

“ಅರ್ಜಿದಾರರು ಜೀವಂತವಾಗಿದ್ದು, ಅವರ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣ ಪತ್ರ ರದ್ದುಪಡಿಸುತ್ತಿಲ್ಲ ಎಂದರೆ ಹೇಗೆ?” ಎಂದು ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ಬುಧವಾರದೊಳಗೆ ಮರಣ ಪ್ರಮಾಣ ಪತ್ರ ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು ಎಂದು ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿಗೆ ತಾಕೀತು ಮಾಡಿದೆ.
ಬೆಂಗಳೂರಿನ ಚಿಕ್ಕಪೇಟೆಯ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಯು 23.04.2025ರಂದು ನೀಡಿರುವ ತಾತ್ಕಾಲಿಕ ಮರಣ ಪ್ರಮಾಣ ಪತ್ರವನ್ನು ರದ್ದುಪಡಿಸಲು ನಿರ್ದೇಶಿಸಬೇಕು ಎಂದು ಕೋರಿ ಡಿ ಮೆಹಬೂಬ್ ಬಾಷಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರ ಬಾಷಾ ಪರ ವಕೀಲೆ ಓ ಅಶ್ವಿನಿ ಅವರು “ಅರ್ಜಿದಾರರು ಜೀವಂತವಾಗಿ ಬದುಕಿದ್ದರೂ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅರ್ಜಿದಾರರು ಬದುಕಿದ್ದಾರೆ ಅವರ ಪ್ಯಾನ್, ಆಧಾರ್ ಕಾರ್ಡ್ ಎಲ್ಲವೂ ಇದೆ ಎಂದು ಬಿಬಿಎಂಪಿಯು ಆಸ್ಪತ್ರೆಗೆ ತಿಳಿಸಿದೆ. ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಸಂಪರ್ಕಿಸಲಾಗಿದೆ. ಈಗ ಅರ್ಜಿದಾರರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದರು.
ಆಗ ಪೀಠವು “ಜನನ ಮತ್ತು ಮರಣಗಳ ನೋಂದಣಾಧಿಕಾರಿ ಅವರು ಬುಧವಾರದೊಳಗೆ ಮರಣ ಪ್ರಮಾಣಪತ್ರ ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮರಣ ಪ್ರಮಾಣ ಪತ್ರ ನೀಡಿರುವುದನ್ನು ರದ್ದುಪಡಿಸುವಂತೆ ಕಳೆದ ವರ್ಷ ಆದೇಶಿಸಲಾಗಿದೆ. ಇದನ್ನು ಪಾಲಿಸದೇ ಇರುವುದರಿಂದ ದಂಡ ಏಕೆ ವಿಧಿಸಬಾರದು” ಎಂದು ಸರ್ಕಾರವನ್ನು ಪ್ರಶ್ನಿಸಿತು.
ಸರ್ಕಾರದ ಪರ ವಕೀಲ ಆದಿತ್ಯ ಅವರು “ಸಮಸ್ಯೆಯನ್ನು ಪರಿಹರಿಸಲಾಗುವುದು” ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ 23.4.2025ರಂದು ನೀಡಲಾಗಿರುವ ಮರಣ ಪ್ರಮಾಣ ಪತ್ರವನ್ನು ಹಿಂಪಡೆಯದೇ ಇರುವುದರಿಂದ ಅವರು ಅನಿವಾರ್ಯವಾಗಿ ನ್ಯಾಯಾಲಯದ ಕದತಟ್ಟುವಂತಾಗಿದೆ. ಬುಧವಾರದೊಳಗೆ ಮರಣ ಪ್ರಮಾಣ ಪತ್ರ ನೀಡಿರುವುದನ್ನು ಹಿಂಪಡೆದು ನ್ಯಾಯಾಲಯಕ್ಕೆ ತಿಳಿಸಬೇಕು. ಜನನ ಮತ್ತು ಮರಣ ನೋಂದಣಾಧಿಕಾರಿಯು ಈ ಸಂಬಂಧ ವಿವರಣೆ ಸಲ್ಲಿಸಬೇಕು” ಎಂದು ಆದೇಶಿಸಿದೆ. ಅಲ್ಲದೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿ, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ, ಚಿಕ್ಕಪೇಟೆಯ ವೈದ್ಯಾಧಿಕಾರಿ, ಬಿಬಿಎಂಪಿಯ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.