ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೂರನೇ ಆರೋಪಿ ಪವನ್‌ ಸ್ಥಳಾಂತರ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

ದರ್ಶನ್‌ ಜೈಲಿನಲ್ಲಿ ರೌಡಿಗಳ ಜೊತೆಗೆ ಆರಾಮವಾಗಿ ಚಹಾ ಹೀರುತ್ತಾ ಸಿಗರೇಟು ಸೇದುತ್ತಿರುವ ಚಿತ್ರಗಳು ವೈರಲ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್‌ ಎಲ್ಲಾ ಕೈದಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲು ಮನವಿ ಮಾಡಿತ್ತು.
Parappana Agrahara Central Prison and Karnataka HC
Parappana Agrahara Central Prison and Karnataka HC
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ ಜೊತೆ ಸೇರಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮೂರನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌ ಅವರನ್ನು ಬೆಂಗಳೂರಿನಿಂದ ಮೈಸೂರು ಜೈಲಿಗೆ ಸ್ಥಳಾಂತರಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ರದ್ದುಪಡಿಸಿದೆ.

ಬೆಂಗಳೂರಿನ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪವನ್‌ ಅವರನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲು ಆಗಸ್ಟ್ 27ರಂದು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿತು.

ವಿಚಾರಣೆ ವೇಳೆ ಪವನ್‌ ಪರ ವಕೀಲರು “ಈಗಾಗಲೇ ಇದೇ ಪ್ರಕರಣದ 14ನೇ ಆರೋಪಿ ಪ್ರದೋಷ್‌ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿ ಜೈಲಿಗೆ ಸ್ಥಳಾಂತರಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಹೀಗಾಗಿ, ಈ ಆದೇಶವು ಪವನ್‌ ವಿಷಯದಲ್ಲೂ ಅನ್ವಯಿಸಲಿದೆ” ಎಂಬ ಅಂಶವನ್ನು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಸಕಾರಣಗಳಿಲ್ಲದೆ ಸುಖಾಸುಮ್ಮನೆ ಅರ್ಜಿದಾರನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸಲಾಗಿದೆ. ಇಂತಹ ಪ್ರಕರಣಗಳಿಂದ ರಾಜ್ಯ ಸರ್ಕಾರದ ಹಣ ವ್ಯರ್ಥವಾಗುತ್ತದೆ ಅಷ್ಟೇ. ಜೈಲುಗಳ ಸ್ಥಿತಿ ಭಯಾನಕವಾಗಿದೆ. ಇವುಗಳ ಸುಧಾರಣೆ ಅಗತ್ಯವಿದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಅಂತೆಯೇ, ಪವನ್‌ ಅವರನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಿದ್ದ ಆದೇಶವನ್ನು ರದ್ದುಪಡಿಸಿತು.

Also Read
ಬೆಳಗಾವಿಯ ಜೈಲಿಗೆ ವರ್ಗಾವಣೆಗೊಂಡಿದ್ದ ಪ್ರದೋಷ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲು ಹೈಕೋರ್ಟ್‌ ಆದೇಶ

ನಟ ದರ್ಶನ್‌ ಅವರು ಜೈಲಿನಲ್ಲಿ ಕೆಲವು ರೌಡಿಗಳ ಜೊತೆಗೆ ಆರಾಮವಾಗಿ ಚಹಾ ಹೀರುತ್ತಾ ಸಿಗರೇಟು ಸೇದುತ್ತಿರುವ ಚಿತ್ರಗಳು ವೈರಲ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್‌ ಎಲ್ಲಾ ಕೈದಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇದು ಪುರಸ್ಕಾರಗೊಂಡ ಹಿನ್ನೆಲೆಯಲ್ಲಿ ಒಂಭತ್ತು ಆರೋಪಿಗಳನ್ನು ಧಾರವಾಡ, ಶಿವಮೊಗ್ಗ, ವಿಜಯಪುರ, ಕಲಬುರ್ಗಿ, ಮೈಸೂರು, ಬಳ್ಳಾರಿ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು.

Kannada Bar & Bench
kannada.barandbench.com