ಪಶುವೈದ್ಯ ಕೇಂದ್ರಗಳ ಸ್ಥಳಾಂತರ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರಗಳ ಗಡುವು ವಿಧಿಸಿದ ಹೈಕೋರ್ಟ್‌

ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರದಿಂದ ಸ್ಥಳೀಯ ರೈತರು ತಮ್ಮ ಪಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸ್ಥಿತಿ ಬಂದೊದಗಲಿದೆ ಎಂದು ಆಕ್ಷೇಪ.
Karnataka High Court
Karnataka High Court

ಬೆಂಗಳೂರು ನಗರ ಜಿಲ್ಲೆಯ ವಿವಿಧೆಡೆ 28 ಪಶುವೈದ್ಯ ಕೇಂದ್ರ ಸ್ಥಳಾಂತರ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಈ ಕುರಿತಾಗಿ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಗಡುವು ನೀಡಿದೆ.

ಅನಿಮಲ್ ರೈಟ್ಸ್ ಫಂಡ್ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಮತ್ತಿತರರು ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಗರದಲ್ಲಿ ಪ್ರತಿ ನಿತ್ಯ 600- 700 ಸಾಕು ಪ್ರಾಣಿಗಳು ಅನಾರೋಗ್ಯಕ್ಕೀಡಾಗುತ್ತವೆ. ಅವುಗಳಿಗೆ ಚಿಕಿತ್ಸೆ ನೀಡಬೇಕು. ಹೀಗಿರುವಾಗ ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರದಿಂದ ಸ್ಥಳೀಯ ರೈತರು ತಮ್ಮ ಪಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸ್ಥಿತಿ ಬಂದೊದಗಲಿದೆ. ಇದು ಸಾಮಾನ್ಯ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಈ ಕಾರಣಕ್ಕಾಗಿ ಪಶು ಚಿಕಿತ್ಸಾಲಯ ಸ್ಥಳಾಂತರ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ನೀಡಬೇಕು ಎಂದು ಪೀಠಕ್ಕೆ ಕೋರಿದರು. ಆಗ ಪೀಠವು ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಕಾಲವಕಾಶ ನೀಡುವುದಾಗಿ ತಿಳಿಸಿ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರವು 2022-23ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಕೇಂದ್ರಗಳ ಪ್ರಾರಂಭಕ್ಕೆ ನಿರ್ಧರಿಸಿದ್ದು, 2022ರ ಮೇ 17ರಂದು ಆದೇಶ ಹೊರಡಿಸಿದೆ. ಮೊದಲ ಹಂತದ ಭಾಗವಾಗಿ 20 ಪಶು ವೈದ್ಯಕೀಯ ಕೇಂದ್ರಗಳನ್ನು ಪ್ರಾರಂಭಿಸಿದೆ. ಈ ಆದೇಶ ಜಾರಿ ಮಾಡುವುದಕ್ಕೂ ಮುನ್ನ ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರದಿಂದ ಸ್ಥಳೀಯ ರೈತರು ತಮ್ಮ ಪಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸ್ಥಿತಿ ಬಂದೊದಗಲಿದೆ. ಈ ಕಾರಣಕ್ಕಾಗಿ ಪಶು ಚಿಕಿತ್ಸಾಲಯ ಸ್ಥಳಾಂತರ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಕಳೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಪಶುಸಂಗೋಪನಾ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರಿಗೆ ನೋಟಿಸ್  ಜಾರಿ ಮಾಡಿ ಪೀಠವು ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com