ಸ್ಥಳಾಂತರ, ಸಾವನ್ನಪ್ಪಿದವರ ಹೆಸರು ಕೈಬಿಡಲು ಕೋರಿಕೆ: ಕ್ರಮಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಸೂಚನೆ

ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರ, ನಿಯಮಗಳು ಮತ್ತು ಪ್ರಜಾ ಪ್ರತಿನಿಧಿ ಕಾಯಿದೆಯ ಅನುಸಾರ ಸೂಕ್ತ ಪರಿಶೀಲನೆ ನಡೆಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು. ಈ ಕುರಿತ ನಿರ್ಧಾರವನ್ನು ಇದೇ 26ರ ಒಳಗೆ ತೆಗೆದುಕೊಳ್ಳಬೇಕು ಎಂದ ಪೀಠ.
Karnataka High Court
Karnataka High Court

ಶಿವಾಜಿನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಕೋರಲಾದ ಆಕ್ಷೇಪಣೆಗೆ ಸಂಬಂಧಿಸಿದಂತೆ 12 ದಿನಗಳಲ್ಲಿ ಪ್ರಜಾ ಪ್ರತಿನಿಧಿ ಕಾಯಿದೆ ಮತ್ತು ನಿಯಮಗಳ ಅನುಸಾರ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಶಿವಾಜಿನಗರದ ಬಿಜೆಪಿಯ ಬೂತ್‌ ಮಟ್ಟದ ಪ್ರತಿನಿಧಿ ಎಂ ಜಿ ಪ್ರದೀಪ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರ, ನಿಯಮಗಳು ಮತ್ತು ಪ್ರಜಾ ಪ್ರತಿನಿಧಿ ಕಾಯಿದೆಯ ಅನುಸಾರ ಸೂಕ್ತ ಪರಿಶೀಲನೆ ನಡೆಸಿ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು. ಈ ಕುರಿತ ನಿರ್ಧಾರವನ್ನು ಇದೇ 26ರಂದು ಅಥವಾ ಅದಕ್ಕೂ ಮೊದಲು ತೆಗೆದುಕೊಳ್ಳಬೇಕು ಎಂದು ಆಯೋಗಕ್ಕೆ ಆದೇಶಿಸಿದ ಪೀಠವು ಅರ್ಜಿ ವಿಲೇವಾರಿ ಮಾಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್‌ ರೆಡ್ಡಿ ಅವರು ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯೊಂದರಲ್ಲೇ 26 ಸಾವಿರದಷ್ಟು ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಹೆಸರುಗಳು ಪಟ್ಟಿಯಲ್ಲಿವೆ. ಅಂತೆಯೇ, ಶಾಂತಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ಸಾವಿರದಷ್ಟು ಇಂತಹ ಮತದಾರರ ಹೆಸರುಗಳಿವೆ. ಈ ಕುರಿತ ಮನವಿಗಳನ್ನು ಪರಿಗಣಿಸಿ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು, ಈ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ನಿರ್ದೇಶಿಸಬೇಕು ಎಂದು ಕೋರಿದರು.

ಶಾಸಕ ರಿಜ್ವಾನ್‌ ಅರ್ಷದ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶಶಿಕಿರಣ ಶೆಟ್ಟಿ ಅವರು 2023ರ ಜನವರಿ 15ರಂದು ಮತದಾರರ ಪಟ್ಟಿಯನ್ನು ಆಖೈರುಗೊಳಿಸಲಾಗಿದೆ. ನಿಯಮಗಳು ಮತ್ತು ಕಾಯಿದೆಯ ಅನುಸಾರ ಆರು ತಿಂಗಳಿಗೂ ಮುನ್ನ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಬರುವುದಿಲ್ಲ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.

ಶಾಂತಿನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್‌ನಲ್ಲಿ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿದ್ದ ಅರ್ಜಿದಾರರು, ಇಲ್ಲಿ ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಸಂಖ್ಯೆ ಒಟ್ಟು 8 ಸಾವಿರದಷ್ಟಿದೆ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗವು ಎಂಟು ಸಾವಿರ ಮತದಾರರ ಪೈಕಿ 2,773 ಮತದಾರರು ವರ್ಗಾವಣೆಯಾಗಿರುವ ಅಥವಾ ಮರಣ ಹೊಂದಿರುವುದಾಗಿ ಕಂಡುಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿತ್ತು.

ಅಂತೆಯೇ, ಶಿವಾಜಿನಗರದಲ್ಲಿ ಪಟ್ಟಿ ಮಾಡಲಾಗಿರುವ 26 ಸಾವಿರದಷ್ಟು ಮತದಾರರು ಸ್ಥಳಾಂತರಗೊಂಡಿದ್ದಾರೆ ಅಥವಾ ಮರಣ ಹೊಂದಿದ್ದಾರೆ ಎನ್ನಲಾದ ಆಕ್ಷೇಪಣೆಯಲ್ಲಿ 11 ಸಾವಿರದಷ್ಟು ಮತದಾರರು ಮರಣ ಹೊಂದಿದ್ದಾರೆ ಮತ್ತು ಸ್ಥಳಾಂತರಗೊಂಡಿದ್ದಾರೆ. ಈ ದಿಸೆಯಲ್ಲಿ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಇನ್ನೂ ಪ್ರಾರಂಭಿಸಬೇಕಿದೆ ಎಂದು ಆಯೋಗವು ಪ್ರತಿಕ್ರಿಯಿಸಿತ್ತು.

Related Stories

No stories found.
Kannada Bar & Bench
kannada.barandbench.com