ಟಿಆರ್‌ಪಿ ಮಾಹಿತಿ ತಿರುಚಿದ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಮಾಲೀಕತ್ವ ಹೊಂದಿರುವ ಎಆರ್‌ಜಿ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಖಾನ್‌ಚಂದಾನಿ ಅವರನ್ನು ಡಿ. 15 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿ ಮುಂಬೈನ ಎಸ್ಪ್ಲನೇಡ್‌ನಲ್ಲಿರುವ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವಿಕಾಸ್ ಅವರನ್ನು ಭಾನುವಾರ ಬೆಳಿಗ್ಗೆ ಬಂಧಿಸಿದ್ದರು.
ರಿಪಬ್ಲಿಕ್ ನೆಟ್‌ವರ್ಕ್ ತನ್ನ ಟಿವಿ ರೇಟಿಂಗ್ ಪಾಯಿಂಟ್‌ಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ರಿಪಬ್ಲಿಕ್ ಟಿವಿ (ಇಂಗ್ಲಿಷ್) ಮತ್ತು ರಿಪಬ್ಲಿಕ್ ಭಾರತ್ (ಹಿಂದಿ) ಚಾನೆಲ್‌ಗಳನ್ನು ಹೆಚ್ಚು ವೀಕ್ಷಕರು ನೋಡುತ್ತಿದ್ದಾರೆ ಎಂದು ಬಿಂಬಿಸಲು ವೀಕ್ಷಕರಿಗೆ ರೂ 15 ಲಕ್ಷ ಹಣ ಪಾವತಿಸಿತ್ತು ಎಂದು ಪೊಲೀಸರು ಆರೋಪಿಸಿದ್ದರು. ಟಿಆರ್‌ಪಿ ತಿರುಚಲು ಎಜಿಆರ್ ಕಂಪೆನಿಯ ಸಹಾಯಕ ಉಪಾಧ್ಯಕ್ಷ ಘನಶ್ಯಾಂ ಸಿಂಗ್ ಅವರಿಗೆ ವಾಹಿನಿಯ ಮುಖ್ಯ ಕಾರ್ಯಾಚರಣಾಧಿಕಾರಿ ಪ್ರಿಯಾ ಮುಖರ್ಜಿ ಸೂಚಿಸಿದ್ದರು. ಪ್ರಿಯಾ ಅವರಿಗೆ ವಿಕಾಸ್ ಅವರಿಂದ ನಿರ್ದೇಶನಗಳು ಬಂದಿದ್ದವು ಎಂದು ಪೊಲೀಸರು ತನಿಖೆ ವೇಳೆ ನಿರ್ಧಾರಕ್ಕೆ ಬಂದಿದ್ದರು. ಇದರ ಆಧಾರದ ಮೇಲೆ ವಿಕಾಸ್ ಬಂಧನ ನಡೆದಿದೆ.