[ರೇಣುಕಾಸ್ವಾಮಿ ಕೊಲೆ ಪ್ರಕರಣ] ಪವಿತ್ರಾ ಗೌಡ ಹೊಸ ಜಾಮೀನು ಅರ್ಜಿ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ವಿಚಾರಣೆ ಪ್ರಗತಿ ಹಾಗೂ ಈವರೆಗೆ ದಾಖಲಾಗಿರುವ ಸಾಕ್ಷ್ಯಗಳನ್ನು ಪರಿಗಣಿಸಿ ಜಾಮೀನು ನೀಡುವಂತೆ ಪವಿತ್ರಾ ಗೌಡ ಮನವಿ; ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.
[ರೇಣುಕಾಸ್ವಾಮಿ ಕೊಲೆ ಪ್ರಕರಣ] ಪವಿತ್ರಾ ಗೌಡ ಹೊಸ ಜಾಮೀನು ಅರ್ಜಿ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
Published on: 

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಸಲ್ಲಿಸಿರುವ ಹೊಸ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

Justice S Vishwajith Shetty
Justice S Vishwajith Shetty

2024ರ ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಪವಿತ್ರಾ ಗೌಡ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, 2025ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು.

ಇದೀಗ ಪವಿತ್ರಾ ಗೌಡ ಹೊಸದಾಗಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿರುವುದು ಹಾಗೂ ಈವರೆಗೆ ದಾಖಲಾಗಿರುವ ಸಾಕ್ಷ್ಯಗಳು ತಮ್ಮ ಜಾಮೀನು ಮನವಿಯನ್ನು ಮರುಪರಿಶೀಲಿಸಲು ಆಧಾರವಾಗಿವೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.

ಈ ಹಿಂದೆ ಸಲ್ಲಿಸಿದ್ದ ಹೊಸ ಜಾಮೀನು ಅರ್ಜಿಯನ್ನು ಬೆಂಗಳೂರಿನ ಸತ್ರ ನ್ಯಾಯಾಲಯ ಸೆಪ್ಟೆಂಬರ್ 26ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಪರ ವಕೀಲರಾದ ನಾರಾಯಣಸ್ವಾಮಿ ಜಿ, ರಾಕೇಶ್ ಎಸ್ ಎನ್ ಮತ್ತು ಚಿನ್ಮಯಿ ಎಂ ವಾದ ಮಂಡಿಸಿದರು.

ಪ್ರಕರಣದಲ್ಲಿ ಈವರೆಗೆ ಪ್ರಾಸಿಕ್ಯೂಷನ್ 34 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಇನ್ನೂ ಹಲವು ಸಾಕ್ಷಿಗಳ ವಿಚಾರಣೆ ಬಾಕಿ ಇದ್ದು, ವಿಚಾರಣೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಪವಿತ್ರಾ ಗೌಡ ಅರ್ಜಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಪ್ರಕರಣದಲ್ಲಿ ತಮ್ಮ ಮೇಲಿರುವ ಆರೋಪಿತ ಪಾತ್ರವನ್ನು ಇತರ ಆರೋಪಿಗಳ ಪಾತ್ರದಿಂದ ಪ್ರತ್ಯೇಕವಾಗಿ ಪರಿಗಣಿಸಬೇಕು. ಇತರ ಆರೋಪಿಗಳು ಎಸಗಿದ್ದಾರೆ ಎನ್ನಲಾದ ಕೃತ್ಯಗಳಿಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ಅವರು ವಾದಿಸಿದ್ದಾರೆ.

"ತಮ್ಮ ವಿರುದ್ಧ ಆರೋಪಿಸಲಾಗಿರುವ ನಡವಳಿಕೆ ಮತ್ತು ಇತರ ಆರೋಪಿಗಳು ನಡೆಸಿದ್ದಾರೆ ಎನ್ನಲಾದ ಮಾರಣಾಂತಿಕ ಹಲ್ಲೆಯ ನಡುವಿನ ವ್ಯತ್ಯಾಸವನ್ನು ಸ್ವತಂತ್ರವಾಗಿ ಪರಿಗಣಿಸಬೇಕಿದೆ" ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ತನಿಖೆಯ ಸಂದರ್ಭದಲ್ಲಿ ತಾವು ಸ್ವಯಂಪ್ರೇರಿತವಾಗಿ ಪೊಲೀಸರ ಮುಂದೆ ಹಾಜರಾಗಿದ್ದು, ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಜಾಮೀನು ನೀಡಿದರೆ ವಿಚಾರಣೆಗೆ ಸಹಕರಿಸುವುದಾಗಿ ಹಾಗೂ ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳನ್ನು ಪಾಲಿಸುವುದಾಗಿ ಭರವಸೆ ನೀಡಿದ್ದಾರೆ.

ತಮ್ಮ ಕುಟುಂಬದ ಪರಿಸ್ಥಿತಿಯನ್ನೂ ಅರ್ಜಿಯಲ್ಲಿ ಉಲ್ಲೇಖಿಸಿರುವ ಅವರು, 17 ವರ್ಷದ ಮಗಳು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ತಾನು ಒಂಟಿ ಪೋಷಕರಾಗಿರುವುದರಿಂದ ಆಕೆಯ ಆರೈಕೆಯ ಜವಾಬ್ದಾರಿ ತಮ್ಮ ಮೇಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ವೃದ್ಧ ತಂದೆ-ತಾಯಿಯೂ ತಮ್ಮ ನಿರಂತರ ಬಂಧನದಿಂದ ಭಾವನಾತ್ಮಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರನ್ನು 2024ರ ಜೂನ್ 11ರಂದು ಬಂಧಿಸಲಾಗಿತ್ತು. 2024ರ ಜೂನ್ 9ರಂದು ಬೆಂಗಳೂರಿನ ಸುಮ್ಮನಹಳ್ಳಿ ಸಮೀಪದ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್ ಬಳಿ ರೇಣುಕಾಸ್ವಾಮಿ ಅವರ ಮೃತದೇಹ ಪತ್ತೆಯಾಗಿತ್ತು.

ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಪವಿತ್ರಾ ಗೌಡ ಅವರ ಸಂಗಾತಿ ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿ ನಟ ದರ್ಶನ್ ಈ ಹಲ್ಲೆಗೆ ಪ್ರಚೋದನೆ ನೀಡಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಹಲ್ಲೆ ನಡೆಸಲಾಗಿತ್ತು. ಈ ಹಲ್ಲೆಯ ಪರಿಣಾಮ ಅವರು ಮೃತಪಟ್ಟಿದ್ದರು ಎಂಬುದು ಪೊಲೀಸರ ಆರೋಪವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ, ಕ್ರಿಮಿನಲ್ ಸಂಚು, ಅಪಹರಣ ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳಡಿ ಪೊಲೀಸರು ಒಟ್ಟು 17 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ.