“ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವರದಿಗಾರಿಕೆಯನ್ನು ಪೂರ್ವಗ್ರಹ ಪೀಡಿತವಾಗಿ ಮಾಡಲಾಗಿದೆ. ಮಾಹಿತಿ ಸೋರಿಕೆ ಮಾಡಿರುವುದು ತನಿಖಾಧಿಕಾರಿಗಳ ಕರ್ತವ್ಯಲೋಪ. ಸ್ವ ಇಚ್ಛಾ ಹೇಳಿಕೆಯು ನ್ಯಾಯಾಲಯದ ದಾಖಲೆಗಳಾಗಿದ್ದು, ಅವುಗಳನ್ನೇ ಆಧರಿಸಿ ಚರ್ಚೆ ನಡೆಸಲಾಗಿದೆ. ಇದರಿಂದ ಮೀಡಿಯಾಗಳಿಂದ ಅಪರಾಧಿಕ ನ್ಯಾಯ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಆಗಿದೆ” ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ಪ್ರಬಲವಾಗಿ ನಟ ದರ್ಶನ್ ಪರವಾಗಿ ವಾದಿಸಿದರು.
ನಟ ದರ್ಶನ್, ಪವಿತ್ರಾಗೌಡ, ಲಕ್ಷ್ಮಣ್, ಲೋಕೇಶ್ ಮತ್ತು ರವಿಶಂಕರ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ನಡೆಸಿದರು.
ದರ್ಶನ್ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಪ್ರಬಲವಾಗಿ ವಾದಿಸಿದ್ದು, ತನಿಖಾಧಿಕಾರಿಗಳ ಲೋಪವನ್ನು ಎತ್ತಿ ತೋರಿಸುವ ಮೂಲಕ ನ್ಯಾಯಾಲಯದ ಗಮನ ಸೆಳೆದರು. ಎಲ್ಲಾ ಜಾಮೀನುಗಳ ವಿಚಾರಣೆಯನ್ನು ನ್ಯಾಯಾಲಯವು ನಾಳೆಗೆ ಮುಂದೂಡಿದೆ. ನಾಗೇಶ್ ಅವರ ಇಂದು ಮಂಡಿಸಿದ ಪ್ರಮುಖ ವಾದಾಂಶಗಳು ಇಂತಿವೆ:
ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರಮುಖವಾಗಿ ಮಾಧ್ಯಮ ವಿಚಾರಣೆ ಆಗುತ್ತಿದೆ. ಎಫ್ಐಆರ್‌ನಿಂದ ಹಿಡಿದು ವರದಿಗಳು, ಆರೋಪ ಪಟ್ಟಿವರೆಗೂ ಎಲ್ಲವೂ ಮೀಡಿಯಾದಲ್ಲಿ ವಿಚಾರಣೆ ಆಗುತ್ತಿದೆ. ಆರೋಪಿಗಳಿಗೆ ಯಾವ ಶಿಕ್ಷೆ ಆಗುತ್ತೆ ಅನ್ನೋವರೆಗೂ ಚರ್ಚೆ ಆಗಿದೆ. ನ್ಯಾಯಾಲಯ ಕೂಡ ಒಂದು ತೀರ್ಮಾನಕ್ಕೆ ಬಂದಿದೆ ಎಂಬಂತಹ ವರದಿ ಮಾಡಿವೆ. ಸಾಕ್ಷಿಗಳ ಪರಿಶೀಲನೆಯನ್ನೇ ಮಾಡಿಲ್ಲ. ಈ ಹಂತದಲ್ಲಿ ಪಾಸಿಂಗ್ ರೆಫರೆನ್ಸ್ ಅನ್ನು ತೀರ್ಪಿನ ರೀತಿಯಲ್ಲಿ ಬಿಂಬಿಸಿ ವರದಿ ಮಾಡಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರತಿಕೂಲ ಪ್ರಚಾರ ನಡೆಯುತ್ತಿದೆ.
