ವಕೀಲರ ರಕ್ಷಣಾ ವಿಧೇಯಕ: ಬಜೆಟ್‌ ಅಧಿವೇಶನದಲ್ಲಿ ಅನುಮೋದನೆ ಪಡೆಯುವ ಭರವಸೆ ನೀಡಿದ ಸಿಎಂ

ವಕೀಲರಿಗೆ ವಿಮಾ ಯೋಜನೆ ಜಾರಿಗೊಳಿಸಲು 50 ಕೋಟಿ ರೂಪಾಯಿ ನಿಧಿ ಆರಂಭಿಸಲಾಗಿದೆ. ಇದರ ಜಾರಿಗೆ ಯೋಜನೆ ರೂಪಿಸಲು ಆದೇಶಿಸಬೇಕು ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದ ಎಎಬಿ ನಿಯೋಗ ಮನವಿ ಸಲ್ಲಿಸಿತು.
AAB delegation meets CM Siddaramaiah
AAB delegation meets CM Siddaramaiah

ರಾಜ್ಯದ ವಕೀಲ ಸಮುದಾಯದ ಬಹುದಿನಗಳ ಬೇಡಿಕೆಯಾದ ವಕೀಲರ ರಕ್ಷಣಾ ವಿಧೇಯಕಕ್ಕೆ ಜುಲೈ 3ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಅನುಮೋದನೆ ಪಡೆಯುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವುದಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಗುರುವಾರ ಹೇಳಿದ್ದಾರೆ.

ಸಂಘದ ಪದಾಧಿಕಾರಿಗಳ ನಿಯೋಗದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿವೇಕ್‌ ಅವರು ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದರು.

ಹಿಂದಿನ ಬಿಜೆಪಿ ಸರ್ಕಾರವು ಕೊನೆಯ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿದರೂ ಅದನ್ನು ಚರ್ಚೆಗೆ ಎತ್ತಿಕೊಳ್ಳಲಿಲ್ಲ. 2022ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯಿದೆಯ ಅಗತ್ಯತೆಯ ಬಗ್ಗೆ ಮಾತನಾಡಿದ್ದೀರಿ. ಈಗ ತಮ್ಮದೇ ಸರ್ಕಾರವಿದ್ದು, ಕಾಯಿದೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಇದೇ ವೇಳೆ, ವಕೀಲರಿಗೆ ವಿಮಾ ಯೋಜನೆ ಜಾರಿಗೊಳಿಸಲು 50 ಕೋಟಿ ರೂಪಾಯಿ ನಿಧಿ ಆರಂಭಿಸಲಾಗಿದೆ. ಇದರ ಜಾರಿಗೆ ಯೋಜನೆ ರೂಪಿಸಲು ಆದೇಶಿಸಬೇಕು ಎಂದು ಕೋರಲಾಗಿದೆ. ಗ್ರಂಥಾಲಯ ಮತ್ತು ಮೂಲಸೌಲಭ್ಯ ಕಲ್ಪಿಸಲು ಬೆಂಗಳೂರು ವಕೀಲರ ಸಂಘಕ್ಕೆ ಅನುದಾನ ನೀಡಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ.

ಇದರ ಜೊತೆಗೆ ವಕೀಲರ ಸಂಘಕ್ಕೆ ಸೋಲಾರ್‌ ವ್ಯವಸ್ಥೆ ಮಾಡಲು ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಕೋರಲಾಗಿದ್ದು, ಈ ಸಂಬಂಧ ಇಂಧನ ಸಚಿವ ಕೆ ಜೆ ಜಾರ್ಜ್‌ ಅವರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ವಿವೇಕ್‌ ಸುಬ್ಬಾರೆಡ್ಡಿ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಸಂಬಂಧಿಸಿದ ಮನವಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರಿಗೂ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಹಾಗೂ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರನ್ನು ಭೇಟಿ ಮಾಡಿ, ಅವರ ಮೂಲಕವೂ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ವಿವೇಕ್‌ ಸುಬ್ಬಾರೆಡ್ಡಿ ತಿಳಿಸಿದರು.

Also Read
ರಾಜಸ್ಥಾನ ವಕೀಲರ ರಕ್ಷಣಾ ಕಾಯಿದೆ ಅಧ್ಯಯನ ಮಾಡಿ, ಕರ್ನಾಟಕದಲ್ಲೂ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಿಯೋಗದಲ್ಲಿ ಎಎಬಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ಖಜಾಂಚಿ ಎಂ ಟಿ ಹರೀಶ್‌, ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್‌, ವಕೀಲ ಪ್ರವೀಣ್‌ ಮತ್ತಿತರರು ಇದ್ದರು.

ಈಚೆಗೆ ನ್ಯಾಯಮೂರ್ತಿ ಬಿ ವೀರಪ್ಪ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರಲು ಬದ್ಧವಾಗಿರುವುದಾಗಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದಕ್ಕೂ ಮುನ್ನ, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ನಿಯೋಗ ಭೇಟಿ ಮಾಡಿದ್ದಾಗ "ರಾಜಸ್ಥಾನದಲ್ಲಿ ಈಗಾಗಲೇ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸಲಾಗಿದ್ದು, ಅದನ್ನು ತರಿಸಿಕೊಂಡು ಅಧ್ಯಯನ ಮಾಡಲಾಗುವುದು. ಆನಂತರ ನಮ್ಮಲ್ಲಿಯೂ ವಕೀಲ ರಕ್ಷಣಾ ಕಾಯಿದೆ ಜಾರಿಗೊಳಿಸಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

Related Stories

No stories found.
Kannada Bar & Bench
kannada.barandbench.com