ಹೊಸಪೇಟೆ-ವಾಸ್ಕೋಡಗಾಮ, ಲೊಂಡಾ-ಮೀರಜ್ ರೈಲು ಮಾರ್ಗಗಳಲ್ಲಿ ವೇಗ ತಗ್ಗಿಸಲು ಮನವಿ: ಅರಣ್ಯ ಇಲಾಖೆಗೆ ಹೈಕೋರ್ಟ್‌ ನೋಟಿಸ್‌

ದೇಶದ ಯಾವುದೇ ಭಾಗದಲ್ಲಿರುವ ವನ್ಯಜೀವಿ ಸಂಪತ್ತು ಸಮಾನವಾದ ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಮೌಖಿಕವಾಗಿ ನುಡಿದ ನ್ಯಾಯಾಲಯ.
Karnataka HC and Train
Karnataka HC and Train

ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಹೊಸಪೇಟೆ-ವಾಸ್ಕೋಡಗಾಮ ಹಾಗೂ ಲೊಂಡಾ-ಮೀರಜ್ ರೈಲು ಮಾರ್ಗಗಳಲ್ಲಿ ರಾತ್ರಿ ವೇಳೆ ರೈಲುಗಳ ವೇಗ ತಗ್ಗಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಹೊಸಪೇಟೆ- ವಾಸ್ಕೋಡಗಾಮ ಮತ್ತು ಲೊಂಡಾ-ಮೀರಜ್ ರೈಲು ಮಾರ್ಗದಲ್ಲಿ ರಾತ್ರಿ ವೇಳೆ ರೈಲುಗಳ ಅಧಿಕ ವೇಗದ ಚಾಲನೆಯಿಂದ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿವೆ. ಇದರಿಂದ ವೇಗದ ಮಿತಿ ತಗ್ಗಿಸಲು ರೈಲ್ವೆ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಪರಿಸರವಾದಿ ಗಿರಿಧರ್ ಕುಲಕರ್ಣಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ, ಬೆಳಗಾವಿ, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕರು ಅರ್ಜಿ ಕುರಿತು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಆದೇಶಿಸಿದ ಪೀಠವು ವಿಚಾರಣೆ ಮುಂದೂಡಿತು.

ದೇಶಾದ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರೈಲು ಮಾರ್ಗಗಳಲ್ಲಿ ವೇಗದ ಮಿತಿ ಕಡಿಮೆಗೊಳಿಸುವಂತೆ ರೈಲ್ವೆ ಇಲಾಖೆಗೆ ಸುಪ್ರಿಂ ಕೋರ್ಟ್ ನಿರ್ದೇಶಿಸಿದೆ. ಒಂದೊಮ್ಮೆ ವೇಗದ ಮಿತಿ ಕಡಿತಗೊಳಿಸದಿದ್ದರೆ ತಪ್ಪಿತಸ್ಥ ಚಾಲಕ ಮತ್ತು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ. ಅದರಂತೆ ರಾಜ್ಯದಲ್ಲೂ ಸುಪ್ರೀಂ ಕೋರ್ಟ್ ತೀರ್ಪು ಅನ್ವಯಿಸಲಿದೆ ಎಂದು ನ್ಯಾಯಾಲಯ ಹೇಳಿದ್ದು, ದೇಶದ ಯಾವುದೇ ಭಾಗದಲ್ಲಿರುವ ವನ್ಯಜೀವಿ ಸಂಪತ್ತು ಸಮಾನವಾದ ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಮೌಖಿಕವಾಗಿ ನುಡಿಯಿತು.

ಪ್ರಕರಣದ ಹಿನ್ನೆಲೆ: ಹೊಸಪೇಟೆ-ವಾಸ್ಕೋಡಗಾಮ ಹಾಗೂ ಲೋಂಡಾ-ಮೀರಜ್ ಮಾರ್ಗಗಳು ಧಾರವಾಡ, ಬೆಳಗಾವಿ, ಹಳಿಯಾಳ ಹಾಗೂ ದಾಂಡೇಲಿ ಸಂರಕ್ಷಿತ ಅರಣ್ಯಗಳ ನಡುವೆ ಹಾದುಹೋಗಿವೆ. ಲಭ್ಯ ಮಾಹಿತಿ ಪ್ರಕಾರ 2014ರಿಂದ ಈವರೆಗೆ ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಆನೆ, ಕಾಡುಕೋಣ, ಕರಡಿ, ಕಾಡುನಾಯಿ, ಕಾಡುಹಂದಿ ಹಾಗೂ ಜಿಂಕೆಗಳು ಸೇರಿ 60ಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ರೈಲುಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ದೇಶದ ಎಲ್ಲಾ ದಟ್ಟ ಅರಣ್ಯಗಳಲ್ಲಿ ರೈಲುಗಳ ವೇಗ ತಗ್ಗಿಸಬೇಕು ಎಂದು ರೈಲ್ವೆ ಇಲಾಖೆಗೆ ಸುಪ್ರೀಂ ಕೋರ್ಟ್ 2013ರಲ್ಲೇ ಆದೇಶ ಮಾಡಿದೆ. ವೇಗ ಕಡಿಮೆ ಮಾಡದಿದ್ದರೆ ಚಾಲಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆದೇಶಿಸಿದೆ. ಆದರೆ ಆದೇಶ ಪಾಲನೆಯಾಗಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಅಗತ್ಯ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com