ರಿಕವರಿ ಪಂಚನಾಮೆ, ಎಫ್ಐಆರ್ ಸೇರಿ ಎಲ್ಲವನ್ನೂ ಮಾಧ್ಯಮಗಳು ವರದಿ ಮಾಡಿವೆ. ಜೂಮ್ ಮಾಡಿ.. ಜೂಮ್ ಮಾಡಿ ತೋರಿಸಿದ್ದಾರೆ. ರೇಣುಕಾಸ್ವಾಮಿ ಶವಕ್ಕೆ ನಾಯಿ ಕಚ್ಚಿವೆ. ಇದನ್ನೇ ಜೂಮ್ ಮಾಡಿ ತೋರಿಸಲಾಗಿದೆ. ಪೂರ್ವಗ್ರಹ ಪೀಡಿತವಾಗಿ ವರದಿ ಮಾಡಲಾಗಿದೆ. ಮಾಹಿತಿ ಸೋರಿಕೆ ಮಾಡಿರುವುದು ತನಿಖಾಧಿಕಾರಿಗಳ ಕರ್ತವ್ಯಲೋಪ. ಸ್ವ ಇಚ್ಛಾ ಹೇಳಿಕೆ ನ್ಯಾಯಾಲಯದ ದಾಖಲೆ. ಆದರೆ ಇವುಗಳನ್ನೇ ಅಧರಿಸಿ ಚರ್ಚೆ ನಡೆಸಲಾಗಿದೆ. ಇದರಿಂದ ಮಾಧ್ಯಮಗಳಿಂದ ಅಪರಾಧಿಕ ನ್ಯಾಯ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಆಗಿದೆ.
ಮಾಧ್ಯಮ ವಿಚಾರಣೆ ಆಧರಿಸಿ ತನಿಖಾಧಿಕಾರಿ ವಿರುದ್ಧ ಕ್ರಮವಾಗಬೇಕು. ದರ್ಶನ್ ಘಟನಾ ಸ್ಥಳಕ್ಕೆ ಹೋಗಿದ್ದಾರೆ ಎನ್ನಲಾದ ಸ್ಥಳದಲ್ಲಿ ಸಿಕ್ಕಿರೋದು ಏನು? ಮರದ ಕೊಂಬೆಗಳು, ನೈಲಾನ್ ಹಗ್ಗ, ವಾಟರ್ ಬಾಟಲ್ ವಶಪಡಿಸಿಕೊಳ್ಳಲಾಗಿದೆ ಅಷ್ಟೇ. ಜೂನ್ 12 ರಂದು ಜಪ್ತಿ ಮಾಡಲಾಗಿದೆ ಎಂದು ತೋರಿಸಲಾಗಿದೆ. ಆದರೆ, ಜೂನ್ 9ರಂದೇ ಪೊಲೀಸರ ಬಳಿ ಈ ಎಲ್ಲಾ ಜಪ್ತಿ ಮಾಡಿರುವ ವಸ್ತುಗಳು ಇದ್ದವು!
ಪಟ್ಟಣಗೆರೆಯ ಷೆಡ್‌ನಲ್ಲಿ ಮಧ್ಯಾಹ್ನ 3.45 ರಿಂದ 8.30ರವರೆಗೆ ಮಹಜರು ನಡೆಸಲಾಗಿದೆ. ಒಂದು ಬಿದಿರಿನ ಬೆತ್ತ, ವಾಟರ್ ಬಾಟಲ್‌ನಲ್ಲಿ ಸ್ಟೋನಿ ಬ್ರೂಕ್ ಎಂಬ ಲೇಬಲ್ ಇದೆ, ಮರದ ಕೊಂಬೆ ಇರುತ್ತದೆ. ಸ್ಟೋನಿ ಬ್ರೂಕ್ ಲೇಬಲ್‌ನ ಪೋಟೋ ಇರುತ್ತದೆ. 4 ಅಡಿ ಹಗ್ಗ ಇದ್ದು ರಕ್ತದ ಕಲೆ ಇರುತ್ತದೆ ಎಂದು ಉಲ್ಲೇಖಿಸಲಾಗಿದೆ.
ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರಿಗೆ ಆರೋಪಿಗಳು ಕೊಲೆಯ ಜಾಗ ತಿಳಿಸುವುದಾಗಿ ಹೇಳಿದ್ದರು. ಹೀಗಾಗಿ ಪಂಚರನ್ನ ಸ್ಥಳಕ್ಕೆ, ಕರೆಸಿ ಪಂಚನಾಮೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೆಲ್ಲಾ ಆರೋಪಿಗಳ ಸ್ವ ಇಚ್ಛಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಲಾಗಿದೆ. ಆದರೆ ಕೊಲೆಯ ಬಗ್ಗೆ 12ರಂದು ಮಾಹಿತಿ ಪಡೆಯಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಉತ್ತರ ಭಾರತದ ಸೆಕ್ಯೂರಿಟಿ ಗಾರ್ಡ್ಅನ್ನು ಪ್ರತ್ಯಕ್ಷದರ್ಶಿಯೆಂದು ಹೇಳಿ ಕನ್ನಡದಲ್ಲಿ ಹೇಳಿಕೆ ದಾಖಲಿಸಲಾಗಿದೆ. ಆತನಿಗೆ ಕನ್ನಡ ಭಾಷೆಯೇ ಗೊತ್ತಿಲ್ಲ. ಇಟಿಯೋಸ್ ಕಾರು, ಕಪ್ಪು ಬಣ್ಣದ ಸ್ಕಾರ್ಪಿಯೋ, ಕೆಂಪು ಬಣ್ಣದ ಜೀಪ್, ಬಿಳಿಯ ಬಣ್ಣದ ಸ್ಕಾರ್ಪಿಯೋ ಯಾವ ಸಮಯಕ್ಕೆ ಬಂದವು, ಹೋದವು ಎಂಬ ಬಗ್ಗೆ ಹೇಳಿಕೆ ಇದೆ. ಮಂಗಳವಾರ ಪೊಲೀಸರು ಬಂದು ಉಗ್ರಾಣ ಜಪ್ತಿ ಮಾಡಿ ನಮ್ಮನ್ನ ಮನೆಗೆ ಕಳುಹಿಸಿದರು ಎಂದು ಹೇಳಿಕೆ ಇದೆ. ಇದು ಕ್ಲಾಸಿಕ್ ತನಿಖೆ ಆಗಲು ಸಾಧ್ಯವೇ? ಇದೊಂದು ಹೇಳಿ ಮಾಡಿಸಿದಂತಹ ಸಾಕ್ಷ್ಯವನ್ನು ತಿರುಚಿರುವ ಪ್ರಕರಣವಾಗಿದೆ.
ಮರುದಿನ ಬೆಳಗ್ಗೆ ಅಂದ್ರೆ ಮಂಗಳವಾರ 10:30ಕ್ಕೆ ಪೊಲೀಸರು ಬಂದು, ಆಚೆ ಕಳಿಸಿದ್ರು ಎಂದು ಹೇಳಿದ್ದಾರೆ. ಈ ಪ್ರಕಾರ ಪೊಲೀಸರು ಉಗ್ರಾಣ ವಶಕ್ಕೆ ಪಡೆದಿದ್ದಾರೆ. ಅಪರಾಧ ನಡೆದ ಘಟನಾ ಸ್ಥಳವನ್ನು ಜಪ್ತಿ ಮಾಡಿದ್ದಾರೆ. ಇಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ್ದಾರೆ. ದರ್ಶನ್ ವಿರುದ್ಧ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ. ಜೂನ್ 9,10,11ನೇ ತಾರೀಕು ಬಿಟ್ಟು ಆಮೇಲೆ ಮಾಡಿದ್ದಾರೆ. ಆದಾದ ಬಳಿಕ 12ನೇ ತಾರೀಕಿನವರೆಗೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಏಕೆ ಕಾಯ್ದರು?
