ರೇರಾ ಕಾಯಿದೆ ಅಡಿ ಮೇಲ್ಮನವಿ ನ್ಯಾಯಮಂಡಳಿಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸುವ ಅಧಿಕಾರವಿಲ್ಲ: ದೆಹಲಿ ಹೈಕೋರ್ಟ್

ತಾನೇ ಸ್ವತಂತ್ರವಾಗಿ ಪ್ರಕರಣವನ್ನು ದಾಖಲಿಸಿ ನ್ಯಾಯಿಕ ಪ್ರಕ್ರಿಯೆ ಆರಂಭಿಸಲು ರೇರಾ ಕಾಯಿದೆಯು ಮೇಲ್ಮನವಿ ನ್ಯಾಯಮಂಡಳಿಗೆ ಯಾವುದೇ ಅಧಿಕಾರ ನೀಡಿಲ್ಲ ಎಂದ ನ್ಯಾಯಾಲಯ.
ರೇರಾ ಕಾಯಿದೆ ಅಡಿ ಮೇಲ್ಮನವಿ ನ್ಯಾಯಮಂಡಳಿಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸುವ ಅಧಿಕಾರವಿಲ್ಲ: ದೆಹಲಿ ಹೈಕೋರ್ಟ್
Delhi High Court

ರಿಯಲ್‌ ಎಸ್ಟೇಟ್‌ ಮೇಲ್ಮನವಿ ನ್ಯಾಯಮಂಡಳಿಗೆ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸುವ ಅಧಿಕಾರ ಇಲ್ಲ ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಪ್ರವೀಣ್‌ ಛಾಬ್ರಾ ವರ್ಸಸ್‌ ರಿಯಲ್‌ ಎಸ್ಟೇಟ್‌ ಮೇಲ್ಮನವಿ ನ್ಯಾಯಮಂಡಳಿ]. ಆ ಮೂಲಕ ಅದು ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ನಡೆವ ನಿರ್ಮಾಣ ಚಟುವಟಿಕೆಗಳ ಮೇಲ್ವಿಚಾರಣೆಗೆ ಮುಂದಾಗಿದ್ದ ಮಂಡಳಿಯ ವಿಚಾರಣಾ ಪ್ರಕ್ರಿಯೆಯನ್ನು ಬದಿಗೆ ಸರಿಸಿದೆ.

ಪ್ರಕರಣದ ವಿಚಾರಣೆ ನೆಡಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು, ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ, 2016ರ ಅಡಿ ಮೇಲ್ಮನವಿ ನ್ಯಾಯಮಂಡಳಿಯ ಅಧಿಕಾರ ವ್ಯಾಪ್ತಿಯು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ ಅಥವಾ ಸಂಬಂಧಪಟ್ಟ ನ್ಯಾಯ ನಿರ್ಣಯ ಪ್ರಾಧಿಕಾರಗಳ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗುವ ಮೇಲ್ಮನವಿಗಳನ್ನು ತೀರ್ಮಾನಿಸುವುದಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ತಾನೇ ಸ್ವತಂತ್ರವಾಗಿ ಪ್ರಕರಣವನ್ನು ದಾಖಲಿಸಿ ನ್ಯಾಯಿಕ ಪ್ರಕ್ರಿಯೆ ಆರಂಭಿಸಲು ಕಾಯಿದೆಯು ಮೇಲ್ಮನವಿ ನ್ಯಾಯಮಂಡಳಿಗೆ ಯಾವುದೇ ಅಧಿಕಾರ ಅಥವಾ ನ್ಯಾಯಿಕ ವ್ಯಾಪ್ತಿಯನ್ನು ನೀಡುವುದಿಲ್ಲ ಎಂದು ನ್ಯಾಯಾಲಯವು ಹೇಳಿತು.

ಪ್ರಸಕ್ತ ಪ್ರಕರಣದಲ್ಲಿ ನ್ಯಾಯಮಂಡಳಿಯು ದೆಹಲಿ ರಾಷ್ಟ್ರ ರಾಜಧಾನಿ ವಲಯದ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಅನೇಕ ವಸತಿ ನಿರ್ಮಾಣ ಮತ್ತು ವಾಣಿಜ್ಯ ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ಪ್ರಕ್ರಿಯೆಯನ್ನು ಆರಂಭಿಸಿತ್ತು. ಅಲ್ಲದೆ, ಅಂತಹ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ನಿರ್ಬಂಧದ ಆದೇಶಗಳನ್ನೂ ಹೊರಡಿಸಿತ್ತು.

ರೇರಾ ಕಾಯಿದೆಯಡಿ ನಿರ್ಮಾಣ ನೊಂದಾವಣಿಯಾಗದ ಹೊರತು ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧಿಸಿ ಆದೇಶವನ್ನು ಸಹ ಮಂಡಳಿಯು ಹೊರಡಿಸಿತ್ತು.

Related Stories

No stories found.
Kannada Bar & Bench
kannada.barandbench.com