ಸೇವಾಶುಲ್ಕ ವಿಧಿಸಲು ನಿರ್ಬಂಧ: ದೆಹಲಿ ಹೈಕೋರ್ಟ್ ಮೊರೆ ಹೋದ ಭಾರತೀಯ ರೆಸ್ಟರಂಟ್‌ಗಳ ಸಂಘ

ರೆಸ್ಟರಂಟ್‌ಗಳಿಗೆ ಸೇವಾ ಶುಲ್ಕ ವಿಧಿಸುವುದಕ್ಕೆ ಅನುಮತಿ ನೀಡದೆ ಇರುವಂತಹ ಯಾವುದೇ ಕಾನೂನು ಇಲ್ಲ. ಆದ್ದರಿಂದ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಅಂತಹ ಷರತ್ತು ವಿಧಿಸಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.
ಸೇವಾಶುಲ್ಕ ವಿಧಿಸಲು ನಿರ್ಬಂಧ: ದೆಹಲಿ ಹೈಕೋರ್ಟ್ ಮೊರೆ ಹೋದ ಭಾರತೀಯ ರೆಸ್ಟರಂಟ್‌ಗಳ ಸಂಘ

ರೆಸ್ಟರಂಟ್‌ಗಳು ಗ್ರಾಹಕರ ಮೇಲೆ ಬಲವಂತವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂದು ಜುಲೈ 4ರಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪ್ರಶ್ನಿಸಿ ರಾಷ್ಟ್ರೀಯ ರೆಸ್ಟರಂಟ್‌ ಅಸೋಸಿಯೇಷನ್ ​​ಆಫ್ ಇಂಡಿಯಾ (ಎನ್‌ಆರ್‌ಎಐ) ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಎನ್‌ಆರ್‌ಎಐ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ].

ರೆಸ್ಟೋರೆಂಟ್‌ಗಳಿಗೆ ಸೇವಾ ಶುಲ್ಕ ವಿಧಿಸುವುದಕ್ಕೆ ಅನುಮತಿ ನೀಡದೆ ಇರುವಂತಹ ಯಾವುದೇ ಕಾನೂನು ಇಲ್ಲ. ಆದ್ದರಿಂದ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಅಂತಹ ಷರತ್ತು ವಿಧಿಸಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ವಾದಿಸಲಾಗಿದೆ.

ಸೋಮವಾರ ಅರ್ಜಿಯನ್ನು ಸಂಕ್ಷಿಪ್ತವಾಗಿ ಆಲಿಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ಜುಲೈ 21ಕ್ಕೆ ಪ್ರಕರಣ ಮುಂದೂಡಿದರು. ಎನ್‌ಆರ್‌ಎಐ ಪರವಾಗಿ ವಕೀಲರಾದ ನೀನಾ ಗುಪ್ತಾ ಮತ್ತು ಅನನ್ಯಾ ಮರ್ವಾ ವಾದ ಮಂಡಿಸಿದರು.

ಅರ್ಜಿಯ ಪ್ರಮುಖಾಂಶಗಳು

  • ಮಾರ್ಗಸೂಚಿಗಳ ಬಗ್ಗೆ ಸರಿಯಾದ ದೃಢೀಕರಣ ಮತ್ತು ಘೋಷಣೆ ಇಲ್ಲದಿರುವುದರಿಂದ ಅವುಗಳನ್ನು ಸರ್ಕಾರದ ಆದೇಶ ಎಂದು ಪರಿಗಣಿಸಬಾರದು.

  • ಮಾರ್ಗಸೂಚಿಗಳು ಅನಿಯಂತ್ರಿತ, ಅಸಮರ್ಥನೀಯ ಮತ್ತು ಅವುಗಳನ್ನು ತಳ್ಳಿಹಾಕಬೇಕು.

  • 80 ವರ್ಷಗಳಿಗೂ ಹೆಚ್ಚು ಕಾಲದಿಂದ ಹೋಟೆಲ್‌ ಉದ್ಯಮದಲ್ಲಿ ಸೇವಾ ಶುಲ್ಕ ವಿಧಿಸುವ ಪರಿಪಾಠ ಇದೆ. 1964ರಷ್ಟು ಹಿಂದೆಯೇ ಮ್ಯಾನೇಜ್‌ಮೆಂಟ್‌ ಆಫ್‌ ವೆಂಗರ್‌ ಅಂಡ್‌ ಕಂಪೆನಿ ಮತ್ತು ಅದರ ಕೆಲಸಗಾರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈ ಪರಿಕಲ್ಪನೆಯನ್ನು ಪರಿಗಣಿಸಿದೆ.

  • ಸೇವಾ ಶುಲ್ಕ ವಿಧಿಸುವುದು ರೆಸ್ಟರಂಟ್‌ ಮತ್ತು ಗ್ರಾಹಕರ ನಡುವಿನ ಒಪ್ಪಂದದ ವಿಷಯವಾಗಿದ್ದು ಅದು ಅನ್ಯಾಯದ ವ್ಯಾಪಾರದ ರೂಢಿಯಾಗಿರದೇ ಇದ್ದರೆ ಯಾವುದೇ ಪ್ರಾಧಿಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.

  • ಸೇವಾ ಶುಲ್ಕವನ್ನು ರೆಸ್ಟರಂಟ್‌ ಕಾರ್ಮಿಕರಿಗೆ ಸಮಾನವಾಗಿ ಹಂಚಲಾಗುತ್ತದೆ.

  • ಸೇವಾ ಶುಲ್ಕ ವಿಧಿಸುವುದು ಜಾಗತಿಕವಾಗಿ ಒಪ್ಪಿತ ವ್ಯಾಪಾರಾಭ್ಯಾಸವಾಗಿದ್ದು ಇಂಗ್ಲೆಂಡ್‌, ಸಿಂಗಪೋರ್‌, ಜಪಾನ್‌ ಅಮೆರಿಕದಂತಹ ದೇಶಗಳಲ್ಲಿ ಶೇ 8ರಿಂದ 12.5ರವರೆಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ.

  • ಸೇವಾ ಶುಲ್ಕ ವಿಧಿಸುವ ಕಾನೂನುಬದ್ಧತೆ, ಸಮಂಜಸತೆ ಅಥವಾ ಸಮರ್ಥನೆಯನ್ನು ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಈ ಹಿಂದಿನ ಏಕಸ್ವಾಮ್ಯ ಮತ್ತು ನಿರ್ಬಂಧಿತ ವ್ಯಾಪಾರ ಅಭ್ಯಾಸಗಳ ಆಯೋಗ ಗಣನೆಗೆ ತೆಗೆದುಕೊಂಡಿದ್ದವು.

  • ಟಿಪ್ಸ್‌ ಬದಲಾಗಿ ವಿಧಿಸಲಾಗುತ್ತಿರುವ ಸೇವಾ ಶುಲ್ಕವನ್ನು ವಿವಿಧ ನ್ಯಾಯಾಲಯಗಳು ತಮ್ಮ ತೀರ್ಪಿನಲ್ಲಿ ಎತ್ತಿ ಹಿಡಿದಿವೆ.

Related Stories

No stories found.
Kannada Bar & Bench
kannada.barandbench.com