ಅಕ್ರಮ ಫ್ಲೆಕ್ಸ್‌, ಹೋರ್ಡಿಂಗ್‌: ಅನುಪಾಲನಾ ವರದಿ ಕಣ್ಣೊರೆಸುವ ತಂತ್ರ; ಬಿಬಿಎಂಪಿ, ಸರ್ಕಾರಕ್ಕೆ ದಂಡದ ಎಚ್ಚರಿಕೆ

ಬಿಬಿಎಂಪಿ ಕಾಯಿದೆ & ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯಿದೆಯಲ್ಲಿ ಕ್ರಮಕೈಗೊಳ್ಳಲು ಅವಕಾಶವಿದೆ. ಆದರೆ, ತಮ್ಮ ಕರ್ತವ್ಯದಿಂದ ವಿಮುಖರಾಗಲು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿ, ವಿನಾಯಿತಿ ಬಯಸುತ್ತಿದ್ದಾರೆ ಎಂದ ನ್ಯಾಯಾಲಯ.
BBMP and Karnataka HC
BBMP and Karnataka HC
Published on

ಬೆಂಗಳೂರಿನಲ್ಲಿ ಅಕ್ರಮ ಫ್ಲೆಕ್ಸ್‌/ಹೋರ್ಡಿಂಗ್‌ ಹಾವಳಿ ಅನಿಯಂತ್ರಿತವಾಗಿದ್ದು, ಬಿಬಿಎಂಪಿ ಅಸಹಾಯಕತೆ ಮತ್ತು ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿರುವುದಕ್ಕೆ ಕರ್ನಾಟಕ ಹೈಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮೂರು ವಾರಗಳ ಬಳಿಕ ಯಾವುದಾದರೂ ಅಕ್ರಮ ಫ್ಲೆಕ್ಸ್‌ ಅಥವಾ ಹೋರ್ಡಿಂಗ್‌ ಕಂಡುಬಂದರೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ ಒಂದು ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ಹೈಕೋರ್ಟ್‌ ಎಚ್ಚರಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಈ ಪಿಡುಗನ್ನು ನಿರ್ಮಾಲನೆ ಮಾಡಲು ಮೂರು ವಾರಗಳಲ್ಲಿ ಕಾರ್ಯ ಯೋಜನೆ ಸಲ್ಲಿಸುವಂತೆ ಬಿಬಿಎಂಪಿಗೆ ಆದೇಶಿಸಿದೆ.

ವಿಚಾರಣೆಯ ಸಂದರ್ಭದಲ್ಲಿ ಪೀಠವು “ಬಿಬಿಎಂಪಿ ಸಲ್ಲಿಸಿರುವ ಅನುಪಾಲನಾ ವರದಿಯು ಕಣ್ಣೊರೆಸುವ ತಂತ್ರ. ಇದನ್ನು ಅನುಪಾಲನಾ ಅಫಿಡವಿಟ್‌ ಎಂದು ಸಲ್ಲಿಸಿರುವ ಬಿಬಿಎಂಪಿ ಅಧಿಕಾರಿಗಳ ಧೈರ್ಯವು ಆಶ್ಚರ್ಯ ಉಂಟು ಮಾಡಿದೆ. ಕಾಗದದ ಕುದುರೆ ಓಡಿಸಲು ಬಿಬಿಎಂಪಿಗೆ ಖುಷಿಯಿದ್ದರಬಹುದು. ಇದು ಅವರು ಯಾವುದೇ ಕ್ರಮ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ ಎಂಬುದನ್ನು ಬಿಂಬಿಸುತ್ತದೆ” ಎಂದು ಪೀಠವು ಚಾಟಿ ಬೀಸಿದೆ.

ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಲು ವಿಫಲರಾಗಿದ್ದಾರೆಯೇ ಮತ್ತು ಮೇಲಧಿಕಾರಿಗಳು ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂಬುದರ ಬಗ್ಗೆ ಅನುಪಾಲನಾ ವರದಿಯಲ್ಲಿ ಮೌನವಹಿಸಲಾಗಿದೆ. “ಪ್ರಮಾದ ಎಸಗಿರುವ ಅಧಿಕಾರಿಗಳು, ಅಕ್ರಮವಾಗಿ ಫ್ಲೆಕ್ಸ್‌/ಹೋರ್ಡಿಂಗ್‌ ಹಾಕಿರುವ ರಾಜಕೀಯ ಪಕ್ಷಗಳು ಮತ್ತು ಅವರ ಬೆಂಬಲಿಗರ ವಿರುದ್ಧ ಒಂದೇ ಒಂದು ಕ್ರಮಕೈಗೊಳ್ಳಲಾಗಿಲ್ಲ. ವಾಣಿಜ್ಯ ಉದ್ದೇಶಗಳಿಗಾಗಿ ಹೋರ್ಡಿಂಗ್‌ ಹಾಕಿರುವವರ ವಿರುದ್ಧ ದೂರು ಮತ್ತು ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

