ಸಂವಿಧಾನದ ಪೀಠಿಕೆಯಿಂದ 'ಜಾತ್ಯತೀತ' ಪದ ತೆಗೆಯುವುದರಿಂದ ಸಂವಿಧಾನದ ಜಾತ್ಯತೀತ ಸ್ವರೂಪ ಬದಲಾಗಲ್ಲ: ನ್ಯಾ. ಜೋಸೆಫ್

ಸಂವಿಧಾನದ ಪೀಠಿಕೆಯಲ್ಲಿ ಕೈಯಾಡಿಸಿ ಆ ಒಂದು ಪದವನ್ನು ತೆಗೆದು ಹಾಕುವ ಮೂಲಕ ನೀವು ಜಾತ್ಯತೀತತೆಯನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ನ್ಯಾ. ಜೋಸೆಫ್‌ ಒತ್ತಿ ಹೇಳಿದರು.
Justice KM Joseph
Justice KM Joseph

ಸಂವಿಧಾನದ ಪೀಠಿಕೆಯಲ್ಲಿ 'ಜಾತ್ಯತೀತತೆ' ಎಂಬ ಪದವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆಯೇ, ಇಲ್ಲವೇ ಎಂಬುದನ್ನು ಲೆಕ್ಕಿಸದೆ ಭಾರತೀಯ ಸಂವಿಧಾನವು ಜಾತ್ಯತೀತತೆಯನ್ನು ಅದರ ಮೂಲಭೂತ ಲಕ್ಷಣಗಳಲ್ಲಿ ಒಂದಾಗಿ ಪರಿಗಣಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಗುರುವಾರ ಹೇಳಿದ್ದಾರೆ.

ಸಂವಿಧಾನದ 14 (ಕಾನೂನಿನ ಮುಂದೆ ಎಲ್ಲರೂ ಸಮಾನರು), 15 (ತಾರತಮ್ಯ ನಿಷೇಧ), 16 (ಅವಕಾಶದ ಸಮಾನತೆ) ಮತ್ತು 21 (ಜೀವಿಸುವ ಹಕ್ಕು) ವಿಧಿಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಜೋಸೆಫ್‌ ಅವರು ಸಂವಿಧಾನವು ಅಂತರ್ಗತವಾಗಿ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದರು.

ಕೇವಲ ಪೀಠಿಕೆಯಿಂದ "ಜಾತ್ಯತೀತ" ಎಂಬ ಪದವನ್ನು ತೆಗೆದುಹಾಕುವುದರಿಂದ ಈ ಅನುಚ್ಛೇದಗಳ ಅಡಿಯಲ್ಲಿ ಖಾತರಿಪಡಿಸಿದ ಸಮಾನತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

"ನೀವು ಜಾತ್ಯತೀತ ಪದವನ್ನು ಪೀಠಿಕೆಯಿಂದ ತೆಗೆದುಹಾಕಿದಾಕ್ಷಣದಿಂದಲೇ, ಈ ಅನುಚ್ಛೇದಗಳ ಅಡಿಯಲ್ಲಿ ಇರುವ ಸಮಾನತೆಯು ಅಸ್ತಿತ್ವದಲ್ಲಿಲ್ಲ ಎಂದು ಅರ್ಥವೇ? ಖಂಡಿತ ಅಲ್ಲ" ಎಂದು ಅವರು ಹೇಳಿದರು.

ಪೀಠಿಕೆಯಲ್ಲಿ ಕೈಯಾಡಿಸಿ ಆ ಒಂದು ಪದವನ್ನು ಹೊರಹಾಕುವ ಮೂಲಕ ಜಾತ್ಯತೀತತೆಯನ್ನು ಸಂವಿಧಾನದಿಂದ ತೊಡೆದುಹಾಕಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಕೇರಳ ಹೈಕೋರ್ಟ್ ವಕೀಲರ ಸಂಘದ (ಕೆಎಚ್‌ಸಿಎಎ) ವತಿಯಿಂದ ಆಯೋಜಿಸಲಾಗಿದ್ದ ನಿರಂತರ ಕಾನೂನು ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ನ್ಯಾ. ಜೋಸೆಫ್‌ ಅವರು ಉಪನ್ಯಾಸ ನೀಡಿದರು.

