ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಸೇರಿ 17 ಮಂದಿ ವಿರುದ್ಧ ಆರೋಪ ನಿಗದಿಗೊಳಿಸಿದ ಬೆಂಗಳೂರು ನ್ಯಾಯಾಲಯ

ವಿಚಾರಣೆಯ ವೇಳೆ ನ್ಯಾಯಾಧೀಶರು ಆರೋಪ ಪಟ್ಟಿಯಲ್ಲಿರುವ ಅಂಶಗಳನ್ನು ಓದಿ ಆರೋಪಿಗಳಿಗೆ ವಿವರಿಸಿದರು. ಎಲ್ಲಾ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು. ಹೀಗಾಗಿ ನ.10ರಿಂದ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿತು.
Actor Darshan
Actor Darshan
Published on

ಕಿಕ್ಕಿರಿದು ತುಂಬಿದ್ದ ಮುಕ್ತ ನ್ಯಾಯಾಲಯದಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಸೋಮವಾರ ಬೆಂಗಳೂರಿನ ಸತ್ರ ನ್ಯಾಯಾಲಯವು ಆರೋಪ ನಿಗದಿ ಮಾಡಿತು. ಅಲ್ಲದೇ, ನವೆಂಬರ್‌ 10ಕ್ಕೆ ಪ್ರಕರಣದ ಮೊದಲ ವಿಚಾರಣೆ ನಿಗದಿಪಡಿಸಿದೆ.

ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್, ನಾಗರಾಜ್, ಲಕ್ಷ್ಮಣ್, ಜಗದೀಶ್ ಹಾಗೂ ಮಧ್ಯಂತರ ಜಾಮೀನಿನ ಮೇರೆಗೆ ಹೊರಗಿರುವ ಪ್ರದೋಷ್ ರಾವ್ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು ‌ನ್ಯಾಯಾಧೀಶರಾದ ಐ ಪಿ ನಾಯ್ಕ್‌ ಅವರ ಮುಂದೆ ಖುದ್ದು ಹಾಜರಾಗಿದ್ದರು.

ವಿಚಾರಣೆಯ ವೇಳೆ ನ್ಯಾಯಾಧೀಶರು ಆರೋಪ ಪಟ್ಟಿಯಲ್ಲಿರುವ ಅಂಶಗಳನ್ನು ಓದಿ ಆರೋಪಿಗಳಿಗೆ ವಿವರಿಸಿದರು. ಎಲ್ಲಾ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು. ಹೀಗಾಗಿ ನವೆಂಬರ್‌ 1ರಂದರಿಂದ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿತು.

ಆರೋಪ ನಿಗದಿ ಹಿನ್ನೆಲೆಯಲ್ಲಿ ನ್ಯಾಯಾಲಯದ ಒಳಗೆ ಜನಜಂಗುಳಿ ಇತ್ತು. ಆರೋಪಿಗಳು ಪೀಠದ ಮುಂದೆ ಹಾಜರಾಗಲು ಆಗದ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ವೀಕ್ಷಿಸಿದ ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಎಲ್ಲರೂ ಹೊರಹೋಗಬೇಕು ಎಂದು ಸೂಚಿಸಿದರು. ಇದಕ್ಕೆ ಸ್ಪಂದನೆ ದೊರೆಯದಿದ್ದಾಗಿ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಸಿಪಿ ಶಿವಾನಂದ ಛಲವಾದಿ ಅವರಿಗೆ ಒಂದಷ್ಟು ಮಂದಿಯನ್ನು ಹೊರಹಾಕುವಂತೆ ಸೂಚಿಸಿದರು. ಬಳಿಕ ವಿಚಾರಣೆ ಆರಂಭಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ  ಆರೋಪಿ ಪವಿತ್ರ ಗೌಡಗೆ ರೇಣುಕಾಸ್ವಾಮಿಯಿಂದ ಬಂದಿರುವ ಸಂದೇಶಕ್ಕೆ ಸಂಬಂಧಿಸಿದಂತೆ ಆರೋಪಿಗಳೆಲ್ಲರೂ ಒಳಸಂಚು, ಸಾಕ್ಷ್ಯನಾಶ, ಮಾರಣಾಂತಿಕ ಹಲ್ಲೆ ಹಾಗೂ ಅಕ್ರಮ ಕೂಟದಲ್ಲಿ ಭಾಗಿಯಾಗಿದ್ದೀರಾ? ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ರಾಜರಾಜೇಶ್ವರಿ ನಗರದ ಪಟ್ಣಣಗೆರೆ ಶೆಡ್‌ಗೆ ಕರೆತಂದು ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಚಪ್ಪಲಿಯಿಂದ ಪವಿತ್ರಗೌಡ ಹೊಡೆದು ಹಲ್ಲೆ ಮಾಡಿದರೆ, ಪ್ರಕರಣದ ಎರಡನೇ ಆರೋಪಿ ದರ್ಶನ್, ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿ ಹಲ್ಲೆ ನಡೆಸಿದ್ದಾರೆ.  ಕೆಲ ಅರೋಪಿಗಳಿಗೆ ಹಣದ ಆಸೆ ತೋರಿಸಿ ಸಂಚಿನಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ. ಕೃತ್ಯದ ವೇಳೆ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಫೋಟೊವನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಏನು ಹೇಳುವಿರಿ ಎಂದು ಪ್ರಶ್ನಿಸಿದರು.

Also Read
ದರ್ಶನ್‌ ಬೇಡಿಕೆ: ಗುಣಮಟ್ಟದ ಹೊಸ ಚಾದರ, ಬಟ್ಟೆ ಒದಗಿಸಿ ಎಂದ ನ್ಯಾಯಾಲಯ; ಜೈಲು ಕೈಪಿಡಿ ಪಾಲನೆ ಮಾಡುವಂತೆ ತಾಕೀತು

ಆರೋಪಿಗಳು ನಮಗೂ ಕೊಲೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮೇಲಿನ ಆರೋಪಗಳು ಸುಳ್ಳಾಗಿವೆ. ಹೀಗಾಗಿ, ಪ್ರಕರಣದ ವಿಚಾರಣೆ ಎದುರಿಸಲು ಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಆಲಿಸಿದ ನ್ಯಾಯಾಲಯವು ಆರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಿ ವಿಚಾರಣೆ ದಿನಾಂಕವನ್ನು ನವೆಂಬರ್‌ 10ಕ್ಕೆ ನಿಗದಿಪಡಿಸಿತು.

ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್‌ ಅವರ ತಂದೆ ನಿಧನ ಹಿನ್ನೆಲೆಯಲ್ಲಿ ನ್ಯಾಯಾಲಯವು ಒಂದು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು. ಇಂದು 11ನೇ ದಿನದ ತಿಥಿ ಕಾರ್ಯ ಮಾಡಬೇಕಿತ್ತು. ಆದರೆ, ಇಂದು ಆರೋಪ ನಿಗದಿಪಡಿಸಿ ಎಲ್ಲಾ ಆರೋಪಿಗಳು ಖುದ್ದು ಹಾಜರಾಗುವಂತೆ ಆದೇಶಿಸಿದ್ದರಿಂದ ಅನಿವಾರ್ಯವಾಗಿ ಪ್ರದೋಷ್ ನ್ಯಾಯಾಲಯಕ್ಕೆ ಹಾಜರಾದರು.

Kannada Bar & Bench
kannada.barandbench.com