ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪ ಪಟ್ಟಿ ಸೋರಿಕೆ: ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ದರ್ಶನ್‌ ಹೈಕೋರ್ಟ್‌ ಮೊರೆ

ಪ್ರಸಾರ ಅಥವಾ ಮುದ್ರಣ ಮಾಧ್ಯಮಗಳಲ್ಲಿನ ವರದಿ ಪ್ರಕಟವಾಗುವಿಕೆಯು, ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ಸ್‌ ನಿಯಂತ್ರಣ ಕಾಯಿದೆ ಮತ್ತು ದರ್ಶನ್‌ ಅವರ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯೂ ಆಗಿದೆ ಎಂದು ಆಕ್ಷೇಪಿಸಿದ ಹಿರಿಯ ವಕೀಲ ನಾವದಗಿ.
Darshan and Karnataka HC
Darshan and Karnataka HC
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿ ಮತ್ತು ಅದಕ್ಕೆ ಪೂರಕವಾದ ಇತರೆ ಯಾವುದೇ ಅಂಶಗಳನ್ನು ಪ್ರಸಾರ ಮಾಡದಂತೆ ಎಲ್ಲ ವಿಧವಾದ ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸಲು ನಿರ್ದೇಶಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಅಲ್ಲದೇ, ಈ ಸಂಬಂಧ ಮಂಗಳವಾರ ಆದೇಶ ಮಾಡುವುದಾಗಿಯೂ ತಿಳಿಸಿದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾದ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್ ಅವರ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ದರ್ಶನ್‌ ಪರ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು “ಸುದ್ದಿ ಮಾಧ್ಯಮಗಳು, ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ದಿನಪೂರ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದ್ದಿಯನ್ನು ಪೂರ್ವಗ್ರಹ ಪೀಡಿತ ಭಾವನೆಯಿಂದ ಪ್ರಸಾರ ಮಾಡುತ್ತಿವೆ” ಎಂದು ಆಕ್ಷೇಪಿಸಿದರು.

“ಈ ರೀತಿಯ ಪ್ರಸಾರ ಅಥವಾ ಮುದ್ರಣ ಮಾಧ್ಯಮಗಳಲ್ಲಿನ ವರದಿ ಪ್ರಕಟವಾಗುವಿಕೆಯು, ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ಸ್‌ ನಿಯಂತ್ರಣ ಕಾಯಿದೆ ಮತ್ತು ದರ್ಶನ್‌ ಅವರ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯೂ ಆಗಿದೆ. ಆದ್ದರಿಂದ, ಮಾಧ್ಯಮಗಳನ್ನು ಈ ವಿಷಯದಲ್ಲಿ ನಿಯಂತ್ರಿಸಲು ನಿರ್ದೇಶನ ನೀಡಬೇಕು” ಎಂದು ಮನವಿ ಮಾಡಿದರು.

ಈ ಮನವಿ ಪುರಸ್ಕರಿಸಿ ಪೂರಕ ಆದೇಶ ಬರೆಸಲು ಪೀಠ ಮುಂದಾಗುತ್ತಿದ್ದಂತೆಯೇ, ಪ್ರತಿವಾದಿಯೂ ಆದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ ಅವರು ಅರ್ಜಿದಾರರ ಮನವಿಯನ್ನು ಬಲವಾಗಿ ವಿರೋಧಿಸಿದರು.

“ಭಾರತದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮಗಳಿವೆ. ಇವುಗಳಲ್ಲಿ ನಾವು ಯಾರನ್ನು ನಿಯಂತ್ರಿಸಬೇಕು. ಅಷ್ಟಕ್ಕೂ, ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಅರ್ಜಿದಾರರು ಹೀಗೆ ಆದೇಶ ಪಡೆಯಲು ಆಗದು. ಒಂದು ವೇಳೆ ಅವರು ನಿರ್ದಿಷ್ಟ ಮಾಧ್ಯಮ ಅಥವಾ ಚಾನೆಲ್‌ ವಿರುದ್ಧ ನಮಗೆ ದೂರು ನೀಡಿದರೆ ಸಚಿವಾಲಯ ಖಂಡಿತಾ ಸೂಕ್ತ ಕ್ರಮ ಕೈಗೊಳ್ಳಲಿದೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಸ್ವಯಂ ಪ್ರೇರಿತವಾಗಿ ನೀವು ಯಾಕೆ ಕ್ರಮ ಕೈಗೊಳ್ಳಬಾರದು” ಎಂದು ಕಾಮತ್‌ ಅವರನ್ನು ಪ್ರಶ್ನಿಸಿತು. ಇದಕ್ಕೆ ಅರವಿಂದ ಕಾಮತ್‌ ಅವರು “ಆ ರೀತಿ ಅನಿರ್ದಿಷ್ಟ ವಿಧಾನದಲ್ಲಿ ಕ್ರಮ ಕೈಗೊಳ್ಳಲು ಆಗದು. ಬೇಕಿದ್ದರೆ, ಅರ್ಜಿದಾರರು ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳನ್ನು ಹೆಸರಿಸಿ ಅವುಗಳ ವಿರುದ್ಧ ದೂರು ನೀಡಿದರೆ ಅಂಥವರ ವಿರುದ್ಧ ಸಚಿವಾಲಯ ತಕ್ಕ ಕಾನೂನು ಕ್ರಮ ಕೈಗೊಳ್ಳುತ್ತದೆ” ಎಂದು ಪುನರುಚ್ಚರಿಸಿದರು.

ಇದಕ್ಕೆ ಒಪ್ಪಿದ ಪೀಠವು ನಾವದಗಿ ಅವರಿಗೆ “ಆಕ್ಷೇಪಣೆ ಇರುವ ನಿರ್ದಿಷ್ಟ ಮಾಧ್ಯಮಗಳ ಕುರಿತು ಮಂಗಳವಾರ (ಸೆ.10) ಬೆಳಗ್ಗೆ 10.30ಕ್ಕೆ ಮೆಮೊ ಸಲ್ಲಿಸಿ” ಎಂದು ನಿರ್ದೇಶಿಸಿದರು. ಅಂತೆಯೇ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದರು.

Also Read
ರೇಣುಕಾಸ್ವಾಮಿ ಕೊಲೆ: ದರ್ಶನ್‌ ಸೇರಿ 17 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 3,991 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಅರ್ಜಿಯಲ್ಲಿ ಏನಿದೆ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿನ ಮಾಹಿತಿಯನ್ನು ಪ್ರಸಾರ/ಪ್ರಚಾರ/ ಮುದ್ರಣ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ. ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ ಆರೋಪ ಪಟ್ಟಿಯಲ್ಲಿ ಗೌಪ್ಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ನಿರ್ಬಂಧ ವಿಧಿಸಿ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡುವಂತೆ ದರ್ಶನ್‌ ಮಧ್ಯಂತರ ಪರಿಹಾರ ಕೋರಿದ್ದಾರೆ.

Kannada Bar & Bench
kannada.barandbench.com