ರೇಣುಕಾಸ್ವಾಮಿ ಕೊಲೆ: ವಿನಯ್‌ ವಿರುದ್ಧದ ಜಾಮೀನುರಹಿತ ಬಂಧನ ವಾರೆಂಟ್‌ ಹಿಂಪಡೆದ ಬೆಂಗಳೂರು ನ್ಯಾಯಾಲಯ

ವಕೀಲರು ಮೆಮೊ ಸಲ್ಲಿಸಿ ವಿನಯ್‌ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್‌ ಅನ್ನು ಹಿಂಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಮನವಿ ನ್ಯಾಯಾಲಯ ಪುರಸ್ಕರಿಸಿ, ವಿಚಾರಣೆಯನ್ನು ಮಾರ್ಚ್‌ 16ಕ್ಕೆ ಮುಂದೂಡಿತು.
Renukaswamy
Renukaswamy
Published on: 

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ 10ನೇ ಆರೋಪಿ ವಿನಯ್‌ ವಿರುದ್ಧ ಜಾರಿ ಮಾಡಲಾಗಿದ್ದ ಜಾಮೀನು ರಹಿತ ಬಂಧನ ವಾರೆಂಟ್‌ ಅನ್ನು ಬೆಂಗಳೂರಿನ ಸತ್ರ ನ್ಯಾಯಾಲಯ ಮಂಗಳವಾರ ಹಿಂಪಡೆದುಕೊಂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಐ ಜಿ ನಾಯಕ್‌ ಅವರು ಮುಂದುವರಿಸಿದರು.

ವಿಚಾರಣೆಗೆ ವಿನಯ್‌ ಮತ್ತವರ ಪರ ವಕೀಲರು ಹಾಜರಾಗಿದ್ದರು. ವಕೀಲರು ಮೆಮೊ ಸಲ್ಲಿಸಿ ವಿನಯ್‌ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್‌ ಅನ್ನು ಹಿಂಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಮನವಿ ನ್ಯಾಯಾಲಯ ಪುರಸ್ಕರಿಸಿ ವಿಚಾರಣೆಯನ್ನು ಮಾರ್ಚ್‌ 16ಕ್ಕೆ ಮುಂದೂಡಿತು. ಜೊತೆಗೆ, ಮಾರ್ಚ್‌ 16ರವರೆಗೆ ದರ್ಶನ್‌, ನಟಿ ಪವಿತ್ರಾಗೌಡ ಸೇರಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಕರಣದ ಏಳು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ವಿಸ್ತರಿಸಿತು.

ಇನ್ನೂ ಪ್ರಕರಣ ಸಂಬಂಧ ದರ್ಶನ್‌ ಸೇರಿ ಇನ್ನಿತರ ಆರೋಪಿಗಳಿಂದ ವಶಪಡಿಸಿಕೊಂಡ ಹಣವನ್ನು ತೆರೆದ ನ್ಯಾಯಾಲಯದಲ್ಲಿ ಮಂಗಳವಾರ ಯಂತ್ರದ ನೆರವಿಂದ ಲೆಕ್ಕ ಹಾಕಲಾಯಿತು. ಒಂದು ಕಟ್ಟಿನಲ್ಲಿ ಆರು ಸಾವಿರ ನೋಟುಗಳಿದ್ದವು.

Also Read
ರೇಣುಕಾಸ್ವಾಮಿ ಕೊಲೆ: ಕಾಮಾಕ್ಷಿಪಾಳ್ಯ ಹಿಂದಿನ ಇನ್‌ಸ್ಪೆಕ್ಟರ್‌ ಗಿರೀಶ್‌ ನಾಯ್ಕ್‌ ಆರೋಪಿಯಾಗಿಸಲು ಸರ್ಕಾರ ಆಕ್ಷೇಪ

ರೇಣುಕಾಸ್ವಾಮಿ ಕೊಲೆ ಪ್ರಕರಣವು ಸೋಮವಾರ ಬೆಳಗ್ಗೆ ವಿಚಾರಣೆಗೆ ಬಂದಾಗ ವಿನಯ್‌ ತಮ್ಮ ಪರ ವಕೀಲರಾಗಿದ್ದ ನಟರಾಜ್‌ ಅನ್ನು ಬದಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ವಿಚಾರದಲ್ಲಿ ಕೋರ್ಟ್‌ ಕಾರಿಡಾರ್‌ನಲ್ಲಿ ನಟರಾಜ್‌ ಮತ್ತು ವಿನಯ್‌ ನಡುವೆ ವಾಗ್ವಾದ ನಡೆದಿತ್ತು. ಮಧ್ಯಾಹ್ನದ ಕಲಾಪದಲ್ಲಿ ಪ್ರಕರಣವನ್ನು ವಿಚಾರಣೆಗೆ ಕರೆದಾಗ, ವಿನಯ್‌ ಗೈರಾಗಿದ್ದರು. ಇದರಿಂದ ಆತನ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಿತ್ತು.

Kannada Bar & Bench
kannada.barandbench.com