ಸುಪ್ರೀಂ ನ್ಯಾಯಮೂರ್ತಿಯ ವಿರುದ್ಧ ಮಾನಹಾನಿ ಆರೋಪ: ಆಂಧ್ರ ಸಿಎಂ ಜಗನ್ ವಜಾ ಕೋರಿ ಸುಪ್ರೀಂನಲ್ಲಿ ಪಿಐಎಲ್‌ ಸಲ್ಲಿಕೆ

ತಮಗೆ ದೊರೆತಿರುವ ಸಾಂವಿಧಾನಿಕ ಹುದ್ದೆ ದುರ್ಬಳಕೆ ಮಾಡಿಕೊಂಡು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಗೊಳಿಸುವ ಹಕ್ಕು ರೆಡ್ಡಿ ಅವರಿಗೆ ಇಲ್ಲ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.
Jaganmohan Reddy and Supreme Court
Jaganmohan Reddy and Supreme Court

ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಹಾಗೂ ಜೇಷ್ಠತೆಯಲ್ಲಿ ಎರಡನೆಯ ಸ್ಥಾನದಲ್ಲಿರುವ ಎನ್ ವಿ ರಮಣ ವಿರುದ್ಧ ಗಂಭೀರ ಆರೋಪ ಮಾಡಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ವಜಾಗೊಳಿಸುವಂತೆ ಕೋರಿ ಇಬ್ಬರು ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಮನವಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ ಎನ್ ವಿ ರಮಣ ಅವರ ಮಾನಹಾನಿಯಾಗುವಂತಹ ಆರೋಪಗಳನ್ನು ಮಾಡಿರುವ ಜಗನ್ ಮೋಹನ್ ರೆಡ್ಡಿ ಅವರನ್ನು ಸಾಂವಿಧಾನಿಕ ಹುದ್ದೆಯಿಂದ ತೆಗೆದು ಹಾಕುವಂತೆ ವಕೀಲರಾದ ಜಿ ಎಸ್ ಮಣಿ ಮತ್ತು ಪ್ರದೀಪ್ ಕುಮಾರ್ ಯಾದವ್ ಸಲ್ಲಿಸಿರುವ ಪಿಐಎಲ್‌ ನಲ್ಲಿ ಕೋರಲಾಗಿದೆ.

ರೆಡ್ಡಿ ಅವರು ಸ್ವತಃ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಇದರಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳು ಸೇರಿವೆ. ತಮಗೆ ದೊರೆತಿರುವ ಸಾಂವಿಧಾನಿಕ ಹುದ್ದೆಯನ್ನು ಬಳಸಿಕೊಂಡು “ತಪ್ಪಾದ, ಬೀಸು ಹೇಳಿಕೆಗಳು ಮತ್ತು ರಾಜಕೀಯ ಪ್ರೇರಿತ ಹಾಗೂ ಅಪಮಾನಗೊಳಿಸುವ ಹೇಳಿಕೆಗಳನ್ನು ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ” ಎದುರು ಹಾಲಿ ನ್ಯಾಯಮೂರ್ತಿಯ ಬಗ್ಗೆ ನೀಡಿರುವುದರಿಂದ ರೆಡ್ಡಿ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ದೇಶದ ಕಾನೂನು ವ್ಯವಸ್ಥೆಯ ಅಡಿಯಲ್ಲಿ ತಮ್ಮ ಅಹವಾಲುಗಳನ್ನು ಮಂಡಿಸುವ ಹಕ್ಕು ರೆಡ್ಡಿ ಅವರಿಗಿದೆ. ಆದರೆ, ತಮಗೆ ದೊರೆತಿರುವ ಸಾಂವಿಧಾನಿಕ ಹುದ್ದೆಯನ್ನು ಬಳಸಿಕೊಂಡು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಗೊಳಿಸುವ ಹಕ್ಕು ಮುಖ್ಯಮಂತ್ರಿ ಜಗನ್‌ ಅವರಿಗೆ ಇಲ್ಲ ಎಂದು ಉಲ್ಲೇಖಿಸಲಾಗಿದೆ.

“ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾಮಾನ್ಯ ಜನರು ಇಟ್ಟಿರುವ ನಂಬಿಕೆ ಅತ್ಯಂತ ಮುಖ್ಯವಾಗಿದೆ. ಒಂದೊಮ್ಮೆ ಸಾರ್ಜಜನಿಕರು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಂಡರೆ ಯಾವುದೇ ತೆರನಾದ ಉದ್ದೇಶ ಉಳಿಯುವುದಿಲ್ಲ” ಎಂದು ವಿವರಿಸಲಾಗಿದೆ.
Also Read
ನ್ಯಾಯಾಂಗ ಅಸಮರ್ಪಕತೆ ಆರೋಪ ವಿಚಾರದಲ್ಲಿ ಎಲ್ಲೆ ಮೀರಿದ ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ: 'ಸುಪ್ರೀಂ'ಗೆ ದೂರು

ನ್ಯಾ. ರಮಣ ವಿರುದ್ಧ ಭ್ರಷ್ಟಾಷಾರ, ಪ್ರಕರಣಗಳ ಪೀಠ ವರ್ಗಾವಣೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದ ಪತ್ರವನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಕಳುಹಿಸಿದ್ದರು. ಬಳಿಕ ಈ ವಿಚಾರಗಳನ್ನು ಮುಖ್ಯಮಂತ್ರಿಯವರ ಆಪ್ತ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ಆರೋಪದ ಪ್ರತಿಯನ್ನು ಬಿಡುಗಡೆಗೊಳಿಸಿದ್ದರು. ಗೌರವಾನ್ವಿತ ಸುಪ್ರೀಂ ಕೋರ್ಟ್‌ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಸುದ್ದಿಗೋಷ್ಠಿ ನಡೆಸುವ ಮೂಲಕ ಸಂಸ್ಥೆಯ ಘನತೆಗೆ ಚ್ಯುತಿ ತರುವ ಕೆಲಸ ಮಾಡದಂತೆ ಮುಖ್ಯಮಂತ್ರಿ ರೆಡ್ಡಿ ಅವರಿಗೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ನಲ್ಲಿ ಇತ್ತೀಚೆಗೆ ಇನ್ನೊಂದು ಮನವಿ ಸಲ್ಲಿಕೆಯಾಗಿದ್ದನ್ನು ಇಲ್ಲಿ ಗಮನಿಸಬಹುದು.

Related Stories

No stories found.
Kannada Bar & Bench
kannada.barandbench.com