ದೃಷ್ಟಿದೋಷವುಳ್ಳವರ ಸ್ನೇಹಿಯಾಗಿಸಲು ₹ 33 ಲಕ್ಷ ಕೋಟಿ ಮೌಲ್ಯದ ಕರೆನ್ಸಿ ಬದಲಿಸುವುದು ಅಗಾಧ ಕೆಲಸ: ಆರ್‌ಬಿಐ ತಕರಾರು

ದೆಹಲಿ ಹೈಕೋರ್ಟ್ ರಚಿಸಿರುವ ತಜ್ಞರ ಸಮಿತಿಯ ಸಲಹೆಗಳನ್ನು ಪರಿಗಣಿಸುವುದಾಗಿ ಮತ್ತು ಅದರ ಕಾರ್ಯಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಗತಗೊಳಿಸಲು ಮುಂದಾಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ ಆರ್‌ಬಿಐ.
Currency
Currency
Published on

ದೃಷ್ಟಿದೋಷವಿರುವ ವಿಕಲ ಚೇತನರ ಬಳಕೆಗೆ ಸುಲಭವಾಗುವಂತೆ ಕೋಟಿಗಟ್ಟಲೆ ನೋಟುಗಳನ್ನು ಹೊಸ ನೋಟುಗಳ ಜಾಗದಲ್ಲಿ ಬದಲಾಯಿಸುವುದು ಅಗಾಧವಾದ ಕಾರ್ಯವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಆರ್‌ಬಿಐ ಚಲಾವಣೆಗೆ ತಂದಿರುವ ಹೊಸ ನೋಟುಗಳಲ್ಲಿ ಭೌತಿಕ ಬದಲಾವಣೆ ಮಾಡಿರುವುದರಿಂದ ದೃಷ್ಟಿದೋಷ ಹೊಂದಿರುವವರಿಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿ ಅಂಧರ ರಾಷ್ಟ್ರೀಯ ಒಕ್ಕೂಟ (ಎನ್‌ಎಬಿ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ನಿತಿನ್‌ ಜಾಮ್ದಾರ್‌ ಮತ್ತು ನ್ಯಾಯಮೂರ್ತಿ ಆರಿಫ್‌ ಡಾಕ್ಟರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ನೋಟುಗಳ ಬದಲಾವಣೆಗೆಗೆ ಸಂಬಂಧಿಸಿದಂತೆ ಸಮಿತಿ ನೀಡಿರುವ ವರದಿಯನ್ನು ಆರ್‌ಬಿಐ ಪರ ಹಿರಿಯ ವಕೀಲ ವೆಂಕಟೇಶ್‌ ಧೋಂಡ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿ, ನೋಟುಗಳ ಬದಲಾವಣೆಯು ಸಮಸ್ಯಾತ್ಮಕ ವಿಚಾರವಾಗಿದೆ ಎಂದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯಿದೆ ಸೆಕ್ಷನ್‌ 25ರ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಪಡೆದ ಬಳಿಕ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದೂ ಅವರು ತಿಳಿಸಿದ್ದಾರೆ.

“ಕಾಲಮಿತಿಯೊಳಗೆ ಹಂತಹಂತವಾಗಿ ಗೊಂದಲಕಾರಿ ನೋಟುಗಳನ್ನು ಬದಲಾಯಿಸುವಂತೆ ಸಮಿತಿಯು ನೀಡಿರುವ ಸಲಹೆಯು ಈ ಕೆಲಸದ ಅಗಾಧತೆಯನ್ನು ಪರಿಗಣಿಸಿಲ್ಲ. ದೇಶದಲ್ಲಿ ಪ್ರಸ್ತುತ 33,48,228 ಕೋಟಿ ಮೌಲ್ಯದ 13,621.37 ಕೋಟಿ ನೋಟುಗಳು ಚಲಾವಣೆಯಲ್ಲಿವೆ” ಎಂದು ಧೋಂಡ್‌ ಹೇಳಿದ್ದಾರೆ.

“ಕೆಲವರು ಸಲಹೆ ನೀಡಿರುವಷ್ಟು ಈ ಪ್ರಕ್ರಿಯೆಯು ಬಳಕೆದಾರರ ಸ್ನೇಹಿ ಅಲ್ಲ. ಸಮಿತಿಯ ಎಲ್ಲಾ ಶಿಫಾರಸ್ಸುಗಳನ್ನು ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿನ ದೃಷ್ಟಿದೋಷ ಹೊಂದಿರುವವರ ಸಂಸ್ಥೆಗಳು ಪರಿಗಣಿಸಿವೆ. ಇದು ಸಾಧ್ಯವಾಗಿಸಬೇಕೆಂದರೆ ಕೋಟ್ಯಂತರ ರೂಪಾಯಿಗಳನ್ನು ಪುನರ್‌ ಮುದ್ರಿಸಬೇಕು; ಅವುಗಳನ್ನು ಮುದ್ರಿಸಿ, ಚಲಾವಣೆಗೆ ಬಿಡಬೇಕು. ಹಾಗಾಗಿ ಇದೆಲ್ಲವನ್ನೂ ಸಾಕಷ್ಟು ಪರಿಶೀಲನೆಯ ಬಳಿಕವೇ ಮಾಡಬೇಕಾಗುತ್ತದೆ” ಎಂದು ಧೋಂಡ್‌ ಹೇಳಿದ್ದಾರೆ.

ನೋಟು ಅಮಾನ್ಯೀಕರಣದ ನಂತರ ಬಿಡುಗಡೆಯಾದ ಎಲ್ಲಾ ಮುಖಬೆಲೆಯ ನೋಟುಗಳು ಅಳತೆ ಬಹುತೇಕ ಒಂದೇ ಆಗಿದ್ದು, ಅವುಗಳನ್ನು ದೃಷ್ಟಿದೋಷವುಳ್ಳವರಿಗೆ ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.

Kannada Bar & Bench
kannada.barandbench.com