Additional Director General of Police, Law & Order, Alok Kumar
Additional Director General of Police, Law & Order, Alok KumarTwitter

ಅಲೋಕ್‌ ಕುಮಾರ್‌ರನ್ನು ಎಡಿಜಿಪಿ ಹುದ್ದೆಯಲ್ಲಿ ಮುಂದುವರಿಸದಂತೆ ಕೋರಿಕೆ: ತಿರಸ್ಕರಿಸಿದ ಹೈಕೋರ್ಟ್‌

ಕ್ರಿಮಿನಲ್ ಪ್ರಕರಣ ಬಾಕಿ ಇರುವುದರಿಂದ ಅಲೋಕ್ ಕುಮಾರ್ ಅವರನ್ನು ಎಡಿಜಿಪಿ ಹುದ್ದೆಯಲ್ಲಿ ಮುಂದುವರಿಸಬಾರದು. ಅವರನ್ನು ಚುನಾವಣಾಕಾರ್ಯಕ್ಕೂ ನಿಯೋಜಿಸಬಾರದು ಎಂದು ಕೋರಿದ್ದ ಫೈಟರ್‌ ರವಿ.
Published on

ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿರುವ ಹಿನ್ನೆಲೆಯಲ್ಲಿ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬಿ ಎಂ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಇತ್ಯರ್ಥಪಡಿಸಿದೆ.

ಭಾರತೀಯ ಚುನಾವಣಾ ಆಯೋಗ (ಇಸಿಐ) 2022ರ ಡಿಸೆಂಬರ್ 8ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಯಾವುದೇ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿಯಿದ್ದರೆ, ಅಂತಹವರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸುವಂತಿಲ್ಲ. ಆದ್ದರಿಂದ, ಕ್ರಿಮಿನಲ್ ಪ್ರಕರಣ ಬಾಕಿ ಇರುವುದರಿಂದ ಅಲೋಕ್ ಕುಮಾರ್ ಅವರನ್ನು ಎಡಿಜಿಪಿ ಹುದ್ದೆಯಲ್ಲಿ ಮುಂದುವರಿಸಬಾರದು. ಅವರನ್ನು ಚುನಾವಣಾ ಕಾರ್ಯಕ್ಕೂ ನಿಯೋಜಿಸಬಾರದು ಎಂದು ಇಸಿಐಗೆ ನಿರ್ದೇಶಿಸುವಂತೆ ಕೋರಿ ಮಲ್ಲಿಕಾರ್ಜುನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಇದು ಕೇವಲ ನಿಷ್ಟ್ರಯೋಜಕ ಅರ್ಜಿಯಾಗಿದ್ದು, ವಜಾಗೊಳಿಸವುದಾಗಿ ತಿಳಿಸಿತು. ಇದರಿಂದ ಅರ್ಜಿಯನ್ನು ಹಿಂಪಡೆಯಲಾಗುವುದು ಎಂದು ಮಲ್ಲಿಕಾರ್ಜುನ ಪರ ವಕೀಲರು ತಿಳಿಸಿದರು. ಅದಕ್ಕೆ ಪೀಠವು ಸಮ್ಮತಿಸಿತು.

Also Read
ಲಂಚ ಬೇಡಿಕೆ: ಫೈಟರ್‌ ರವಿ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅಲೋಕ್‌ ಕುಮಾರ್‌

ಆದೇಶ ಪ್ರಕಟಿಸುವುದಕ್ಕೂ ಮುನ್ನ ನ್ಯಾಯಮೂರ್ತಿಗಳು, ರೌಡಿ ಶೀಟ್‌ನಲ್ಲಿ ‘ಫೈಟರ್ ರವಿ’ ಎಂಬ ಹೆಸರು ಬಳಸದಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತಲ್ಲವೇ? ಎಂದು ಮಲ್ಲಿಕಾರ್ಜುನಯ್ಯ ಪರ ವಕೀಲರನ್ನು ಪ್ರಶ್ನಿಸಿದರು. ಅದಕ್ಕೆ ವಕೀಲರು ಹೌದು ಎಂದು ತಿಳಿಸಿದಾಗ, ನೀವು ಅರ್ಜಿಯನ್ನು ಬಹಳ ಜಾಣ್ಮೆಯಿಂದ ಸಿದ್ಧಪಡಿಸಿದ್ದೀರಿ. ಮತ್ತೊಂದು ಅರ್ಜಿಯಲ್ಲಿ ಫೈಟರ್ ರವಿ ಹೆಸರು ಬಳಸದಂತೆ ತಡೆ ಆದೇಶ ಪಡೆದುಕೊಂಡಿದ್ದೀರಿ. ಅದರಲ್ಲಿ ಅರ್ಜಿದಾರರು ಬಿಜೆಪಿಯ ಸಂಭವನೀಯ ಅಭ್ಯರ್ಥಿ ಎಂದು ಹೇಳಿದ್ದೀರಿ. ಇಂದು ಬಿ ಎಂ ಮಲ್ಲಿಕಾರ್ಜುನಯ್ಯ ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಅರ್ಜಿದಾರರು ಪಕ್ಷೇತರರಾಗಿ ಸ್ಪರ್ಧಿಸಬಹುದು ಎಂದು ಹೇಳುತ್ತಿದ್ದೀರಿ. ಏನೇ ಆಗಲಿ ನಿಮ್ಮ ಅರ್ಜಿದಾರರ ಫೈಟರ್ ರವಿ ಎಂಬ ಹೆಸರು ತುಂಬ ಕ್ಯಾಚಿಯಾಗಿದೆ ಎಂದು ಮೌಖಿಕವಾಗಿ ಹೇಳಿತು.

Kannada Bar & Bench
kannada.barandbench.com