
ರಾಮನಗರದ ಮಾಗಡಿಯಲ್ಲಿರುವ ನಾಡಪ್ರಭು ಕೆಂಪೇಗೌಡರ ಕೋಟೆಯನ್ನು ಸಂರಕ್ಷಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ರಾಜ್ಯ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಇತಿಹಾಸ ಪ್ರಸಿದ್ಧವಾದ ಮಾಗಡಿ ಕೋಟೆಯನ್ನು ಸಂರಕ್ಷಿಸಲು ನಿರ್ದೇಶನ ಕೋರಿ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಾಗಡಿಯ ಡಾ. ಎಚ್ ಎಂ ಕೃಷ್ಣಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “17ನೇ ಶತಮಾನದ ಕೋಟೆಯನ್ನು ರಕ್ಷಿಸಲು ಕೋರಲಾಗಿದೆ. ವಿಜಯನಗರ ಸಾಮ್ರಾಜ್ಯದ ಪ್ರಧಾನ ಕಮಾಂಡರ್ ಆಗಿದ್ದ ಕೆಂಪೇಗೌಡರು ಕೋಟೆ ನಿರ್ಮಿಸಿದ್ದರು. ಕೆಂಪೇಗೌಡರೇ ಬೆಂಗಳೂರು ನಿರ್ಮಾತೃವಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅವರ ಹೆಸರಿಡಲಾಗಿದೆ. ಕೋಟೆಯ ಸಂರಕ್ಷಣೆ ಸಂಬಂಧ ಪುರಾತತ್ವ ಇಲಾಖೆಯ ಆಯುಕ್ತರು ವರದಿ ನೀಡಿದ್ದಾರೆ. ಕೋಟೆಯ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಡ್ರೋನ್ ಸಹಾಯದಿಂದ ತೆಗೆದ ಚಿತ್ರಗಳನ್ನು ಲಗತ್ತಿಸಲಾಗಿದೆ. ಕೋಟೆ ರಕ್ಷಣೆಗಾಗಿ 30 ಅಡಿ ಎತ್ತರದ ಗೋಡೆ ನಿರ್ಮಿಸಲಾಗಿದೆ. ಒಂದು ಭಾಗದ ಗೋಡೆ ಈಗಾಗಲೇ ನಾಶವಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಕೋಟೆ ಸಂರಕ್ಷಿಸುವಂತೆ ಕೇಳಬೇಕಿಲ್ಲ. ಸರ್ಕಾರವೇ ಸ್ವಯಂಪ್ರೇರಿತವಾಗಿ ಕೋಟೆಯ ರಕ್ಷಣೆಗೆ ಮುಂದಾಗಬೇಕಿತ್ತು” ಎಂದರು.
ಸರ್ಕಾರದ ಪರವಾಗಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ವಕೀಲೆ ನಿಲೋಫರ್ ಅಕ್ಬರ್ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ವೃತ್ತದ ಭಾರತೀಯ ಪುರಾತತ್ಬ ಸರ್ವೇಕ್ಷಣಾ ಇಲಾಖೆ, ಪುರಾತತ್ವ ಇಲಾಖೆಯ ಆಯುಕ್ತರು, ಪುರತಾತ್ವ ಇಲಾಖೆಯ ಉಪ ನಿರ್ದೇಶಕರು, ಮಾಗಡಿ ನಗರಾಭಿವೃದ್ಧಿ ಪ್ರಾಧಿಕಾರ, ಮಾಗಡಿ ಪುರಸಭೆ, ರಾಮನಗರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ನಾಡಪ್ರಭು ಕೆಂಪೇಗೌಡರ ಕೋಟೆ, ಕೋಟೆಯ ಕಂದಕ ಮತ್ತು ಅವರಿಂದ ಸ್ಥಾಪಿತವಾದ ದೇವಾಲಯಗಳ ಅಭಿವೃದ್ಧಿ, ಸ್ಮಾರಕ, ಶಿಲ್ಪಗಳು, ಒತ್ತುವರಿಯಾಗಿರುವ ಕೋಟೆಯನ್ನು ಸಂರಕ್ಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಕೋಟೆಯ ಕಂದಕ ಪೂರ್ವ, ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸಂಪೂರ್ಣವಾಗಿ ಮುಚ್ಚಿದ್ದು, ದಕ್ಷಿಣ ಭಾಗದಲ್ಲಿ ಕೆ-ಶಿಪ್‌ನವರು ಬೆಂಗಳೂರು-ಕುಣಿಗಲ್ ರಸ್ತೆ ಅಗಲೀಕರಣಕ್ಕಾಗಿ ಕೋಟೆಯ ಕಂದಕವನ್ನು ಅರ್ಧಭಾಗ ಮುಚ್ಚಿದ್ದಾರೆ. ಮೂರು ಕಡೆ ಕೋಟೆಯ ಕಂದಕ ಒತ್ತುವರಿಯಾಗಿದೆ. ಇದೇ ಜಾಗದಲ್ಲಿ ವ್ಯಾಪಾರ ಮಾಡಲು ಬೀದಿಬದಿ ವ್ಯಾಪಾರಿಗಳಿಗೆ ಪುರಸಭೆ ಅವಕಾಶ ಮಾಡಿಕೊಟ್ಟಿದೆ. ವ್ಯಾಪಾರಿಗಳು ಕೋಟೆಯ ಗೋಡೆಗಳಿಗೆ ಮೊಳೆ ಹೊಡೆದು ವಿರೂಪಗೊಳಿಸಿದ್ದಾರೆ. ಕಸ-ಕಡ್ಡಿಗಳನ್ನು ಎಸೆಯುವ ಮೂಲಕ ಕೋಟೆಯನ್ನು ತ್ಯಾಜ್ಯದ ಕೇಂದ್ರವನ್ನಾಗಿಸಲಾಗಿದೆ. ಕೋಟೆಯಲ್ಲಿ ಮಲ-ಮೂತ್ರ ವಿಸರ್ಜನೆ, ಮದ್ಯ ಸೇವನೆ ನಡೆಯುತ್ತಿದೆ. ಇದೆಲ್ಲವನ್ನೂ ನಿರ್ಬಂಧಿಸಿ, ಕೋಟೆಯನ್ನು ರಕ್ಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.