ಸಂವಿಧಾನ ಸಭೆಯ ಚರ್ಚೆಗಳ ಕೊನೆಯಲ್ಲಿ ಪೀಠಿಕೆಯ ಮೇಲಿನ ಚರ್ಚೆ ನಡೆಯಿತು, ಆ ಹೊತ್ತಿಗೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅನುಚ್ಛೇದ 25 ಅನ್ನು ಅದಾಗಲೇ ಸಂವಿಧಾನದಲ್ಲಿ ಸೇರಿಸಲಾಗಿತ್ತು ಎಂದು ನ್ಯಾಯಮೂರ್ತಿ ಜೋಸೆಫ್ ಒತ್ತಿ ಹೇಳಿದರು.

ಚರ್ಚೆಗಳ ಸಮಯದಲ್ಲಿ, "ಜಾತ್ಯತೀತತೆ" ಎಂಬ ಪದವನ್ನು ಪರಿಚಯಿಸಲು ಎರಡು ಪ್ರಯತ್ನಗಳು ನಡೆದವು, ಇವೆರಡೂ ವಿಫಲವಾದವು, ಈ ಪದವು ಅದರ ಅನುಪಸ್ಥಿತಿಯಲ್ಲಿಯೂ ಎದ್ದು ಕಾಣುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. "ಆದರೆ ಪದವಿಲ್ಲದೆಯೂ, ಜಾತ್ಯತೀತತೆಯನ್ನು ಸಂವಿಧಾನದ ಮೂಲಭೂತ ಲಕ್ಷಣವೆಂದು ಪರಿಗಣಿಸಲಾಯಿತು" ಎಂದು ಅವರು ಹೇಳಿದರು.

ಅನುಚ್ಛೇದ 25 ರಿಂದ 28 ರವರೆಗೆ ನಿರ್ದಿಷ್ಟವಾಗಿ ಧರ್ಮವನ್ನು ಉಲ್ಲೇಖಿಸುತ್ತದೆ ಮತ್ತು ಅನುಚ್ಛೇದ 25ರ ಅಡಿಯಲ್ಲಿ ಧರ್ಮದ "ಆಚರಣೆ, ಪ್ರತಿಪಾದನೆ ಮತ್ತು ಪ್ರಚಾರ" ಅಂಶಗಳಿಗೆ ಸಂಬಂಧಿಸಿದ ನಿಬಂಧನೆಗಳು ಮಹತ್ವದ್ದಾಗಿವೆ ಎಂದು ನ್ಯಾಯಮೂರ್ತಿ ಜೋಸೆಫ್ ಒತ್ತಿಹೇಳಿದರು. "ಸಂವಿಧಾನದ ಪೀಠಿಕೆಯಿಂದ ಆ ಒಂದು ಪದವನ್ನು (ಜಾತ್ಯತೀತತೆ) ತೆಗೆದುಹಾಕುವ ಮೂಲಕ ನೀವು ಜಾತ್ಯತೀತತೆಯನ್ನು ತೊಡೆದುಹಾಕಲು ಸಾಧ್ಯವಿಲ್ಲ" ಎಂದು ಅವರು ಒತ್ತಿ ಹೇಳಿದರು.

ಇದಲ್ಲದೆ, ಸುಪ್ರೀಂ ಕೋರ್ಟ್ ಜಾತ್ಯತೀತತೆಯನ್ನು ಸಂವಿಧಾನದ ಮೂಲಭೂತ ಲಕ್ಷಣಗಳಲ್ಲಿ ಒಂದಾಗಿದೆ ಎಂದು ಘೋಷಿಸಿದೆ ಎಂದು ಅವರು ಪುನರುಚ್ಚರಿಸಿದರು.

Related Stories

No stories found.
Kannada Bar & Bench
kannada.barandbench.com