[ಜಾತಿ ಗಣತಿ] ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಕೋರಿಕೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು, ಜಾತಿ ಆಧಾರಿತ ಗಣತಿಗೆ ಸಂಬಂಧಿಸಿದ ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನೂ ಸ್ಥಗಿತಗೊಳಿಸಲು ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
High Court of Karnataka
High Court of Karnataka
Published on

ಎಲ್ಲಾ ಜಾತಿ ಮತ್ತು ಸಮುದಾಯಗಳ ಸಮಗ್ರ ಮತ್ತು ವೈಜ್ಞಾನಿಕ ಜಾತಿ ಗಣತಿ (ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ) ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನಿಷ್ಪಕ್ಷಪಾತ ಸಮಿತಿ ರಚಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸರ್ಕಾರಕ್ಕೆ ನ್ಯಾಯಾಲಯವು ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ನಿವಾಸಿಗಳಾದ ಕೆ ಸಿ ಶಿವರಾಮ್, ಎಸ್‌ ವಿ ಮುನಿರಾಜು ಹಾಗೂ ಕೆ ಜಿ ಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಆಯೋಗಕ್ಕೆ 2014ರ ಜನವರಿ 23ರಂದು ನೀಡಿರುವ ಆದೇಶವನ್ನು ಅಸಾಂವಿಧಾನಿಕ ಹಾಗೂ ಕಾನೂನು ಬಾಹಿರ ಎಂದು ಘೋಷಿಸಬೇಕು. ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾತಿ ಗಣತಿ ವರದಿಯನ್ನು ಸಾರ್ವಜನಿಕಗೊಳಿಸಲು ಆದೇಶಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ.

ವಿಚಾರಣೆ ವೇಳೆ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು, ಜಾತಿ ಆಧಾರಿತ ಗಣತಿಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನೂ ಸ್ಥಗಿತಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿದರು.

Also Read
ಜಾತಿ ಗಣತಿ ವರದಿ ಸಲ್ಲಿಕೆ; ಸರ್ಕಾರ ಇನ್ನಷ್ಟೇ ಕ್ರಮಕೈಗೊಳ್ಳಬೇಕು: ಹೈಕೋರ್ಟ್‌ಗೆ ಎಜಿ ವಿವರಣೆ

ಇದಕ್ಕೆ ಪೀಠವು ಜಾತಿ ಗಣತಿ ಪ್ರಶ್ನಿಸಿರುವ ಸಂಬಂಧ ಈಗಾಗಲೇ ಹಲವು ಅರ್ಜಿ ಸಲ್ಲಿಕೆಯಾಗಿರುವಾಗ ಈ ಅರ್ಜಿಯ ಔಚಿತ್ಯತೆ ಏನು ಎನ್ನುವ ಪ್ರಶ್ನೆಯನ್ನು ಎತ್ತಿತು. ಅಂತಿಮವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿತು.

Kannada Bar & Bench
kannada.barandbench.com