

ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ರಾವ್‌ಗೆ ಸಮನ್ಸ್ ಜಾರಿ ಮಾಡಿರುವ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಸೆಪ್ಟೆಂಬರ್ 2ರಂದು ಆತನನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತಾ ಎಂ.ಸಾಂಬ್ರಾಣಿ ಅವರು ಶುಕ್ರವಾರ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿದ್ದಾರೆ.
ಜಾಮೀನು ಕೋರಿ ದರ್ಶನ್ ಕಾರು ಚಾಲಕನಾದ ಪ್ರಕರಣದ 12ನೇ ಆರೋಪಿ ಎಂ ಲಕ್ಷ್ಮಣ್ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ಆಗಸ್ಟ್ 31ರಂದು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ಪ್ರಕರಣದ ಮೊದಲನೆ ಆರೋಪಿ ನಟಿ ಪವಿತ್ರಾ ಗೌಡಗೆ ಜೈಲಿನಲ್ಲಿ ಕಲ್ಪಿಸಲಾಗಿರುವ ವೈದ್ಯಕೀಯ ನೆರವುಗಳ ಕುರಿತ ವರದಿಯನ್ನು ಇ-ಮೇಲ್ ಮೂಲಕ ಆಗಸ್ಟ್ 31ರಂದು ಸಲ್ಲಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಕರಣದ ವಿಚಾರಣೆ ವೇಳೆ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜ ಪಿ ಪ್ರಸನ್ನಕುಮಾರ್ ಅವರು “ಸದ್ಯ ಪ್ರಾಸಿಕ್ಯೂಷನ್ ಸಾಕ್ಷಿಯಾಗಿರುವ ಪ್ರದೋಷ್‌ನನ್ನು (ಮಾಫಿ ಸಾಕ್ಷಿ) ಆಗಸ್ಟ್ 31ರಂದು ವಿಚಾರಣೆ ನಡೆಸಲಾಗುವುದು. ಇದರಿಂದ ಆತನನ್ನು ನ್ಯಾಯಾಲಯದ ಮುಂದೆ ಖುದ್ದು ಹಾಜರುಪಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು” ಎಂದು ಕೋರಿದರು.
ದರ್ಶನ್ ಪರ ವಕೀಲ ಹಸ್ಮತ್ ಪಾಷಾ ಅವರು “ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಈ ನ್ಯಾಯಾಲಯವು ಆಗಸ್ಟ್ 25ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಹೀಗಾಗಿ, ಪ್ರದೋಷ್‌ನನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸುವುದನ್ನು ಸೆಪ್ಟೆಂಬರ್ 2ರವರೆಗೆ ಮುಂದೂಡಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಸಾಕ್ಷ್ಯ ದಾಖಲಿಸಲು ಪ್ರದೋಷ್‌ಗೆ ಸಮನ್ಸ್ ಜಾರಿ ಮಾಡಿತು. ಜೈಲಿನಲ್ಲಿರುವ ಆತನನ್ನು ಸೆಪ್ಟೆಂಬರ್ 2ರಂದು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕು. ಈ ಕುರಿತು ಕಾಮಾಕ್ಷಿ ಪೊಲೀಸ್ ಠಾಣಾಧಿಕಾರಿಯು ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿತು.
ಇನ್ನೂ ಪವಿತ್ರಾ ಗೌಡ ಮತ್ತು ದರ್ಶನ್ ಸೇರಿದಂತೆ ಜೈಲಿನಲ್ಲಿರುವ ಆರು ಆರೋಪಿಗಳನ್ನು ಸೆಪ್ಟೆಂಬರ್ 2ರಂದು ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ನ್ಯಾಯಾಲಯ ಸೂಚಿಸಿದೆ.