ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷ್ಯಾಧಾರದ 10 ದಾಖಲೆಗಳನ್ನು ನ್ಯಾಯಾಲಯದ ಮುಂದಿರಿಸಿದ ಸರ್ಕಾರ

ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಐ ಪಿ ನಾಯಕ್‌ ಅವರು ಪ್ರಕರಣದ ವಿಚಾರಣೆ ನಡೆಸಿದರು.
Darshan Thoogudeepa and Pavithra Gowda
Darshan Thoogudeepa and Pavithra Gowda Image source: Instagram, Facebook
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ವಿವಿಧ ಸಾಕ್ಷ್ಯಾದಾರಗಳ ಮಾಹಿತಿ ಒಳಗೊಂಡ 10 ದಾಖಲೆಗಳನ್ನು ವಿಚಾರಣಾ ನ್ಯಾಯಾಲಯದ ಮುಂದಿರಿಸಿರುವ ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಅವುಗಳನ್ನು ಒಪ್ಪಿಕೊಳ್ಳುವಂತೆ ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ಸೋಮವಾರ ಮನವಿ ಮಾಡಿದರು.

ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಐ ಪಿ ನಾಯಕ್‌ ಅವರು ಪ್ರಕರಣದ ವಿಚಾರಣೆ ನಡೆಸಿದರು.

ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್‌ ಅವರು ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 294 ಅಡಿಯಲ್ಲಿ ಅರ್ಜಿ ಸಲ್ಲಿಸಿದರು. ಪ್ರಕರಣದ ಮುಖ್ಯ ವಿಚಾರಣೆಗೆ ಒಳಪಡಿಸಬಹುದಾದ ಸಾಕ್ಷಿಗಳು ಮತ್ತು ಸಾಕ್ಷ್ಯಧಾರಗಳ ವಿವರಗಳನ್ನು ಹೊಂದಿರುವ ಒಟ್ಟು 10 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅವುಗಳನ್ನು  ಆರೋಪಿಗಳ ಒಪ್ಪಿಗೆ ಮೇರೆಗೆ ಅಂಗೀಕರಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆರೋಪಿಗಳ ಪರ ವಕೀಲರು, ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನಮ್ಮ ನಿಲುವು ತಿಳಿಸಲಾಗುವುದು. ಅದಕ್ಕಾಗಿ ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ನ್ಯಾಯಾಧೀಶರು ಪ್ರತಿಕ್ರಿಯಿಸಿ, ಸರ್ಕಾರಿ ಅಭಿಯೋಜಕರ ಮನವಿಗೆ ನಿಲುವು/ಅಭಿಪ್ರಾಯವನ್ನು ತಿಳಿಸಬೇಕು ಎಂದು ಆರೋಪಿಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್‌ 19ಕ್ಕೆ ಮುಂದೂಡಿದರು.

ಜೈಲಿನಿಂದ ದರ್ಶನ್‌ ಮತ್ತು ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. 4ನೇ ಆರೋಪಿ ರಾಘವೇಂದ್ರ ಮತ್ತು 16ನೇ ಆರೋಪಿ ಕೇಶವಮೂರ್ತಿ ಹೊರತುಪಡಿಸಿ ಜಾಮೀನು ಮೇಲಿರುವ ಉಳಿದ ಎಂಟು ಮಂದಿ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಕೇಶವಮೂರ್ತಿ ಮತ್ತು ರಾಘವೇಂದ್ರ ಪರ ವಕೀಲರು ವಿಚಾರಣೆಯಿಂದ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು.

ಇದೇ ವೇಳೆ ಜೈಲಿನಲ್ಲಿರುವ 6ನೇ ಆರೋಪಿ ಜಗದೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಿತ್ರದುರ್ಗ ಜಿಲ್ಲಾ ಕಾರಗೃಹಕ್ಕೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರಿ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು.

Kannada Bar & Bench
kannada.barandbench.com