

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿಸಿ, ವಿಚಾರಣೆ ನಡೆಸಬೇಕು ಎಂದು ಮೂರನೇ ಆರೋಪಿ ಪವನ್ ಪರ ವಕೀಲರು ಬೆಂಗಳೂರಿನ ಸತ್ರ ನ್ಯಾಯಾಲಯವನ್ನು ಕೋರಿದ್ದಾರೆ.
ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಐ ಪಿ ನಾಯ್ಕ್ ಪ್ರಕರಣದ ವಿಚಾರಣೆ ನಡೆಸಿದರು.
ಆರೋಪಿ ಪವನ್ ಪರ ವಕೀಲ ಸುಧನ್ವ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಆವರಣ ಪ್ರವೇಶಿಸಲು ತಮಗೆ ಅನುಮತಿ ನೀಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಮೆಮೊ ಸಲ್ಲಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು 2024ರ ಜೂನ್ 11ರಂದು ರಾತ್ರಿ 1 ಗಂಟೆಗೆ ಪ್ರಕರಣದ ಏಳು ಮಂದಿ ಆರೋಪಿಗಳ ಎಂಟು ಮೊಬೈಲ್‌ಗಳನ್ನು ಮಹಜರು ನಡೆಸಿ ಜಫ್ತಿ ಮಾಡಿದ್ದಾರೆ. ಈ ವೇಳೆ ಮೊಬೈಲ್‌ಗಳನ್ನು ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿ, ಆ ಕುರಿತು ಫೋಟೊ ಸಲ್ಲಿಸಿದ್ದಾರೆ. ಆದರೆ, ಫೋಟೊದಲ್ಲಿ ಕಾಣುವ ಟೈಲ್ಸ್; ಬಿಳಿ ಬಣ್ಣದ ವಿಟ್ರಿಫೈಯ್ಡ್ ಟೈಲ್ಸ್ ಆಗಿರುತ್ತದೆ. ಆ ರೀತಿಯ ಟೈಲ್ಸ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇಲ್ಲ. ಹೀಗಾಗಿ, ಪೊಲೀಸ್ ಠಾಣೆಯಲ್ಲಿ ಮಹಜರು ನಡೆದಿಲ್ಲ. ಈ ಕುರಿತು ಪರಿಶೀಲಿಸಲು ಸೋಮವಾರ ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆಗೆ ನಾನು ಭೇಟಿ ನೀಡಿದ್ದೆ. ಠಾಣೆ ಪ್ರವೇಶಿಸಲು ಪೊಲೀಸರು ಅವಕಾಶವನ್ನೇ ನೀಡಿಲ್ಲ ಎಂದು ಸುಧನ್ವ ನ್ಯಾಯಾಲಯದಲ್ಲಿ ಆರೋಪಿಸಿದರು.
ಪೊಲೀಸ್ ಠಾಣೆಯು ಸಾರ್ವಜನಿಕ ಪ್ರದೇಶವಾಗಿದ್ದು, ಪ್ರವೇಶ ನಿರಾಕರಿಸುವ ಅಧಿಕಾರ ಪೊಲೀಸರಿಗೆ ಇಲ್ಲ. ಆದ್ದರಿಂದ, ಸುಳ್ಳು ಸಾಕ್ಷ್ಯ ಒದಗಿಸಿರುವ ಕಾರಣಕ್ಕೆ ಪ್ರಕರಣವನ್ನು ಮೊದಲಿಗೆ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯಾಗಿ ಮಾಡಿ ವಿಚಾರಣೆ ನಡೆಸಬೇಕು. ಇನ್ನು ನ್ಯಾಯಾಧೀಶರೇ ಪೊಲೀಸ್ ಠಾಣೆಗೆ ಖುದ್ದು ಭೇಟಿ ನೀಡಬೇಕು ಎಂದು ಕೋರಿದರು.
