

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಸಾಕ್ಷಿಯಾಗಿರುವ ಪ್ರದೋಷ್ ರಾವ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಆದೇಶ ರದ್ದು ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಪ್ರಕಟಿಸಲಿದೆ.
ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠವು ಬುಧವಾರ ಬೆಳಗ್ಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ಅಲ್ಲದೆ, ಪ್ರದೋಷ್ ಅನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರೊಬೆಷನ್ ಅಧಿಕಾರಿಯಿಂದ ವರದಿ ಪಡೆದಿರುವ ಕ್ರಮಕ್ಕೆ ಸೀಮಿತವಾಗಿ ವಿಚಾರಣಾ ನ್ಯಾಯಾಲಯದ (ಸತ್ರ ನ್ಯಾಯಾಲಯ) ಆದೇಶವನ್ನು ರದ್ದುಪಡಿಸಲಾಗುವುದು. ಪ್ರದೋಷ್ ಅವರ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಕೋರಿಕೆಯನ್ನು ಪುನಾ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಲಾಗುವುದು. ಎರಡು ದಿನದಲ್ಲಿ ಹೊಸದಾಗಿ ಆದೇಶ ಮಾಡುವಂತೆ ನಿರ್ದೇಶಿಸಲಾಗುವುದು ಎಂದು ಪೀಠ ಮೌಖಿಕವಾಗಿ ತಿಳಿಸಿದೆ.
ಇದಕ್ಕೂ ಮುನ್ನ, ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು “ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಹೊರಡಿಸಿದ ಆದೇಶದಲ್ಲಿ ವಿಚಾರಣಾ ನ್ಯಾಯಾಲಯವು ಅಸ್ವಿತ್ವದಲ್ಲಿದ್ದ ಕಾನೂನು ಪ್ರಕ್ರಿಯೆ ಅನುಸರಿಸಿದೆ. ಪ್ರೊಬೇಷನ್ ಅಧಿಕಾರಿಯಿಂದ ಪ್ರದೋಷ್ ಬಗ್ಗೆ ವರದಿ ಪಡೆದಿದೆ. ಪ್ರದೋಷ್ ಒಳ್ಳೆಯ ವ್ಯಕ್ತಿ ಎಂದು ಪ್ರೊಬೆಷನ್ ಅಧಿಕಾರಿ ವರದಿ ನೀಡಿದ್ದಾರೆ. ಆರೋಪಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಾಗ ಯಾವ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕೋ ಅದನ್ನೇ ಅನುಸರಿಸಬೇಕು” ಎಂದು ತಿಳಿಸಿದರು.
“ಬೇರೆ ಪ್ರತ್ಯಕ್ಷ ಸಾಕ್ಷಿಗಳೇ ಇಲ್ಲದಿದ್ದಾಗ ಮಾತ್ರ ಮಾಫಿ ಸಾಕ್ಷಿ ಪರಿಗಣಿಸಬೇಕು. ಆದರೆ, ಈ ಪ್ರಕರಣದಲ್ಲಿ ಬೇರೆ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಹೀಗಿದ್ದರೂ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಈ ಕ್ರಮ ಸರಿಯಲ್ಲ. ವಿಚಾರಣಾ ನ್ಯಾಯಾಲಯವು ಸ್ವತಃ ಪ್ರಾಸಿಕ್ಯೂಟರ್ ಪಾತ್ರವನ್ನು ನಿರ್ವಹಿಸಿದೆ” ಎಂದು ಪೀಠಕ್ಕೆ ವಿವರಿಸಿದರು.
ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗಳ ಪರ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ “ಪ್ರೊಬೇಷನ್ ಅಧಿಕಾರಿಯ ವರದಿ ಕೇಳಿರುವುದಕ್ಕೆ ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ಕಾರಣ ನೀಡಿದೆ. ಪ್ರೊಬೆಷನ್ ಅಧಿಕಾರಿಯಿಂದ ವರದಿ ಪಡೆಯುವುದು ಕಾನೂನಿನಲ್ಲಿ ಕಡ್ಡಾಯವೇನಿಲ್ಲ. ಆದರೆ, ಪ್ರೊಬೆಷನ್ ಅಧಿಕಾರಿಯಿಂದ ವರದಿಯ ಒಪ್ಪಬಹುದು ಎಂದಷ್ಟೇ ಇದೆ. ಪ್ರೊಬೆಷನ್ ಅಧಿಕಾರಿಯಿಂದ ವರದಿ ಪಡೆಯಲು ಪ್ರಾಸಿಕ್ಯೂಷನ್ ಸಹ (ತನಿಖಾಧಿಕಾರಿಗಳು) ವಿಚಾರಣಾ ನ್ಯಾಯಾಲಯವನ್ನು ಕೇಳಿರಲಿಲ್ಲ” ಎಂದು ತಿಳಿಸಿದರು.
ಆಗ ಪೀಠವು “ಪ್ರೊಬೆಷನ್ ಅಧಿಕಾರಿಯಿಂದ ವರದಿ ಪಡೆಯಲು ಕಾನೂನು ಎಲ್ಲಿದೆ? ಪ್ರೊಬೇಷನ್ ಅಧಿಕಾರಿಯ ವರದಿ ರದ್ದುಪಡಿಸಬಹುದಲ್ಲವೇ?” ಎಂದು ಎಸ್‌ಪಿಪಿ ಅವರನ್ನು ಕೇಳಿತು.
ನಂತರ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಕೊರತೆ ವಿಚಾರವು ಮೆರಿಟ್ ಅಂಶಕ್ಕೆ ಸಂಬಂಧಪಟ್ಟಿದೆ. ಮೆರಿಟ್ ಆಧಾರದಲ್ಲಿ ಈ ಅರ್ಜಿಯನ್ನು ಪರಿಣಿಸಲಾಗದು. ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆದ ಕ್ರಮವನ್ನು ಮಾತ್ರ ಪರಿಗಣಿಸಲಾಗುವುದು ಎಂದು ಪೀಠ ಮೌಖಿಕವಾಗಿ ನುಡಿಯಿತು.