ಭಾರತೀಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಯೆಮೆನ್ ದೇಶಕ್ಕೆ ಪ್ರವಾಸ ಕೈಗೊಳ್ಳುವುದನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಮುಟ್ಟುಗೋಲು ಹಾಕಿಕೊಂಡಿರುವ ತನ್ನ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಳ್ತಂಗಡಿ ತಾಲ್ಲೂಕಿನ ಗಂಡಿಬಾಗಿಲು ನೆರಿಯಾ ನಿವಾಸಿ ಶೇನಿ ಜಾಯ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲ ಎಸ್ ಸುಶಾಂತ್ ವೆಂಕಟೇಶ್ ಪೈ ಅವರು ಯೆಮೆನ್ ಪ್ರವಾಸ ನಿಷೇಧಿಸಿ ಕೇಂದ್ರ ವಿದೇಶಾಂಗ ಸಚಿವಾಲಯ 2017ರ ಸೆಪ್ಟೆಂಬರ್ 26ರಂದು ಹೊರಡಿಸಿರುವ ಅಧಿಸೂಚನೆ ಬಗ್ಗೆ ಅರ್ಜಿದಾರರಿಗೆ ತಿಳಿದಿರಲಿಲ್ಲ. ಅಂತೆಯೇ, ಈ ಅಧಿಸೂಚನೆ ಉಲ್ಲಂಘಿಸುವ ಯಾವುದೇ ಉದ್ದೇಶವನ್ನು ಅವರು ಹೊಂದಿಲ್ಲ. ಹೀಗಾಗಿ, ಅವರ ಪಾಸ್‌ಪೋರ್ಟ್ ಹಿಂದಿರುಗಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಪರ ಹಾಜರಿದ್ದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು ಯೆಮೆನ್‌ನಲ್ಲಿ ನಾಗರಿಕ ಜನಜೀವನ ಅಸ್ಥಿರತೆಯಲ್ಲಿದೆ. ಹೀಗಾಗಿ, ಯಾವುದೇ ಭಾರತೀಯ ನಾಗರಿಕರು ರಸ್ತೆ, ರೈಲು, ಜಲಮಾರ್ಗ ಅಥವಾ ವಿಮಾನದ ಮೂಲಕ ಅಲ್ಲಿಗೆ ಪ್ರಯಾಣ ಬೆಳೆಸುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸಿರುವ ಕಾರಣದಿಂದಲೇ ಅರ್ಜಿದಾರರ ಪಾಸ್‌ಪೋರ್ಟ್ ಅನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದರು.
ಆಗ ಪೀಠವು ಯೆಮೆನ್‌ನಲ್ಲಿನ ಸದ್ಯದ ಪರಿಸ್ಥಿತಿ ಮತ್ತು ನಾಗರಿಕರ ಸುರಕ್ಷತೆ ಗಮನದಲ್ಲಿ ಇರಿಸಿಕೊಂಡೇ ಕೇಂದ್ರ ಸರ್ಕಾರ ಯೆಮೆನ್ ಪ್ರವಾಸ ನಿಷೇಧದ ಅಧಿಸೂಚನೆ ಹೊರಡಿಸಿದೆಯಲ್ಲವೇ?, ನೀವು ಅಧಿಸೂಚನೆ ಉಲ್ಲಂಘಿಸಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿರುವುದಲ್ಲವೇ? ಯೆಮೆನ್ ಪ್ರವಾಸ ನಿಷೇಧಿಸಿರುವ ಕೇಂದ್ರದ ಕ್ರಮವನ್ನು ಈಗಾಗಲೇ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆಯಲ್ಲವೇ ಎಂದು ಪ್ರಶ್ನಿಸಿದರು.
ಆಗ ಸುಶಾಂತ್ ಅವರು ಅರ್ಜಿದಾರರು 2010–11ರಿಂದ ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಗೆ ಹೋದ ಮೇಲೆ ಅವರು ಈವರೆವಿಗೂ 2014, 2020 ಮತ್ತು 2023ರಲ್ಲಿ ಒಟ್ಟು ಮೂರು ಬಾರಿ ಭಾರತಕ್ಕೆ ಬಂದು ಹೋಗಿದ್ದಾರೆ. ಅಧಿಸೂಚನೆಯನ್ನು ಉಲ್ಲಂಘಿಸುವಂತಹ ಯಾವುದೇ ಉದ್ದೇಶ ಹೊಂದಿರಲಿಲ್ಲ. ಅಧಿಸೂಚನೆ ಹೊರಡಿಸುವ ಮುನ್ನಾ ಅವಧಿಯಿಂದಲೇ ಅವರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಅವರ ಪಾಸ್‌ಪೋರ್ಟ್ ಹಿಂದಿರುಗಿಸದೇ ಹೋದರೆ ಕೆಲಸ ಕಳೆದುಕೊಳ್ಳುತ್ತಾರೆ ಎಂದರು.
ಇದಕ್ಕೆ ಪೀಠವು ಈ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿ ಪರಿಶೀಲಿಸಿ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿತು.
ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 2023ರ ಆಗಸ್ಟ್ 20ರಂದು ಶೇನಿ ಜಾಯ್ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಅಂತೆಯೇ, 2017ರ ಅಧಿಸೂಚನೆಯ ಅನುಸಾರ ಮತ್ತು ಪಾಸ್‌ಪೋರ್ಟ್ ಕಾಯಿದೆ–1967ರ ಸೆಕ್ಷನ್ 19ರ ಅನ್ವಯ ಅವರ ಪಾಸ್‌ಪೋರ್ಟ್ ಅನ್ನು ಅಮಾನ್ಯಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.