ರೇಣುಕಾಸ್ವಾಮಿ ಕೊಲೆ: ಸಾಕ್ಷ್ಯ ನುಡಿಯುವ ವೇಳೆ ಗಾಬರಿಗೆ ಒಳಗಾದ ನಟ ಚಿಕ್ಕಣ್ಣ

ಚಿಕ್ಕಣ್ಣ ಗಾಬರಿಗೆ ಒಳಗಾದರು. ಸರಿಯಾಗಿ ಹೇಳಿಕೆ ದಾಖಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ನ್ಯಾಯಾಧೀಶರು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಚಿಕ್ಕಣ್ಣಗೆ ಸೂಚಿಸಿ ಅವರ ಸಾಕ್ಷ್ಯ ದಾಖಲು ಪ್ರಕ್ರಿಯೆಯನ್ನು 15 ನಿಮಿಷ ಮುಂದೂಡಿದರು.
Renukaswamy
Renukaswamy
Published on: 

ನಟ ದರ್ಶನ್‌ ಪ್ರಮುಖ ಆರೋಪಿಯಾಗಿರುವ ಚಿತ್ರದರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ನಟ ಚಿಕ್ಕಣ್ಣ ಅವರು ಗಾಬರಿಗೆ ಒಳಗೊಂಡು ಸರಿಯಾಗಿ ಹೇಳಿಕೆ ದಾಖಲಿಸದ ಪ್ರಸಂಗ ಮಂಗಳವಾರ ನಡೆಯಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರು ಮಂಗಳವಾರ ಮುಂದುವರಿಸಿತು.

Sujata Madiwalappa Sambrani
Sujata Madiwalappa Sambrani

ಪ್ರಕರಣ ಸಂಬಂಧ ಅಕ್ಟೋಬರ್‌ 8ರಂದು ನ್ಯಾಯಾಲಯದ ನೀಡಿದ್ದ ನಿರ್ದೇಶದದಂತೆ ನಟರಾದ ಚಿಕ್ಕಣ್ಣ ಮತ್ತು ಯಶಸ್‌ ಸೂರ್ಯ (ಆರ್ ನವೀನ್‌) ಸಾಕ್ಷ್ಯ ನುಡಿಯಲು (ಹೇಳಿಕೆ ದಾಖಲಿಸಲು) ಮಂಗಳವಾರ ವಿಚಾರಣೆಗೆ ಹಾಜರಾಗಿದ್ದರು.

ಮೊದಲಿಗೆ ಚಿಕ್ಕಣ್ಣ ಅವರ ಸಾಕ್ಷ್ಯ ದಾಖಲಿಸಿಕೊಳ್ಳಲು ನ್ಯಾಯಾಲಯ ಮುಂದಾಯಿತು. ಆದರೆ, ಈ ವೇಳೆ ಚಿಕ್ಕಣ್ಣ ಗಾಬರಿಗೆ ಒಳಗಾದರು. ಸರಿಯಾಗಿ ಹೇಳಿಕೆ ದಾಖಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ಇದರಿಂದ ನ್ಯಾಯಾಧೀಶರು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಚಿಕ್ಕಣ್ಣಗೆ ಸೂಚಿಸಿ ಅವರ ಸಾಕ್ಷ್ಯ ದಾಖಲು ಪ್ರಕ್ರಿಯೆಯನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಅದಾದ 15 ನಿಮಿಷಗಳ ನಂತರ ಸಾಕ್ಷ್ಯ ದಾಖಲಿಸಲು ಮತ್ತೆ ಚಿಕ್ಕಣ್ಣ ಅವರನ್ನು ಕರೆಯಲಾಯಿತು. ಆಗಲೂ ಸಹ ಅವರು ಗಾಬರಿಗೆ ಒಳಗಾದರು.

ಅದನ್ನು ಪರಿಗಣಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ (ಎಸ್‌ಪಿಪಿ) ಪಿ ಪ್ರಸನ್ನ ಕುಮಾರ್‌ ಅವರು, ಚಿಕ್ಕಣ್ಣ ಅವರ ಸಾಕ್ಷ್ಯ ದಾಖಲು ಪ್ರಕ್ರಿಯೆಯನ್ನು ಮುಂದೂಡುವಂತೆ ಕೋರಿದರು.

