ಕರಾರು ಪತ್ರ ನೋಂದಣಿಯಾಗದಿದ್ದರೆ ಬಾಡಿಗೆ ಹೆಚ್ಚಿಸಲಾಗದು: ಕರ್ನಾಟಕ ಹೈಕೋರ್ಟ್‌

ಕರಾರು ಒಪ್ಪಂದ ಪತ್ರದ ಪ್ರಕಾರ ಬಾಡಿಗೆ ಅವಧಿಯು 11 ತಿಂಗಳುಗಳಿಗಿಂತ ಹೆಚ್ಚಾಗಿದೆ. ನೋಂದಣಿ ಕಾಯಿದೆ ಸೆಕ್ಷನ್‌ 17(1)ರ ಪ್ರಕಾರ ಮೊದಲಿಗೆ ಅದನ್ನು ನೋಂದಾಯಿಸಬೇಕಿತ್ತು ಎಂದಿರುವ ನ್ಯಾಯಾಲಯ.
Justices P S Dinesh Kumar and C M Poonacha
Justices P S Dinesh Kumar and C M Poonacha

ಬಾಡಿಗೆ ಅವಧಿಯು 11 ತಿಂಗಳುಗಳಿಗಿಂತ ಹೆಚ್ಚಾಗಿ, ಕರಾರು ಒಪ್ಪಂದದ ಪ್ರತಿಯು ನೋಂದಣಿಯಾಗದಿದ್ದರೆ ಅದನ್ನು ಸಾಲಕ್ಕೆ ಅಡಮಾನ ಇಟ್ಟಿರುವುದು ಎಂದು ಪರಿಗಣಿಸಲಾಗುತ್ತದೆಯೇ ವಿನಾ ಬಾಡಿಗೆ ಹೆಚ್ಚಳಕ್ಕೆ ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ [ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವರ್ಸಸ್‌ ಶ್ರೀನಿವಾಸ್‌ ಎಂಟರ್‌ಪ್ರೈಸಸ್‌].

ಬಾಡಿಗೆ ಹೆಚ್ಚಳದ ಮೊತ್ತ ಪಾವತಿಸಲು ನಿರ್ದೇಶಿಸುವಂತೆ ಕೋರಿದ್ದ ಬೆಂಗಳೂರಿನ ಶ್ರೀನಿವಾಸ್‌ ಎಂಟರ್‌ಪ್ರೈಸಸ್‌ ಅಸಲು ದಾವೆಯನ್ನು ಭಾಗಶಃ ಮಾನ್ಯ ಮಾಡಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಎತ್ತಿ ಹಿಡಿದಿದೆ.

“ಕರಾರು ಒಪ್ಪಂದ ಪತ್ರದ ಪ್ರಕಾರ ಬಾಡಿಗೆ ಅವಧಿಯು 11 ತಿಂಗಳುಗಳಿಗಿಂತ ಹೆಚ್ಚಾಗಿದೆ. ನೋಂದಣಿ ಕಾಯಿದೆ ಸೆಕ್ಷನ್‌ 17(1)ರ ಪ್ರಕಾರ ಮೊದಲಿಗೆ ಅದನ್ನು ನೋಂದಾಯಿಸಬೇಕಿತ್ತು. ಸೆಕ್ಷನ್‌ 49 ಪ್ರಕಾರ (ದಾಖಲೆ ನೋಂದಣಿ ಮಾಡದಿರುವುದನ್ನು ನೋಂದಣಿ ಮಾಡುವುದು ಅಗತ್ಯ) ಅದನ್ನು ಸಾಲಕ್ಕೆ ಅಡಮಾನ ಇಟ್ಟಿರುವುದು ಎಂದು ಮಾತ್ರ ಪರಿಗಣಿಸಬಹುದು. ಆದ್ದರಿಂದ, ಅದನ್ನು ಬಾಡಿಗೆ ಹೆಚ್ಚಳಕ್ಕೆ ಪರಿಗಣಿಸಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶ್ರೀನಿವಾಸ ಎಂಟರ್‌ಪ್ರೈಸಸ್‌ ನೆಡುಂಗಡಿ ಬ್ಯಾಂಕ್‌ಗೆ ತನ್ನ ಕಟ್ಟಡವನ್ನು ಬಾಡಿಗೆಗೆ ನೀಡಿತ್ತು. ಕಾಲಾನಂತರದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಒಳಗೆ ನೆಡುಂಗಡಿ ಬ್ಯಾಂಕ್‌ ವಿಲೀನಗೊಂಡಿತ್ತು. ಈ ವೇಳೆ ಮಾಸಿಕ 13, 574 ರೂಪಾಯಿ ಬಾಡಿಗೆ ಹಾಗೂ 81,444 ರೂಪಾಯಿ ಅಡ್ವಾನ್ಸ್‌ ನೀಡಲಾಗಿತ್ತು. 1998ರ ಸೆಪ್ಟೆಂಬರ್‌ 1ರಿಂದ ಪೂರ್ವಾನ್ವಯವಾಗುವಂತೆ 2002 ಸೆಪ್ಟೆಂಬರ್‌ 23ರಂದು ಐದು ವರ್ಷಗಳ ಅವಧಿಗೆ ವಿವಾದಾತ್ಮಕವಾದ ಕರಾರು ಪತ್ರ ಮಾಡಲಾಗಿದ್ದು, ಇದರ ಪ್ರಕಾರ ಮಾಸಿಕ 23, 414 ರೂಪಾಯಿ ಬಾಡಿಗೆ ಎಂದು ಹೇಳಲಾಗಿತ್ತು. ಅಲ್ಲದೇ, ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.20ರಷ್ಟು ಬಾಡಿಗೆ ಮತ್ತು ಹೆಚ್ಚುವರಿಯಾಗಿ 1,32,969 ರೂಪಾಯಿ ಅಡ್ವಾನ್ಸ್‌ ಮೊತ್ತ ನೀಡಬೇಕು ಎಂದು ಕರಾರಿನಲ್ಲಿ ಉಲ್ಲೇಖಿಸಲಾಗಿತ್ತು.