ಜೂನ್ 9, 10ರಂದು ಪೊಲೀಸರು ಏನು ಮಾಡಿದ್ದಾರೆ? ಆರ್ ಆರ್ ನಗರದ ಜಯಣ್ಣ ಮಾಲೀಕತ್ವ ಷೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿ ಹಾಕಲಾಗಿತ್ತು. ನೈಲಾನ್ ಹಗ್ಗ, ಮರದ ಕೊಂಬೆ, ವಾಟರ್ ಬಾಟಲ್, ಬಿದಿರಿನ ಕೋಲು ಜಪ್ತಿಯಾಗಿದೆ. ಜೂನ್ 9,10,11ರಂದು ಸಾಕ್ಷ್ಯಗಳನ್ನು ಸಂಗ್ರಹಿಸದೆ ಪೊಲೀಸರು ಏನು ಮಾಡುತ್ತಿದ್ದರು. 12ರ ರಾತ್ರಿ ಪಂಚನಾಮೆ ನಡೆಸಿ ಜಪ್ತಿ ಮಾಡಲಾಗಿದೆ. 8ರ ಮಧ್ಯರಾತ್ರಿ ಪಿಎಸ್ಐಗೆ ಮಾಹಿತಿ ಇದ್ದರೂ 12ರವರೆಗೆ ಕಾದು ವಶಕ್ಕೆ ಪಡೆದಿದ್ದೇಕೆ? ತನಿಖಾಧಿಕಾರಿಯಿಂದ ದರ್ಶನ್ ಶೂಗಳನ್ನು 14ರಂದು ವಶಕ್ಕೆ ಪಡೆದಿದ್ದಾರೆ.
ಇದೊಂದು ಮ್ಯಾಜಿಕ್ ತನಿಖೆಯಾಗಿದೆ. ಸ್ವ-ಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಅಂತ ಇದೆ. ಆದರೆ, ಜಪ್ತಿಯಲ್ಲಿ ಶೂ ಎಂದು ತೋರಿಸಲಾಗಿದೆ. ದರ್ಶನ್ ಅವರಿಂದ ಜೂನ್ 11ರಂದು ಸ್ವ-ಇಚ್ಛಾ ಹೇಳಿಕೆ ಪಡೆಯಲಾಗಿದೆ. ಆದರೆ, ಜಪ್ತಿ ಮಾಡಿದ್ದು ಮಾತ್ರ 14 ಮತ್ತು 15ರಂದು. ಅಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಾ ಇದ್ದರು?
ದರ್ಶನ್ ಹೇಳಿದ ರೀತಿ ಅಂದು ಧರಿಸಿದ್ದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಇಲ್ಲಿ ದರ್ಶನ್ ಅಂದು ಧರಿಸಿದ್ದು ಚಪ್ಪಲಿಯೋ? ಶೂಗಳೋ?
ಸ್ವ-ಇಚ್ಛಾ ಹೇಳಿಕೆಯನ್ನ ಬದಲಾಯಿಸಲಾಗಿದೆ. ದರ್ಶನ್ ಘಟನೆ ವೇಳೆ ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನು ಮನೆಯಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಮನೆಗೆ ಕರೆದೊಯ್ದರೆ ತೋರಿಸುವುದಾಗಿ ಹೇಳಿದ್ದಾರೆ. ಆದರೆ, ಮನೆಯಲ್ಲಿ ಶೂ ಹೇಗಾದವು?
ದರ್ಶನ್ ಮನೆಯಲ್ಲಿ ನಡೆದ ಮಧ್ಯರಾತ್ರಿ ಪಂಚನಾಮೆಯಲ್ಲಿ ಚಪ್ಪಲಿ ಬದಲು ಶೂಗಳು ಆಗಿದ್ದು ಹೇಗೆ?