“ಇದು ಆಘಾತ, ಆಶ್ಚರ್ಯ ಮಾತ್ರ ಉಂಟು ಮಾಡುವುದಿಲ್ಲ. ಬದಲಿಗೆ ಆತ್ಮಸಾಕ್ಷಿಯನ್ನು ಕಲಕಿದೆ. ಹೀಗಾಗಿ, ಪ್ರತಿವಾದಿಯಾದ ಬಿಬಿಂಎಂಪಿಯನ್ನು ತಕ್ಷಣ ಕ್ರಮಕೈಗೊಳ್ಳಲು ಹಚ್ಚುವುದು ಸದ್ಯದ ತುರ್ತು. ದೂರು/ಎಫ್‌ಐಆರ್‌ಗೆ ಸಂಬಂಧಿಸಿದ ಮಾಹಿತಿ ಹಾಗೂ ಕನಿಷ್ಠ ಒಂದೇ ಒಂದು ಪ್ರಕರಣದಲ್ಲಿಯೂ ಏಕೆ ದಂಡ ವಿಧಿಸಿಲ್ಲ ಎಂಬುದನ್ನು ತಿಳಿಸಲಾಗಿಲ್ಲ. ಬೆಂಗಳೂರಿನಲ್ಲಿ 59,413 ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ಗಳನ್ನು ಪತ್ತೆ ಮಾಡಲಾಗಿದ್ದು, 2023ರ ಮಾರ್ಚ್‌ 21ರಿಂದ ಇಲ್ಲಿಯವರೆಗೆ 58,429 ಅನ್ನು ತೆರವು ಮಾಡಲಾಗಿದೆ ಎಂದು ವಿವರಿಸಲಾಗಿದೆ. ಆದರೆ, 134 ದೂರು ಮತ್ತು 40 ಎಫ್‌ಐಆರ್‌ ಮಾತ್ರ ದಾಖಲಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.  

ಅಕ್ರಮ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ ತೆರವಿಗೆ ಬಿಬಿಎಂಪಿ ಮೇಲೆ ಬೀಳುವ ಆರ್ಥಿಕ ಹೊರೆ, ತೆರಿಗೆದಾರರ ಹಣ ವೆಚ್ಚ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಅಸಹಾಯಕವೇನಲ್ಲ. ಬಿಬಿಎಂಪಿ ಕಾಯಿದೆ ಮತ್ತು ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯಿದೆಯಲ್ಲಿ ಕ್ರಮಕೈಗೊಳ್ಳಲು ಅವಕಾಶವಿದೆ. ಆದರೆ, ತಮ್ಮ ಕರ್ತವ್ಯದಿಂದ ವಿಮುಖರಾಗಲು ಬಿಬಿಎಂಪಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿ, ವಿನಾಯಿತಿ ಬಯಸುತ್ತಿದ್ದಾರೆ ಎಂದು ಪೀಠವು ಕಿಡಿಕಾರಿದೆ.  

Also Read
ಫ್ಲೆಕ್ಸ್‌ ಹಾಕಲು ಕಾರಣರಾದವರ ವಿರುದ್ಧ ಕ್ರಮವಿಲ್ಲ, ಉತ್ಪಾದಕರ ಮೇಲೆ ಕ್ರಮ: ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ  

“ಬಿಬಿಎಂಪಿ ಅಧಿಕಾರಿಗಳ ಉಡಾಫೆಯ ಹಿಂದಿನ ತರ್ಕ, ಕಾರಣ ಮತ್ತು ಸಕಾರಣ ಯಾರಿಗೂ ಅರ್ಥವಾಗುತ್ತಿಲ್ಲ. ಹೋರ್ಡಿಂಗ್‌ಗಳ ಸಂಖ್ಯೆ ವ್ಯಾಪಕವಾಗಿದ್ದು, ಬಿಬಿಎಂಪಿಯು ತನ್ನ ಅಧಿಕಾರಿಗಳು ಮತ್ತು ಯಂತ್ರಗಳನ್ನು ಬಳಕೆ ಮಾಡುತ್ತಿದೆ. ಮತ್ತೊಂದು ಕಡೆ ಅಕ್ರಮವಾಗಿ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ ಹಾಕುವವರು ನಿರ್ಭಯದಿಂದ ಓಡಾಡುತ್ತಿದ್ದಾರೆ” ಎಂದು ಪೀಠವು ತೀವ್ರ ಆಕ್ರೋಶ ಹೊರಹಾಕಿದೆ.

Kannada Bar & Bench
kannada.barandbench.com