ರೇಣುಕಾಸ್ವಾಮಿ ಕೊಲೆ ಪ್ರಕರಣ: ₹82 ಲಕ್ಷದ ಮೂಲ ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆಗೆ ಅನುಮತಿಸಿದ ನ್ಯಾಯಾಲಯ

ಪ್ರಕರಣ ಸಂಬಂಧ ದರ್ಶನ್‌ ಮತ್ತು ಇತರೆ ಆರೋಪಿಗಳಿಂದ ವಶಪಡಿಸಿಕೊಂಡಿರುವ ಸುಮಾರು ₹82 ಲಕ್ಷ ರೂಪಾಯಿ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಐಟಿ ಇಲಾಖೆ ಅರ್ಜಿ ಸಲ್ಲಿಸಿತ್ತು.
Actor Darshan with his girlfriend Pavitra Gowda
Actor Darshan with his girlfriend Pavitra Gowda
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್‌ ಅವರು ಸಾಕ್ಷ್ಯ ನಾಶಪಡಿಸಿ, ಪಾರಾಗಲು ಮತ್ತು ತನ್ನ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಲು ಕೆಲ ಆರೋಪಿಗಳಿಗೆ ನೀಡಿದ್ದ ಹಣದ ಮೂಲದ ಕುರಿತು ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಅನುಮತಿ ನೀಡಿ ಬೆಂಗಳೂರು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಬುಧವಾರ ಆದೇಶಿಸಿದೆ.

ಪ್ರಕರಣ ಸಂಬಂಧ ದರ್ಶನ್‌ ಮತ್ತು ಇತರೆ ಆರೋಪಿಗಳಿಂದ ವಶಪಡಿಸಿಕೊಂಡಿರುವ ಸುಮಾರು ₹82 ಲಕ್ಷ ರೂಪಾಯಿ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕಿದೆ. ಆ ಹಣವನ್ನು ತಮ್ಮ ಸುಪರ್ದಿಗೆ ನೀಡಲು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಐ ಪಿ ನಾಯಕ್‌ ಪುರಸ್ಕರಿಸಿದ್ದಾರೆ.

Judge IP Naik
Judge IP Naik

ಆರೋಪಿಗಳಿಂದ ವಶಪಡಿಸಿಕೊಂಡಿರುವ ಹಣವನ್ನು ಆದಾಯ ತೆರಿಗೆ ಇಲಾಖೆಯ ಸುಪರ್ದಿಗೆ ನೀಡುವಂತೆ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಇದೇ ವೇಳೆ ಕೊಲೆಗೀಡಾಗಿರುವ ರೇಣುಕಾಸ್ವಾಮಿ ಅವರ ತಂದೆ ಹಾಗೂ ತಾಯಿ (ಸಾಕ್ಷಿ ಸಂಖ್ಯೆ 7-8) ಅವರು ವಿಚಾರಣೆಗೆ ಹಾಜರಾಗಲು ಸಮನ್ಸ್‌ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ಅರ್ಜಿ ಮತ್ತು 14ನೇ ಆರೋಪಿ ಪ್ರದೋಷ್‌ ಎಸ್‌.ರಾವ್‌ನ ಜಾಮೀನು ಅರ್ಜಿಯ ಆದೇಶವನ್ನು ಗುರುವಾರವೇ ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಪ್ರಕರಣದ ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಹಾಯಕ ವಿಶೇಷ ಸರ್ಕಾರಿ ಅಭಿಯೋಜಕ ಸಚಿನ್‌ ಅವರು ಪ್ರಮುಖ ಸಾಕ್ಷಿಗಳಾಗಿರುವ ಮೃತ ರೇಣುಕಾಸ್ವಾಮಿಯ ತಂದೆ-ತಾಯಿಯನ್ನು ಪಾಟಿ ಸವಾಲಿಗೆ ಒಳಪಡಿಸಬೇಕಿದೆ. ಹೀಗಾಗಿ, ವಿಚಾರಣೆಗೆ ಹಾಜರಾಗಲು ಅವರಿಗೆ ಸಮನ್ಸ್‌ ಜಾರಿಗೊಳಿಸಬೇಕು ಎಂದು ಕೋರಿದರು. ಈ ಮನವಿಯನ್ನು ಪವಿತ್ರಾ ಗೌಡ, ದರ್ಶನ್‌ ಹಾಗೂ ಇತರೆ ಆರೋಪಿಗಳ ಪರ ವಕೀಲರು ತೀವ್ರವಾಗಿ ಆಕ್ಷೇಪಿಸಿದರು.

ಪ್ರಕರಣದಲ್ಲಿ ಪಟ್ಟಿ ಮಾಡಿರುವ ಸಾಕ್ಷಿಗಳ ಪೈಕಿ, ತಾವು ಬಯಸಿದ ಸಂದರ್ಭದಲ್ಲಿ ಸಾಕ್ಷಿಗಳನ್ನು ಆಯ್ಕೆ ಮಾಡಿಕೊಂಡು (ಪಿಕ್‌ ಅಂಡ್‌ ಚೂಸ್‌) ವಿಚಾರಣೆ ನಡೆಸುವುದಕ್ಕೆ ಪ್ರಾಸಿಕ್ಯೂಷನ್‌ಗೆ (ತನಿಖಾಧಿಕಾರಿಗಳು) ಅವಕಾಶವಿಲ್ಲ. ಮೊದಲು ದೂರುದಾರ ಹಾಗೂ ಘಟನೆಯ ಪ್ರತ್ಯಕ್ಷ ದರ್ಶಿಗಳಿಗೆ ಸಮನ್ಸ್ ನೀಡಿ, ಅವರ ಸಾಕ್ಷ್ಯ ದಾಖಲಿಸಿಕೊಳ್ಳಬೇಕು. ನಂತರ ಪ್ರಾಸಿಕ್ಯೂಷನ್‌ ಸಿದ್ಧಪಡಿಸಿರುವ ಪಟ್ಟಿಯ ಅನುಕ್ರಮದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಸರದಿ ಪ್ರಕಾರವೇ ಸಾಕ್ಷಿಗಳಿಗೆ ಸಮನ್ಸ್ ಮಾಡಬೇಕು. ಹಾಗೆಯೇ, ಯಾವ ಸಮಯದಲ್ಲಿ; ಯಾವ ಸಾಕ್ಷಿಯನ್ನು ವಿಚಾರಣೆಗೆ ಕರೆಸಬೇಕು. ಯಾವ ಸಾಕ್ಷಿಯ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿರುತ್ತದೆ. ಅದನ್ನು ಪ್ರಾಸಿಕ್ಯೂಷನ್‌ ನಿರ್ಧರಿಸಲಾಗದು ಎಂದು ಆರೋಪಿಗಳ ಪರ ವಕೀಲರು ಆಕ್ಷೇಪಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಾಕ್ಷಿಗಳ ಪಾಟೀ ಸವಾಲು ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಲು ಸ್ವತಂತ್ರರಿದ್ದಾರೆ. ಇನ್ನೂ ಸಾಕ್ಷಿಗಳಿಗೆ ಸಮನ್ಸ್‌ ಜಾರಿಗೊಳಿಸಬೇಕು ಎಂಬ ಪ್ರಾಸಿಕ್ಯೂಷನ್‌ ಮನವಿ ಕುರಿತು ಗುರುವಾರ ತೀರ್ಮಾನ ತಿಳಿಸುವುದಾಗಿ ಹೇಳಿದರು.

ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿ ನ್ಯಾಯಾಂಗ ಬಂಧನದಲ್ಲಿರುವ ಎಲ್ಲಾ ಏಳು ಮಂದಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದರು. 4, 15 ಹಾಗೂ 17ನೇ ಆರೋಪಿಗಳಾದ ಎನ್‌ ರಾಘವೇಂದ್ರ, ವಿ ಕಾರ್ತಿಕ್‌ ಮತ್ತು ನಿಖಿಲ್‌ ನಾಯಕ್‌ ವಿಚಾರಣೆಗೆ ಗೈರಾಗಿದ್ದರು. ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿದ ಅವರ ಅರ್ಜಿಗಳನ್ನು ನ್ಯಾಯಾಲಯ ಒಪ್ಪಿತು. ನಂತರ ದರ್ಶನ್‌, ಪವಿತ್ರಾ ಗೌಡ ಹಾಗೂ ಇತರೆ ಐವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಡಿಸೆಂಬರ್‌ 17ರವರೆಗೆ ವಿಸ್ತರಿಸಿತು.

ದರ್ಶನ್‌ಗೆ ಸಿಗುವುದೇ ಟಿವಿ ಸೌಲಭ್ಯ?

ವಿಚಾರಣೆ ವೇಳೆ ಆರೋಪಿಗಳನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಏನಾದರೂ ತೊಂದರೆ ಇದೆಯೇ? ಏನಾದರೂ ಹೇಳಬೇಕಿದೆಯೇ ಎಂದು ಆರೋಪಿಗಳನ್ನು ಕೇಳಿದರು. ಆಗ ಜಗದೀಶ್‌ ಮುಂದೆ ಬಂದು, ಸ್ವಾಮಿ.. ನಾನು ಚಿತ್ರದುರ್ಗದ ಜೈಲಿಗೆ ವರ್ಗಾವಣೆ ಮಾಡಲು ಕೋರಿ ಅರ್ಜಿ ಸಲ್ಲಿಸಿದ್ದೆ ಎಂದರು. ಅದಕ್ಕೆ ನ್ಯಾಯಾಧೀಶರು, ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂದರು. ಬಳಿಕ ನಂತರ ಆರೋಪಿ ಲಕ್ಷ್ಮಣ್‌, ಜೈಲಿನ ಕೊಠಡಿಯಲ್ಲಿಯೇ ಇರುತ್ತಿದ್ದೇವೆ. ಇದರಿಂದ ಸಮಯ ಕಳೆಯಲು ಕಷ್ಟವಾಗುತ್ತಿದ್ದು, ಖಿನ್ನತೆಗೂ ಒಳಗಾಗುತ್ತಿದ್ದೇವೆ. ಖಿನ್ನತೆಯಿಂದ ಹೊರಬರಲು ಅನುಕೂಲವಾಗುವಂತೆ ನಾವು ಇರುವ ಕೋಣೆಗೆ ಟಿ ವಿ ಸೌಲಭ್ಯ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ಸೂಚಿಸಬೇಕು. ಎಲ್ಲಾ ಆರೋಪಿಗಳ ಪರವಾಗಿ ನಾನು ಈ ಮನವಿ ಮಾಡುತ್ತಿದ್ದೇನೆ ಎಂದು ಕೋರಿದರು.

ಆಗ ನ್ಯಾಯಾಧೀಶರು, ನಿಮ್ಮ ಮನವಿ ಕುರಿತು ಆದೇಶ ಮಾಡಲಾಗುವುದು ಎಂದರು. ಲಕ್ಷ್ಮಣ್‌, ದರ್ಶನ್‌ ಹಾಗೂ ಪ್ರಕರಣದ ಇತರೆ ಆರೋಪಿಗಳು ಒಂದೇ ಕೋಣೆಯಲ್ಲಿದ್ದಾರೆ.

Kannada Bar & Bench
kannada.barandbench.com