ಪರಿತ್ಯಕ್ತ ಮಕ್ಕಳಿಗೆ ಮೀಸಲಾತಿ: ಲಾಭಕ್ಕಾಗಿ ಪೋಷಕರು ಹೆಣ್ಣು ಮಗುವನ್ನು ತ್ಯಜಿಸಬಹುದು ಎಂದು ಬಾಂಬೆ ಹೈಕೋರ್ಟ್ ಆತಂಕ

ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಮಕ್ಕಳನ್ನು ತೊರೆಯುವ ಸ್ಥಿತಿ ಸೃಷ್ಟಿಸಲು ತಾನು ಬಯಸುವುದಿಲ್ಲ ಎಂದು ಸರ್ಕಾರ ವಾದಿಸಿತು. ಇದಕ್ಕೆ ತಲೆದೂಗಿದ ನ್ಯಾಯಾಲಯ ಅದರಲ್ಲಿಯೂ ಹೆಣ್ಣು ಮಕ್ಕಳು ಪರಿತ್ಯಕ್ತರಾಗುವ ಸ್ಥಿತಿ ತಲೆದೋರುತ್ತದೆ ಎಂದಿತು.
Bombay High Court
Bombay High Court

ಪರಿತ್ಯಕ್ತ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದರೆ ಮೀಸಲಾತಿ ಪ್ರಯೋಜನ ಪಡೆಯುವುದಕ್ಕಾಗಿ ಪೋಷಕರು ಮಕ್ಕಳನ್ನು ಅದರಲ್ಲಿಯೂ ಹೆಣ್ಣು ಮಕ್ಕಳನ್ನು ತೊರೆಯಬಹುದು ಎಂದು ಬಾಂಬೆ ಹೈಕೋರ್ಟ್‌ ಈಚೆಗೆ ಕಳವಳ ವ್ಯಕ್ತಪಡಿಸಿದೆ.  

ಅನಾಥ ಮಕ್ಕಳಿಗೆ ನೀಡುತ್ತಿರುವಂತೆಯೇ ಪರಿತ್ಯಕ್ತ ಮಕ್ಕಳಿಗೂ ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸರ್ಕಾರೇತರ ಸಂಸ್ಥೆ ಎನ್‌ಇಎಸ್‌ಟಿ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಡಾ. ಬೀರೇಂದ್ರ ಸರಾಫ್, ರಾಜ್ಯ ಸರ್ಕಾರ ಪರಿತ್ಯಕ್ತ ಮಕ್ಕಳಿಗೆ ಈ ಬಗೆಯ ಮೀಸಲಾತಿ ನೀಡಿದರೆ, ಉದ್ದೇಶಪೂರ್ವಕವಾಗಿ ಮೀಸಲಾತಿ ಸೌಲಭ್ಯಕ್ಕಾಗಿ ಮಕ್ಕಳನ್ನು ತೊರೆಯುವ ಪರಿಸ್ಥಿತಿ ಸೃಷ್ಟಿಯಾಗಬಹುದು. ಅಂತಹ ಸ್ಥಿತಿ ರೂಪುಗೊಳ್ಳುವುದನ್ನು ಸರ್ಕಾರ ಬಯಸುವುದಿಲ್ಲ ಎಂದು ವಾದಿಸಿದರು.

Also Read
ಶಿಕ್ಷಣ, ಉದ್ಯೋಗದಲ್ಲಿ ತೃತೀಯಲಿಂಗಿಗಳಿಗೆ ಪ್ರತ್ಯೇಕ ಮೀಸಲಾತಿ ಬೇಡ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಅಫಿಡವಿಟ್‌

ಇದನ್ನು ಒಪ್ಪಿದ ನ್ಯಾಯಾಲಯ ʼನಮ್ಮ ಆತಂಕವೂ ಇದೇ ಆಗಿದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಪರಿತ್ಯಕ್ತರಾಗುವುದನ್ನು ಇದು ಉತ್ತೇಜಿಸುತ್ತದೆ. ಸಮತೋಲನ ಕಂಡುಕೊಳ್ಳಬೇಕಿದೆʼ ಎಂದಿತು.

ಪ್ರತಿಷ್ಠಾನದ ಪರ ಹಾಜರಾದ ವಕೀಲ ಅಭಿನವ್ ಚಂದ್ರಚೂಡ್, ಬಾಲ ನ್ಯಾಯ ಕಾಯಿದೆಯು ಪರಿತ್ಯಕ್ತ ಮತ್ತು ಅನಾಥ ಮಕ್ಕಳ ನಡುವೆ ಯಾವುದೇ ಭೇದ ಸೃಷ್ಟಿಸುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಇಂತಹ ವರ್ಗೀಕರಣ ಮಾಡುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ವಾದಿಸಿದರು.

ಇದೇ ವೇಳೆ ನ್ಯಾಯಾಲಯ ಪರಿತ್ಯಕ್ತ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನುಣುಚಿಕೊಳ್ಳಬಾರದು, ಸಮತೋಲನ ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿತು. ಆಗ ಸರಾಫ್‌ ಅವರು ಅಂತಹ ಮಕ್ಕಳನ್ನು 18 ವರ್ಷ ವಯಸ್ಸಿನವರೆಗೆ ಸರ್ಕಾರ ಸಲಹುತ್ತಿದೆ. ಅದು ಮೀಸಲಾತಿಯನ್ನಷ್ಟೇ ನೀಡಿಲ್ಲ ಎಂದು  ಹೇಳಿದರು. ಬರುವ ವಾರ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

Kannada Bar & Bench
kannada.barandbench.com