ಆ ಮನವಿ ಮನ್ನಿಸಿದ ನ್ಯಾಯಾಧೀಶರು, ಚಿಕ್ಕಣ್ಣ ಅವರ ಸಾಕ್ಷ್ಯ ದಾಖಲು ಪ್ರಕ್ರಿಯೆಯನ್ನು ಮುಂದೂಡಿದರು.

ನಂತರ ನಟ ಯಶಸ್‌ ಸೂರ್ಯ ಅವರನ್ನು ಸಾಕ್ಷ್ಯ ದಾಖಲಾತಿಗೆ ಕರೆಯಲಾಯಿತು. ಅವರು ದರ್ಶನ್‌ ಜತೆಗಿನ ಪರಿಚಯ, ನಟನೆ ಮಾಡಿದ ಚಿತ್ರಗಳ ಬಗ್ಗೆ ಮಾಹಿತಿ ನೀಡಿದರು. ನಂತರ ರೇಣುಕಾಸ್ವಾಮಿ ಕೊಲೆ ನಡೆದ ದಿನವಾದ 2024ರ ಜೂನ್‌ 8ರಂದು ಮಧ್ಯಾಹ್ನ 1 ಗಂಟೆಗೆ ದರ್ಶನ್‌ ಸೂಚನೆ ಮೇರೆಗೆ ಊಟ ಮಾಡಲು ರಾಜೇಶ್ವರಿ ನಗರದ ಸ್ಟೋನಿಬ್ರೂಕ್ಸ್‌ ಪಬ್‌ಗೆ ಹೋಗಿದ್ದೆ. ಅಲ್ಲಿಗೆ ದರ್ಶನ್‌ ಬಂದಿದ್ದು, ಊಟ ಮಾಡಿದ ಬಳಿಕ ನಾನು ನನ್ನ ಪಾಡಿಗೆ ಮನೆ ಬಂದೆ. ಆದರೆ, ಈ ವೇಳೆ ಪಬ್‌ಗೆ ದರ್ಶನ್‌ ಮನೆಯಲ್ಲಿ ಕೆಲಸ ಮಾಡುವ ಪವನ್‌ ಬಂದು ಹೋದ ಬಗ್ಗೆ ನನಗೆ ಗೊತ್ತಿಲ್ಲ. ಪವನ್‌ ಬಂದು ಹೋದ ಎಂದು ಪೊಲೀಸರು ಹೇಳಿದ್ದಕ್ಕೆ ನಾನು ಹೇಳಿದೆ ಎಂದು ನುಡಿದರು.

ಅದಕ್ಕೆ ಆಕ್ಷೇಪಿಸಿದ ಎಸ್‌ಪಿಪಿ ಯಶಸ್‌ ಸೂರ್ಯ ಅನ್ನು ಭಾಗಶಃ ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಿ ಪಾಟಿ ಸವಾಲು ನಡೆಸಲು ತಮಗೆ ಅನುಮತಿ ನೀಡಬೇಕು ಎಂದು ಕೋರಿದರು.

ಆ ಮನವಿ ಪುರಸ್ಕರಿಸಿದ ನ್ಯಾಯಾಲಯವು ಯಶಸ್‌ ಸೂರ್ಯ ಅನ್ನು ಪಾಟಿ ಸವಾಲಿಗೆ ಒಳಪಡಿಸಲು ಎಸ್‌ಪಿಪಿಗೆ ಅನುಮತಿ ನೀಡಿತು.

ಇನ್ನೂ ನ್ಯಾಯಾಲಯ ಆದೇಶದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮಗೆ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ. ಈ ಕುರಿತು ನ್ಯಾಯಾಂಗ ಪರಿಶೀಲನೆಗೆ ಆದೇಶಿಸಬೇಕು ಎಂದು ನ್ಯಾಯಾಧೀಶರನ್ನು ಪ್ರಕರಣದ ಮೊದಲನೆ ಆರೋಪಿ ಪವಿತ್ರಾ ಗೌಡ ಕೋರಿದರು.

ಅದಕ್ಕೆ ಎಸ್‌ಪಿಪಿ, ಈ ಕುರಿತು ಪರಿಶೀಲನೆ ನಡೆಸಿ ಬುಧವಾರ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.

ಅಂತಿಮವಾಗಿ ನ್ಯಾಯಾಯವು ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com