
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದ ವಿರುದ್ಧದ ಆರೋಪ ಒಳಗೊಂಡ ಮುಡಾ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನಿಗಾವಣೆಯಲ್ಲಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಡಿಸೆಂಬರ್ 10ಕ್ಕೆ ಮುಂದೂಡಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯು ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು “ತಾನು ಮುಡಾ ಪ್ರಕರಣದಲ್ಲಿ ಭೂಮಾಲೀಕರಾಗಿರುವ ಜೆ ದೇವರಾಜು ಅವರನ್ನು ಪ್ರತಿನಿಧಿಸುತ್ತಿದ್ದೇನೆ. ತಮ್ಮ ಪೀಠ ಮಾಡಿರುವ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆಯು ಡಿಸೆಂಬರ್ 5ಕ್ಕೆ ನಿಗದಿಯಾಗಿದೆ. ಈ ಪ್ರಕರಣದ ವಿಚಾರಣೆಯ ಮುಂದೂಡಿಕೆಯ ಬಗ್ಗೆ ಅಂದು ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಚರ್ಚೆಯಾಗಿದೆ. ಮೇಲ್ಮನವಿಯು ಮುಂದೂಡಿಕೆಯಾಗಿರುವುದರಿಂದ ಈ ಪ್ರಕರಣವು ಮುಂದೂಡಿಕೆಯಾಗಬೇಕು ಎಂಬುದು ಸ್ಪಷ್ಟವಾಗಿದೆ. ಹೀಗಾಗಿ, ಈ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕು. ಡಿಸೆಂಬರ್ 9ರ ನಂತರದ ವಾರದಲ್ಲಿ ಯಾವ ದಿನವಾದರೂ ಅರ್ಜಿ ವಿಚಾರಣೆ ನಡೆಸಬಹುದು” ಎಂದು ಕೋರಿದರು.
ಆಗ ಪೀಠವು “ಇದನ್ನು ಡಿಸೆಂಬರ್ 10ಕ್ಕೆ ನಿಗದಿಗೊಳಿಸೋಣವೇ” ಎಂದಿತು. ಈ ವೇಳೆ, ಅರ್ಜಿದಾರ ಕೃಷ್ಣ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕೆ ಜಿ ರಾಘವನ್ ಅವರು “ಮೇಲ್ಮನವಿ ಮುಂದೂಡಿಕೆಯಾಗಿರುವುದರಿಂದ ಹಾಲಿ ಅರ್ಜಿಯೂ ಮುಂದೂಡಿಕೆಯಾಗಬೇಕು ಎಂಬುದರ ಬಗ್ಗೆ ನಮ್ಮ ನಡುವೆ ಯಾವುದೇ ಹೊಂದಾಣಿಕೆಯಾಗಿಲ್ಲ ಎಂಬುದು ನನಗಿರುವ ಸೂಚನೆ” ಎಂದರು.
ಆಗ ದವೆ ಅವರು “ನವೆಂಬರ್ 22ರಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮೇಲ್ಮನವಿ ಮುಂದೂಡಿಕೆ ಕೋರಿದ ದಿನ ಹಿರಿಯ ವಕೀಲ ಮಣೀಂದರ್ ಸಿಂಗ್ ಇದ್ದರು. ಅವರ ಜೊತೆ ನಾನೇ ವೈಯಕ್ತಿಕವಾಗಿ ಮಾತನಾಡಿದ್ದೇನೆ” ಎಂದರು.
ದವೆ ಮತ್ತು ರಾಘವನ್ ನಡುವೆ ಚರ್ಚೆ ಮಧ್ಯಪ್ರವೇಶಿಸಿದ ಪೀಠವು “ಡಿಸೆಂಬರ್ 10ಕ್ಕೆ ಹಾಲಿ ಅರ್ಜಿ ವಿಚಾರಣೆ ನಡೆಸಲಾಗುವುದು” ಎಂದು ಸ್ಪಷ್ಟಪಡಿಸಿತು.
ವಿಚಾರಣೆ ವೇಳೆ ರಾಘವನ್ ಅವರು “ನವೆಂಬರ್ 5ರಂದು ನ್ಯಾಯಾಲಯವು ಇದುವರೆಗೆ ನಡೆದಿರುವ ತನಿಖಾ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದೆ” ಎಂದು ಪೀಠದ ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ತನಿಖಾ ವರದಿಯನ್ನು ನ್ಯಾಯಾಲಯದ ಮುಂದೆ ಇಡುವ ವಿಚಾರವಲ್ಲವೇ? ಅದನ್ನು ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸುತ್ತೇನೆ. ಇಂದು ವಿಚಾರಣೆ ನಡೆಸದಿರುವುದರಿಂದ ಆ ದಾಖಲೆಗಳನ್ನು ನಾನು ಹೇಗೆ ನೋಡಲಾಗುತ್ತದೆ” ಎಂದಿತು.
ಪ್ರತಿಕ್ರಿಯಿಸಿದ ರಾಘವನ್ ಅವರು “ಈಗ ಅರ್ಜಿ ವಿಚಾರಣೆ ಮಾಡಬೇಡಿ. ನಿಯಮದ ಪ್ರಕಾರ ಅರ್ಜಿ ವಿಚಾರಣೆಗೆ ಬಂದಾಗ, ದಾಖಲೆಯನ್ನು ಪರಿಶೀಲಿಸಿ, ಆನಂತರ ಆದೇಶ ಮಾಡಬಹುದು” ಎಂದರು. ಈ ವಿಚಾರದ ಕುರಿತು ದವೆ ಮತ್ತು ರಾಘವನ್ ಅವರ ನಡುವೆ ವಾಗ್ವಾದ ನಡೆಯಿತು.
ಅಂತಿಮವಾಗಿ ಪೀಠವು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 10ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.