ಅಲ್ಲಮಪ್ರಭು, ವಿಠ್ಠಲ ದೇವಸ್ಥಾನಗಳನ್ನು ಪಾರಂಪರಿಕ ಸ್ಮಾರಕವೆಂದು ಘೋಷಿಸಲು ಕೋರಿಕೆ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

ರಾಜ್ಯದಲ್ಲಿ ಶಿಥಿಲಗೊಂಡಿರುವ ಹಾಗೂ ನದಿ ಮತ್ತು ಅಣೆಕಟ್ಟೆಗಳ ನೀರಿನಲ್ಲಿ ಮುಳುಗಡೆಯಾಗುವಂತಹ ಪುರಾತನ ದೇವಾಲಯವನ್ನು ಸಂರಕ್ಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Karnataka HC
Karnataka HC
Published on

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ 250 ವರ್ಷಗಳಿಗೂ ಹಳೆಯದಾದ ಅಲ್ಲಮಪ್ರಭು ಸ್ವಾಮಿ ಮತ್ತು ವಿಠ್ಠಲ ದೇವಸ್ಥಾನವನ್ನು ಪಾರಂಪರಿಕ ಸ್ಮಾರಕ ಎಂದು ಘೋಷಿಸಿ, ಸುರಕ್ಷಿತವಾಗಿ ಸ್ಥಳಾಂತರಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೊರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಿದ್ಯಾರ್ಥಿ ನಿಖಿಲ್ ವಿಠ್ಠಲ ಪಾಟೀಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತು.

ಪ್ರಕರಣದಲ್ಲಿ ತಾವೇ ಖುದ್ದು ವಾದಿಸಿದ ಅರ್ಜಿದಾರ ನಿಖಿಲ್‌ ಅವರು “ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗುವ ಅಲ್ಲಮ್ಮಪ್ರಭು ಸ್ವಾಮಿ ಮತ್ತು ವಿಠ್ಠಲ ದೇವಾಲಯ ಸೇರಿದಂತೆ ರಾಜ್ಯದಲ್ಲಿ ಶಿಥಿಲಗೊಂಡಿರುವ ಹಾಗೂ ನದಿ ಮತ್ತು ಅಣೆಕಟ್ಟೆಗಳ ನೀರಿನಲ್ಲಿ ಮುಳುಗಡೆಯಾಗುವಂತಹ ಪುರಾತನ ದೇವಾಲಯವನ್ನು ಸಂರಕ್ಷಿಸಬೇಕು. ಕರ್ನಾಟಕ ರಾಜ್ಯದ ಸಾಂಸ್ಕೃತಿಕ, ಐತಿಹಾಸಿಕ ಧಾರ್ಮಿಕ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಕನ್ನಡಿಗರ ಸಾಂಸ್ಕೃತಿಕ ಪರಂಪರೆ ಕಾಪಾಡಬೇಕಾಗಿದೆ" ಎಂದು ಕೋರಿದರು.

ಮುಂದುವರೆದು, "ಸ್ಮಾರಕಗಳ ಸಂರಕ್ಷಣೆಯ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಳಗಾವಿ ಜಿಲ್ಲಾಧಿಕಾರಿ, ಹಿಡಕಲ್ ಅಣೆಕಟ್ಟು ಪ್ರಾಧಿಕಾರ ಸೇರಿದಂತೆ  ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಈ ದೇವಾಲಯಗಳ ರಕ್ಷಣೆಗೆ ವಿಶೇಷ ಸಮಿತಿ ರಚನೆ ಮಾಡಬೇಕು. ಈ ಸಮಿತಿಗೆ ಪುರಾತತ್ವ ಇಲಾಖೆಯಲ್ಲಿ ಪರಿಣಿತರನ್ನು ನೇಮಕ ಮಾಡಬೇಕು. ಈ ಸಮಿತಿ ದೇವಾಲಯಗಳ ಕಾಲಮಾನ ಸಂಸ್ಕೃತಿಯನ್ನು ನಿಖರವಾಗಿ ಅಧ್ಯಯನ ಮಾಡಬೇಕು. ಅದಕ್ಕೆ ಆಗಬಹುದಾದ ಹಾನಿಯನ್ನು ತಡೆಯಬೇಕು” ಎಂದು ಮನವಿ ಮಾಡಿದರು.

ಇದಲ್ಲದೆ, “ಅಲ್ಲಮ್ಮಪ್ರಭು ಸ್ವಾಮಿ ದೇವಾಲಯ ಕುರಿತು ಸಮೀಕ್ಷೆ ನಡೆಸಿರುವ ಕುರಿತ ವರದಿಯನ್ನು ಒದಗಿಸದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಸಮಿತಿ ರಚನೆ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ ನೀರಿನಲ್ಲಿ ಮುಳುಗಡೆಯಾಗಿರುವ ಪಾರಂಪರಿಕ ದೇವಾಲಯಗಳ ಕುರಿತು ಸಮೀಕ್ಷೆ ನಡೆಸುವುದಕ್ಕಾಗಿ ಜಂಟಿ ಸಮಿತಿ ರಚನೆ ಮಾಡಬೇಕು” ಎಂದು ಕೋರಿದರು.

ಇದನ್ನು ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿತು.

Kannada Bar & Bench
kannada.barandbench.com