ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಅರ್ಜಿ ಹಿಂಪಡೆದ 17ನೇ ಆರೋಪಿ ನಿಖಿಲ್‌ ನಾಯಕ್‌

ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು ಅರ್ಜಿ ವಾಪಸ್‌ ಪಡೆಯಲು ಅವಕಾಶ ನೀಡಬಾರದು. ನಮ್ಮ ವಾದ ಕೇಳಿ ನಂತರ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಕೋರಿದರು.
Darshan and Pavitra Gowda
Darshan and Pavitra Gowda

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 17ನೇ ಆರೋಪಿ ನಿಖಿಲ್‌ ನಾಯಕ್‌ ಜಾಮೀನು ಕೋರಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ಸೋಮವಾರ ಹಿಂಪಡೆದಿದ್ದಾರೆ.

ನಿಖಿಲ್‌ ನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಯಶಂಕರ್‌ ವಿಚಾರಣೆ ನಡೆಸಿದರು.

ಅರ್ಜಿದಾರ ನಿಖಿಲ್‌ ಪರ ವಕೀಲರು, ಜಾಮೀನು ಕೋರಿಕೆ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನು ಒಪ್ಪದ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು ಅರ್ಜಿ ವಾಪಸ್‌ ಪಡೆಯಲು ಅವಕಾಶ ನೀಡಬಾರದು. ನಮ್ಮ ವಾದ ಕೇಳಿ ನಂತರ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಕೋರಿದರು.

ಅಂತಿಮವಾಗಿ ನ್ಯಾಯಾಧೀಶರು “ಅರ್ಜಿ ವಾಪಸ್‌ ಪಡೆಯಲು ಅವಕಾಶ ನೀಡಲಾಗಿದೆ” ಎಂದು ತಿಳಿಸಿದರು. ಕಳೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಜಾಮೀನು ಅರ್ಜಿಗೆ ಬಲವಾದ ಆಕ್ಷೇಪ ಸಲ್ಲಿಸಿತ್ತು.

ಆರೋಪಿ ನಿತಿನ್‌ ನಾಯಕ್‌ ಮೃತ ಶರೀರವನ್ನು ಸಾಗಿಸುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದಾರೆ. ಘಟನೆಗೂ ಮುನ್ನ ಮತ್ತು ನಂತರ ಪ್ರಕರಣದ 15ನೇ ಆರೋಪಿ ಕಾರ್ತಿಕ್‌ ಅಲಿಯಾಸ್ ಕಪ್ಪೆ ಜೊತೆ ಫೋನ್‌ನಲ್ಲಿ ಮಾತನಾಡಿರುವುದು ಪತ್ತೆಯಾಗಿದ್ದು ಪಿತೂರಿಯ ಪ್ರಮುಖ ಆರೋಪಿ ಎನಿಸಿದ್ದಾರೆ. ಅಂತೆಯೇ, ತನಿಖೆ ಇನ್ನೂ ಬಾಕಿ ಇದೆ. ಪ್ರಕರಣದ ಪ್ರಮುಖ ಆರೋಪಿಯಾದ ನಟ ದರ್ಶನ್‌ ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್‌ ಆತಂಕ ವ್ಯಕ್ತಪಡಿಸಿತ್ತು.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರ ಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಜು.18ರವರೆಗೆ ವಿಸ್ತರಣೆ

ಘಟನೆ ನಂತರ ನಿಖಿಲ್ ನಾಯಕ್‌ ಸ್ವತಃ ಪೊಲೀಸರಿಗೆ ಶರಣಾಗಿರುವುದಲ್ಲದೆ, ನಿಖಿಲ್‌ ಬಳಿಯಿದ್ದ ನಾಲ್ಕೂವರೆ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ನಿಖಿಲ್‌ ಆಕ್ಷೇಪಿಸಿರುವಂತೆ ಪೊಲೀಸ್ ಕಸ್ಟಡಿಗೆ ಪಡೆಯುವ ಮುನ್ನ ರಿಮ್ಯಾಂಡ್‌ ಅರ್ಜಿ ಸಲ್ಲಿಸಿಲ್ಲ ಎಂಬುದು ಸಮರ್ಥನೀಯವಲ್ಲ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 167 ಮತ್ತು 172ರ ಪ್ರಕಾರ ಈ ಆರೋಪಿಗೆ ರಿಮ್ಯಾಂಡ್‌ ಅರ್ಜಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪ್ರಾಸಿಕ್ಯೂಷನ್‌ ಆಕ್ಷೇಪಣೆಯಲ್ಲಿ ಪ್ರತಿಪಾದಿಸಿತ್ತು.

Kannada Bar & Bench
kannada.barandbench.com