
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಇಂದು ವಿಚಾರಣೆಗೆ ಹಾಜರಾಗದಿದ್ದಕ್ಕೆ ಗರಂ ಆಗಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಮಂಗಳವಾರ ಸೂಚಿಸಿದೆ. ಉಳಿದ 16 ಮಂದಿ ಆರೋಪಿಗಳು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿದ್ದರು.
ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಜೈಶಂಕರ್ ವಿಚಾರಣೆ ನಡೆಸಿದರು.
ಪ್ರಕರಣದಲ್ಲಿ 6ನೇ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಮತ್ತು 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು ಚಿತ್ರದುರ್ಗಕ್ಕೆ ತೆರಳಲು ನ್ಯಾಯಾಲಯ ಅನುಮತಿಸಿದ್ದು, 14ನೇ ಆರೋಪಿ ಪ್ರದೋಶ್ ಎಸ್. ರಾವ್ ಅವರು ಎಚ್ ಡಿ ಕೋಟೆಗೆ ತೆರಳಲು ಅವಕಾಶ ಕಲ್ಪಿಸಿದೆ.
ತನಿಖೆಯ ಸಂದರ್ಭದಲ್ಲಿ ಜಫ್ತಿ ಮಾಡಿರುವ ₹34 ಲಕ್ಷ ಬಿಡುಗಡೆಗೆ ಸಂಬಂಧಿಸಿದಂತೆ ದರ್ಶನ್ ಸಲ್ಲಿಸಿರುವ ಅರ್ಜಿ ಹಾಗೂ ಆದಾಯ ತೆರಿಗೆ ಇಲಾಖೆ ಸಲ್ಲಿಸಿರುವ ಅರ್ಜಿಗಳ ಕುರಿತು ವಾದಿಸಲು ದರ್ಶನ್ ಪರ ವಕೀಲರು ಇದೇ ವೇಳೆ ಕಾಲಾವಕಾಶ ಕೋರಿದರು. ಈ ಕುರಿತ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ 16ಕ್ಕೆ ಮುಂದೂಡಿದೆ. ಅಲ್ಲದೇ, ಆರೋಪ ನಿಗದಿಗೂ ಮುನ್ನ ವಾದವನ್ನು ಮೇ 20ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.