಳ ಕೆಲಸವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಮಟ್ಟದಲ್ಲಿ ಶಾಸನದ ಅನಿವಾರ್ಯ ಅಗತ್ಯವನ್ನು ಇದು ತೋರಿಸುತ್ತದೆ” ಎಂದು ಪೀಠ ಹೇಳಿದೆ.

“ಭಾರತ ಸಂವಿಧಾನದ VIIನೇ ಷೆಡ್ಯೂಲ್‌ನ ಸಮವರ್ತಿ ಪಟ್ಟಿಯ ಸಂಖ್ಯೆ 28ರಲ್ಲಿ ಉಲ್ಲೇಖಿಸಲಾಗಿರುವ ದತ್ತಿ ಮತ್ತು ಧಾರ್ಮಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಸುಧಾರಣೆ, ಆದಾಯಕ್ಕೆ ಸಂಬಂಧಿಸಿದ ವಿಚಾರಗಳ ಪರಿಹಾರಕ್ಕಾಗಿ ಕೇಂದ್ರೀಕೃತ ಸಂಸ್ಥೆ ಹುಟ್ಟುಹಾಕಲು ಕೇಂದ್ರ ಮಟ್ಟದಲ್ಲಿ ಏಕರೂಪದ ಶಾಸನ ರೂಪಿಸುವ ನಿಟ್ಟಿನಲ್ಲಿ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ಆ ಉದ್ದೇಶಕ್ಕಾಗಿ ಕೇಂದ್ರೀಕೃತ ಪಡೆ/ಸಂಸ್ಥೆ ಹುಟ್ಟು ಹಾಕುವ ಸಾಧ್ಯತೆಯನ್ನು ಕೇಂದ್ರ ಸರ್ಕಾರವು ಪರಿಶೀಲಿಸಬಹುದು” ಎಂದು ಆದೇಶದಲ್ಲಿ ವಿವರಿಸಲಾಗಿದೆ."

Related Stories

No stories found.
Kannada Bar & Bench
kannada.barandbench.com