ಧರಿಸಿದ್ದ ಬಟ್ಟೆಯನ್ನು ಕಸದ ಬುಟ್ಟಿಯಲ್ಲಿ ಹಾಕಿದ್ದಾಗಿ ದರ್ಶನ್ ಹೇಳಿಕೆ ನೀಡಿದ್ದರು. ಮನೆಯಲ್ಲಿ ಪಂಚನಾಮೆ ವೇಳೆ ಬಿನ್‌ನಲ್ಲಿ ಬಟ್ಟೆಗಳು ದೊರಕಿಲ್ಲ. ಮನೆ ಕೆಲಸದಾಕೆ ಬಟ್ಟೆ ಒಗೆದಿರಬಹುದು ಎಂದು ಟೆರೇಸ್‌ಗೆ ಹೋಗಿ ನೋಡಲಾಗಿದೆ, ಬಟ್ಟೆ ಒಣಗಿ ಹಾಕಿದ್ದು ಪತ್ತೆ ಆಗಿವೆ. ಸರ್ಫ್ ಸೋಪ್‌ನಲ್ಲಿ ತೊಳೆದಿದ್ದಾರೆ ಅಂತಲೂ ಉಲ್ಲೇಖ ಮಾಡಲಾಗಿದೆ. ಮನೆ ಕೆಲಸದಾಕೆ ಹೇಳಿಕೆ ಪಡೆದಿದ್ದು. ಸರ್ಫ್ ಪೌಡರ್ ನಲ್ಲಿ ನೆನೆ ಹಾಕಿ, ಕೈಯಿಂದ ಕುಕ್ಕಿಕುಕ್ಕಿ ಒಗೆದಿದ್ದಾಗಿ ಹೇಳಿಕೆ ಇದೆ. ಇದೆಲ್ಲಾ ಒಂದು ರೀತಿ ಅರೇಬಿಯನ್ ನೈಟ್ಸ್ ಕಥೆ ಇದ್ದ ಹಾಗೆ ಇದೆ.
ಪೊಲೀಸ್ ಜಪ್ತಿಯು ಸ್ವೀಕರಿಸುವಂತಹದ್ದಲ್ಲ. ಹೇಳಿಕೆಯೂ ಸಹ ಸ್ವಿಕರಿಸುವಂತಹದ್ದಲ್ಲ. ಇಲ್ಲಿ ಸಾಮಾನ್ಯ ನಿಯಮವನ್ನು ಪೊಲೀಸರು ಪಾಲಿಸಿಲ್ಲ. ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ. ಶೂ ರಿಕವರಿ ಮಾಡಲು ಮನೆಗೆ ಹೋಗಿದ್ದಾಗ ವಿಜಯಲಕ್ಷ್ಮಿ ಹಲವು ಶೂಗಳನ್ನು ತಂದು ಕೊಟ್ಟಿದ್ದು ಅದರಲ್ಲಿ ಕೆಲವನ್ನು ಪೊಲೀಸರು ಆರಿಸಿಕೊಂಡು ಬಂದಿದ್ದಾರೆ. ಮನೆಯಲ್ಲಿ ಹಣವನ್ನು ರಿಕವರಿ ಮಾಡಲಾಗಿದೆ. ಮುಂದೆ ಸಾಕ್ಷಿಗಳನ್ನು ಖರೀದಿಗಾಗಿ ಹಣ ಇಡಲಾಗಿತ್ತು ಎಂದು ತಿಳಿಸಲಾಗಿದೆ. ತನಿಖೆ ಎಲ್ಲವೂ ಕಟ್ಟು ಕಥೆ ರೀತಿಯಲ್ಲಿ ಇದೆ. ಮೇ 2ರಂದು ಬಂದ ಹಣವನ್ನು ಕೊಲೆಗೆಂದು ಇಡಲು ಸಾಧ್ಯವೇ?