ಕರಾರಿನ ಪ್ರಕಾರ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಹೆಚ್ಚುವರಿ ಬಾಡಿಗೆ ಹಣ ಪಾವತಿಸುವಂತೆ ಶ್ರೀನಿವಾಸ್‌ ಎಂಟರ್‌ಪ್ರೈಸಸ್‌ ಮನವಿ ಸಲ್ಲಿಸಿತ್ತು. ಇದಕ್ಕೆ ಬ್ಯಾಂಕ್‌ ಒಪ್ಪದ ಹಿನ್ನೆಲೆಯಲ್ಲಿ ಬಾಡಿಗೆ ಕರಾರು ಪತ್ರದ ಅನ್ವಯ 1998ರ ಸೆಪ್ಟೆಂಬರ್‌ 1ರಿಂದ ಹೆಚ್ಚುವರಿ ಬಾಡಿಗೆ ಮೊತ್ತ ಪಾವತಿಸಲು ಪಿಎನ್‌ಬಿಗೆ ನಿರ್ದೇಶಿಸಬೇಕು ಎಂದು ಕೋರಿ ಶ್ರೀನಿವಾಸ್‌ ಎಂಟರ್‌ಪ್ರೈಸಸ್‌ 2006 ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ (ಮೆಯೊ ಹಾಲ್‌) ಅಸಲು ದಾವೆ ಹೂಡಿತ್ತು.

ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪಿಎನ್‌ಬಿಯು 2002 ಸೆಪ್ಟೆಂಬರ್‌ 23ರ ಕರಾರು ಪತ್ರವು ನೋಂದಣಿಯಾಗಿಲ್ಲ. ಅಲ್ಲದೇ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಟ್ಯಾಂಪ್ ಮಾಡಲಾಗಿಲ್ಲ ಎಂದು ವಿರೋಧ ದಾಖಲಿಸಿತ್ತು. ಉಭಯ ಪಕ್ಷಕಾರರ ವಾದ ಆಲಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಶ್ರೀನಿವಾಸ್‌ ಎಂಟರ್‌ಪ್ರೈಸಸ್‌ನ ಅಸಲು ದಾವೆಯನ್ನು ಭಾಗಶಃ ಮಾನ್ಯ ಮಾಡಿ, 5,19,148 ರೂಪಾಯಿ ಹಾಗೂ ವಾರ್ಷಿಕ ಶೇ. 18ರಷ್ಟು ಬಡ್ಡಿ ಪಾವತಿಸುವಂತೆ ಪಿಎನ್‌ಗೆ ಆದೇಶ ಮಾಡಿತ್ತು.

ಇದನ್ನು ಪಿಎನ್‌ಬಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ, ವಿಚಾರಣಾಧೀನ ನ್ಯಾಯಾಲಯವು 1998ರ ಸೆಪ್ಟೆಂಬರ್‌ 1ರಿಂದ ಹೆಚ್ಚುವರಿ ಬಾಡಿಗೆ ಪಾವತಿಸಬೇಕು ಎಂದು ಮಾಡಿರುವ ಆದೇಶವು ದೋಷಪೂರಿತವಾಗಿದೆ. ಫಿರ್ಯಾದಿಯಾದ ಶ್ರೀನಿವಾಸ್‌ ಎಂಟರ್‌ಪ್ರೈಸಸ್‌ 2002ರ ಸೆಪ್ಟೆಂಬರ್‌ 23ರಂದು ಮಾಡಲಾಗಿರುವ ಬಾಡಿಗೆ ಕರಾರು ಹೊರತುಪಡಿಸಿ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಈ ಮೂಲಕ ತಾನು ಹೆಚ್ಚುವರಿ ಬಾಡಿಗೆ ಪಡೆಯಲು ಅರ್ಹ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು  ಹೈಕೋರ್ಟ್‌ ಹೇಳಿದೆ.

Attachment
PDF
Punjab National Bank Vs Srinivasa Enterprises.pdf
Preview
Kannada Bar & Bench
kannada.barandbench.com