ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: ನ್ಯಾ. ಸುಭಾಷ್ ಆಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಕಾರ್ಯಾಚರಣೆಗೆ ಹೈಕೋರ್ಟ್‌ ತಡೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲು ಅರ್ಜಿದಾರರರಿಗೆ ಪೀಠವು ಆದೇಶ ಮಾಡಿದ್ದು, ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಿದೆ.
High Court of Karnataka
High Court of Karnataka

ವೀರಶೈವ-ಲಿಂಗಾಯತ ಪಂಚಮಸಾಲಿ ಉಪ ಪಂಗಡವನ್ನು 2ಎಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಮುಂದಿನ ಆದೇಶದವರೆಗೆ ಮುಂದುವರಿಯದಂತೆ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಆಡಿ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಕಾನೂನಿಗೆ ವಿರುದ್ಧವಾಗಿ ಉನ್ನತಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೆಂಕಟರಾಮಯ್ಯ ಅವರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲು ಅರ್ಜಿದಾರರರಿಗೆ ಪೀಠವು ಆದೇಶ ಮಾಡಿದ್ದು, ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಹಾಲಿ ಪ್ರಕರಣದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಬೇಕಿದೆ” ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಆಯೋಗವನ್ನು ಪ್ರತಿವಾದಿಗಳನ್ನಾಗಿಸಲಾಗುವುದು“ ಎಂದು ಪೀಠಕ್ಕೆ ತಿಳಿಸಿದ್ದರು.

ಪಂಚಮಸಾಲಿ ಉಪ ಪಂಗಡವನ್ನು 3ಬಿ ವಿಭಾಗದಿಂದ 2ಎ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರವು 2021ರ ಜುಲೈ 1ರಂದು ಆದೇಶ ಹೊರಡಿಸಿದೆ.

ನ್ಯಾಯಾಲಯದ ಮುಂದಿರುವ ಪ್ರಶ್ನೆ

ಹಿಂದುಳಿದ ವರ್ಗದ ಪಟ್ಟಿಗೆ ಯಾವುದೇ ವರ್ಗದ ಜನರನ್ನು ಸೇರಿಸುವುದು ಮತ್ತು ಸೇರ್ಪಡೆಗೆ ಸಂಬಂಧಿಸಿದ ದೂರುಗಳನ್ನು ಆಲಿಸುವುದು ಅಥವಾ ಯಾವುದೇ ಹಿಂದುಳಿದ ವರ್ಗದ ಪಟ್ಟಿಯಡಿ ಸೇರ್ಪಡೆಯು 1995ರ ಕಾಯಿದೆಗೆ ಒಳಪಟ್ಟಿದೆ. ಹೀಗಾಗಿ, ಈಗ 3ಬಿ ಅಡಿ ಇರುವ ಪಂಚಮಸಾಲಿ ಲಿಂಗಾಯತ ಉಪ ಪಂಗಡವನ್ನು 2ಎ ವಿಭಾಗಕ್ಕೆ ಸೇರಿಸಲು ಉನ್ನತಮಟ್ಟದ ಸಮಿತಿ ರಚಿಸಲು ರಾಜ್ಯ ಸರ್ಕಾರವು ಕಾರ್ಯಾದೇಶ ಮಾಡಬಹುದೇ? ಇದು ಸಾಧ್ಯವಾದರೆ ಯಾವ ಸಂದರ್ಭದಲ್ಲಿ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

Also Read
ಪಂಚಮಸಾಲಿ ಮೀಸಲಾತಿ: ತಜ್ಞರ ಸಮಿತಿ ರಚನೆ ಆದೇಶ ರದ್ದಿಗೆ ಕೋರಿದ್ದ ಮನವಿಯನ್ನು ವಿಭಾಗೀಯ ಪೀಠದ ಮುಂದಿಡಲು ಶಿಫಾರಸ್ಸು

ಅಲ್ಲದೇ, ಅರ್ಜಿದಾರ ಒಕ್ಕೂಟವು ಕಾರ್ಯದರ್ಶಿಗೆ ಅಧಿಕಾರ ನೀಡಿರುವ ಗೊತ್ತುವಳಿ, ಬೈಲಾ ಮತ್ತು ತನ್ನ ಸದಸ್ಯರ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಇಡದಿರುವುದರಿಂದ ಆ ಒಕ್ಕೂಟದ ಕೋರಿಕೆಯ ಹಿನ್ನೆಲೆಯಲ್ಲಿ ಮೊದಲ ಪ್ರಶ್ನೆಯನ್ನು ಪರಿಶೀಲಿಸಬಹುದೇ ಎಂಬ ಮತ್ತೊಂದು ಪ್ರಶ್ನೆ ಪೀಠದ ಮುಂದೆ ಇದೆ ಎಂದು ಹೇಳಿದೆ.

ಮೇಲಿನ ಎರಡೂ ಪ್ರಶ್ನೆಗಳನ್ನು ವಿಭಾಗೀಯ ಪೀಠದ ಮುಂದೆ ಇಡುವುದು ಸೂಕ್ತ ಎಂದು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅವರ ಅನುಮೋದನೆ ಪಡೆದು ಹಾಲಿ ಪೀಠದ ಮುಂದೆ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com