ಅದನ್ನು ಪರಿಗಣಿಸಿದ ನ್ಯಾಯಾಧೀಶರು, ಸುಧನ್ವ ಅವರು ಸೋಮವಾರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಸಂರಕ್ಷಣೆ ಮಾಡಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದರು. ಜೊತೆಗೆ, ಪೊಲೀಸ್ ಠಾಣೆಗೆ ಭೇಟಿ ಪರಿಶೀಲಿಸಲು ಪೊಲೀಸರು ಅನುಮತಿ ನಿರಾಕರಿಸಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ವಕೀಲ ಸುಧನ್ವಗೆ ನಿರ್ದೇಶಿಸಿತು.
ಇದೇ ವೇಳೆ ದರ್ಶನ್ ಪರ ವಕೀಲರು, ಜೈಲಿನ ಒಳಗೆ ದರ್ಶನ್ ಭೇಟಿ ಮಾಡಲು ಅವರ ಕುಟುಂಬದ ಸದಸ್ಯರಿಗೆ ಅನುಮತಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಮತ್ತು ಪ್ರಕರಣವನ್ನು ಪ್ರತಿ ದಿನ ವಿಚಾರಣೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯವು ಇದನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಹೇಳಿತು.
ಕೃತ್ಯ ನಡೆದ ಸ್ಥಳಕ್ಕೆ ನ್ಯಾಯಾಧೀಶರೇ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ಆರೋಪ ಪಟ್ಟಿಯಲ್ಲಿ ಹೆಸರಿಸದ ಸಾಕ್ಷಿಗಳನ್ನು ವಿಚಾರಣೆಗೆ ಕರೆಸಬೇಕು ಎಂದು ಕೋರಿ ದರ್ಶನ್ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ವಿಶೇಷ ಸರ್ಕಾರ ಅಭಿಯೋಜಕರಿಗೆ ನ್ಯಾಯಾಲಯ ನಿರ್ದೇಶಿಸಿತು.
ಅಂತಿಮವಾಗಿ ಪ್ರಕರಣದ 17 ಮತ್ತು 18ನೇ ಸಾಕ್ಷಿಗೆ ಸಮನ್ಸ್ ಜಾರಿ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು. ಅಲ್ಲಿಯವರೆಗೆ ದರ್ಶನ್ ಮತ್ತು ಪವಿತ್ರಾಗೌಡ ಸೇರಿ ಜೈಲಿನಲ್ಲಿರುವ ಪ್ರಕರಣದ ಏಳು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿತು.
ಇದೆಲ್ಲದರ ಮಧ್ಯೆ, ರೇಣುಕಾಸ್ವಾಮಿ ಮೃತ ದೇಹದ ಮೇಲಿದ್ದ ಆಭರಣಗಳನ್ನ ಪೋಷಕರಿಗೆ ನೀಡಲು ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ. ಹಾಗೆಯೇ, ಆ ಆಭರಣಗಳನ್ನು ಬದಲಾವಣೆ ಮಾಡದೆ ಸಂಗ್ರಹಿಸಿಟ್ಟುಕೊಳ್ಳಬೇಕು ಹಾಗೂ ಕೋರ್ಟ್ ಸೂಚಿಸಿದಾಗ ಹಾಜರುಪಡಿಸಬೇಕು ಎಂದು ನಿರ್ದೇಶಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ಅವರು ಜೈಲಿನ ತಮ್ಮ ಕೊಠಡಿಗೆ ಟಿವಿ ಅಳವಡಿಸಲು ಆದೇಶಿಸಿದ್ದಕ್ಕೆ ನ್ಯಾಯಾಧೀಶರಿಗೆ ಧನ್ಯವಾದ ಹೇಳಿದರು. ಹಾಗೆಯೇ, ವಿಚಾರಣೆಗೆ ತಮ್ಮನ್ನು ಖುದ್ದು ಹಾಜರುಪಡಿಸುವಂತೆ ಸೂಚಿಸಬೇಕು. ಆಗ ನಮಗೆ ಒಂದು ಹೊತ್ತು ಮನೆ ಊಟ ಸಿಗುತ್ತದೆ ಎಂದು ನ್ಯಾಯಾಧೀಶರನ್ನು ಕೋರಿದರು.