ರೇಣುಕಾಸ್ವಾಮಿ ಕೊಲೆ ಪ್ರಕರಣ; ಪ್ರಮುಖ ಸಾಕ್ಷಿಗಳ ಪಾಟಿ ಸವಾಲಿನ ವೇಳೆ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್ ಅನುಮತಿ

ಸೂಕ್ತ ಭದ್ರತೆ ಕೊಟ್ಟು ಆರೋಪಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವುದು ಸರ್ಕಾರದ ಹೊಣೆಯಲ್ಲವೇ? ದರ್ಶನ್‌ ಸದ್ಯ ಆರೋಪಿ ಮಾತ್ರ. ವಿಚಾರಣೆಯ ಪ್ರತಿ ವಿದ್ಯಮಾನವು ಆರೋಪಿ ಸಮ್ಮುಖದಲ್ಲೇ ನಡೆಯಬೇಕೆಂದಿದೆ ಎಂದ ಪೀಠ.
Darshan and Karnataka HC
Darshan and Karnataka HC
Published on

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ 7 ಸಾಕ್ಷಿಗಳ ಪಾಟಿ ಸವಾಲು (ಕ್ರಾಸ್‌ ಎಕ್ಸಾಮಿನೇಷನ್) ನಡೆಸುವ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಲು ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ಪ್ರಕರಣದ ಸಾಕ್ಷಿಗಳ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಭೌತಿಕವಾಗಿ ಹಾಜರಾಗಲು ಅನುಮತಿ ನಿರಾಕರಿಸಿದ್ದ ಬೆಂಗಳೂರಿನ 58ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ಶುಕ್ರವಾರ ವಿಲೇವಾರಿ ಮಾಡಿದೆ.

Justice V Srishananda
Justice V Srishananda

ಒಂದು ವರ್ಷದಲ್ಲಿ ಪ್ರಕರಣದ 60 ಸಾಕ್ಷಿಗಳ ವಿಚಾರಣೆ ಮುಗಿಯಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲಾದ 60 ಸಾಕ್ಷಿಗಳ ಪಟ್ಟಿಯಲ್ಲಿ ಸದ್ಯ ಹೆಸರಿಸಲಾಗಿರುವ 7 ಪ್ರಮುಖ ಸಾಕ್ಷಿಗಳು ಸೇರಿರಬೇಕು. ಮೊದಲಿಗೆ ಈ ಏಳು ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ಪ್ರಾಸಿಕ್ಯೂಷನ್‌ (ತನಿಖಾಧಿಕಾರಿಗಳ) ಪರ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಸಿ) ನಡೆಸಬೇಕು. ಈ ಸಂದರ್ಭದಲ್ಲಿ ದರ್ಶನ್‌ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಾಸಿಕ್ಯೂಷನ್‌ ಮುಖ್ಯ ವಿಚಾರಣೆ ಬಳಿಕ ಪಾಟಿ ಸವಾಲು ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಪ್ರತ್ಯೇಕ ಎರಡು-ಮೂರು ದಿನ ನಿಗದಿಪಡಿಸಬೇಕು. ಯಾವಾಗ ಪಾಟಿ ಸವಾಲು ನಡೆಸಬೇಕು ಎಂಬ ಬಗ್ಗೆ ಸತ್ರ ನ್ಯಾಯಾಲಯವು ದರ್ಶನ್‌ ಪರ ವಕೀಲರು ಮತ್ತು ಎಸ್‌ಪಿಪಿ ಅವರೊಂದಿಗೆ ಸಮಾಲೋಚಿಸಿದ ನಂತರ ನಿಗದಿಪಡಿಸಬೇಕು. ನಿಗಿದಿತ ದಿನದಂದು ಪಾಟಿ ಸವಾಲು ನಡೆಸಬೇಕು. ಆರೋಪಿಗಳು ವಿಚಾರಣೆ ಮಂದೂಡಿಕೆಗೆ ಕೇಳಬಾರದು. ಅಗತ್ಯವಾದರೆ ಮಾತ್ರ ಒಂದೆರಡು ದಿನ ಪಾಟಿ ಸವಾಲು ಪ್ರಕ್ರಿಯೆಯನ್ನು ವಿಸ್ತರಣೆ ಮಾಡಲು ಸತ್ರ ನ್ಯಾಯಾಧೀಶರು ಮುಕ್ತರಾಗಿದ್ದಾರೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಈ ಏಳು ಪ್ರಮುಖ ಸಾಕ್ಷಿಗಳ ಪಾಟಿ ಸವಾಲು ವೇಳೆ ದರ್ಶನ್‌ ಸೇರಿ ಅನುಮತಿ ಕೋರುವ ಇತರ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕ್ಷಕರು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕು. ಅಗತ್ಯವಿದ್ದರೆ ಸತ್ರ ನ್ಯಾಯಾಧೀಶರು ಪಾಟಿ ಸವಾಲು ಪ್ರಕ್ರಿಯೆಯನ್ನು ಗೌಪ್ಯ ಪ್ರಕ್ರಿಯೆಯ ಮೂಲಕ ನಡೆಸಬಹುದು. ಪ್ರಕರಣದ ಸೂಕ್ಷ್ಮತೆ ಮತ್ತು ವಿಚಿತ್ರ ಸನ್ನಿವೇಶ ಪರಿಗಣಿಸಿ ಈ ಆದೇಶ ಮಾಡಲಾಗುತ್ತಿದೆ. ಇದು ಇತರ ಯಾವುದೇ ಪ್ರಕರಣಕ್ಕೆ ನಿದರ್ಶನವಾಗುವುದಿಲ್ಲ ಎಂದು ಸೂಚಿಸಿರುವ ಪೀಠ ಅರ್ಜಿ ಇತ್ಯರ್ಥಪಡಿಸಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ದರ್ಶನ್‌ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ ಅವರು, ಏಳು ಜನ ಪ್ರಮುಖ ಸಾಕ್ಷಿಗಳ ಪಟ್ಟಿಯನ್ನು ಪೀಠಕ್ಕೆ ಸಲ್ಲಿಸಿದರಲ್ಲದೆ, ಈ ಏಳೂ ಸಾಕ್ಷಿಗಳ ವಿಚಾರಣೆ/ಹೇಳಿಕೆ ದಾಖಲು ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ದರ್ಶನ್‌ ಅವಕಾಶ ಕಲ್ಪಿಸಿ ಆದೇಶಿಸುವಂತೆ ಕೋರಿದರು.

ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು, ಆರೋಪಿಗಳ ಖುದ್ದು ಹಾಜರಿ ಅಗತ್ಯವಾಗಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಿರುವ ಪ್ರಕರಣಗಳ ಆರೋಪಿಗಳೂ ಸಹ ಸಾಕ್ಷಿಗಳ ವಿಚಾರಣೆ ವೇಳೆ ತಮ್ಮನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲು ಕೇಳಿದರೆ ಕಷ್ಟವಾಗುತ್ತದೆ. ಸುಮಾರು 1,616 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಇತರ ಆರೋಪಿಗಳು ಖುದ್ದು ಹಾಜರಾತಿಗೆ ಕೇಳಿದರೆ ಸಮಸ್ಯೆ ಆಗಲಿದೆ ಎಂದು ಆಕ್ಷೇಪಿಸಿದರಲ್ಲದೆ, ಖುದ್ದು ಹಾಜರಾತಿ ಬದಲು ಇ‌-ಮುಲಾಕತ್ ಸೌಲಭ್ಯದಡಿ ಆರೋಪಿಯೊಂದಿಗೆ ಸಂಭಾಷಣೆ ನಡೆಸಬಹುದು ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಈ ಪ್ರಮುಖ ಏಳು ಸಾಕ್ಷಿಗಳಲ್ಲಿ ಮಾಫಿ ಸಾಕ್ಷಿಯೂ ಇರುವುದರಿಂದ ವಿಶಿಷ್ಟ ಪ್ರಕರಣ ಇದಾಗಿದೆ. ಇತರ ಪ್ರಕರಣಗಳಲ್ಲಿ ಇದೇ ಮಾದರಿ ಅನುಸರಿಸಲಾಗದು ಎಂದು ನುಡಿಯಿತು. ಜತೆಗೆ, ಸೂಕ್ತ ಭದ್ರತೆ ಕೊಟ್ಟು ಆರೋಪಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವುದು ಸರ್ಕಾರದ ಹೊಣೆಯಲ್ಲವೇ? ದರ್ಶನ್‌ ಸದ್ಯ ಆರೋಪಿ ಮಾತ್ರ. ವಿಚಾರಣೆಯ ಪ್ರತಿ ವಿದ್ಯಮಾನವು ಆರೋಪಿ ಸಮ್ಮುಖದಲ್ಲೇ ನಡೆಯಬೇಕೆಂದಿದೆ. ಆದ್ದರಿಂದ, ನ್ಯಾಯಾಲಯಗಳ ಮೇಲೆಯೂ ಆರೋಪಿಯ ಭದ್ರತೆ ಹೊಣೆ ಇರುತ್ತದೆ ಎಂದು ಅಭಿಪ್ರಾಯಟ್ಟು ಮೇಲಿನಂತೆ ಆದೇಶಿಸಿತು.

ಏಳು ಮಂದಿ ಪ್ರಮುಖ ಸಾಕ್ಷಿಗಳಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ ರಾವ್, ರೇಣುಕಸ್ವಾಮಿ ಶವಪರಿಕ್ಷೆ ನಡೆಸಿದ ವೈದ್ಯರು ಮತ್ತು ಮೂರು ಮಂದಿ ತನಿಖಾಧಿಕಾರಿಗಳಿದ್ದಾರೆ.

Kannada Bar & Bench
kannada.barandbench.com