ವರ್ಚುವಲ್ ಕಲಾಪದಲ್ಲಿ ಹೊಣಗೇಡಿತನ ಪ್ರದರ್ಶಿಸಬೇಡಿ; ಕೆಲ ವಕೀಲರ ಅಸಭ್ಯ ನಡತೆಗೆ ಕೆಎಸ್‌ಬಿಸಿ ಕೆಂಡಾಮಂಡಲ

ಶಿಷ್ಟಾಚಾರ ಮತ್ತು ಶಿಸ್ತು ಉಲ್ಲಂಘಿಸಿದವರ ವಿರುದ್ಧ ವಕೀಲರ ಕಾಯ್ದೆ 1961ರ ಸೆಕ್ಷನ್ 35 ಅಡಿ ಕಠಿಣ ಕ್ರಮಕೈಗೊಳ್ಳುವ ನಿರ್ಣಯವನ್ನು ಭಾನುವಾರ ನಡೆದ ಸಭೆಯಲ್ಲಿ ಕೆಎಸ್‌ಬಿಸಿ ಕೈಗೊಂಡಿದೆ.
Karnataka State Bar Council
Karnataka State Bar Council
Published on

ಕೋವಿಡ್ ಸಾಂಕ್ರಾಮಿಕತೆಯಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನ್ಯಾಯಿಕ ಪ್ರಕ್ರಿಯೆಗಳಿಗೆ ತೊಡಕಾಗದೆ ಇರಲಿ ಎಂದು ಅಂತರ್ಜಾಲ ಆಧರಿತ ವಿಡಿಯೋ ವಿಚಾರಣೆಯನ್ನು (ವರ್ಚುವಲ್‌ ವಿಚಾರಣೆ) ನ್ಯಾಯಾಂಗವು ನಡೆಸುತ್ತಿರುವುದು ತಿಳಿದಿರುವ ವಿಷಯ. ಆದರೆ, ಈ ವರ್ಚುವಲ್‌ ವಿಚಾರಣೆ ವೇಳೆ ನ್ಯಾಯಾಂಗ ಕಲಾಪದ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೇರಳವಾಗಿ ವರದಿಯಾಗುತ್ತಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ ಬಿಸಿ) ಶಿಷ್ಟಾಚಾರ ಮತ್ತು ಶಿಸ್ತು ಉಲ್ಲಂಘಿಸಿದವರ ವಿರುದ್ಧ ವಕೀಲರ ಕಾಯ್ದೆ 1961ರ ಸೆಕ್ಷನ್ 35 ಅಡಿ ಕಠಿಣ ಕ್ರಮಕೈಗೊಳ್ಳುವ ನಿರ್ಣಯವನ್ನು ಭಾನುವಾರ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

“ವರ್ಚುವಲ್ ವಿಚಾರಣೆ ಸಂದರ್ಭದಲ್ಲಿ ವಕೀಲರು ಸಮವಸ್ತ್ರ ಧರಿಸದೇ ಪಾಲ್ಗೊಳ್ಳುವುದು, ಅಡುಗೆ ಮನೆಯಲ್ಲಿರುವುದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವುದು, ಆಟೋ ಅಥವಾ ಕಾರಿನಲ್ಲಿ ಪ್ರಯಾಣಿಸುತ್ತಿರುವುದು, ಆಡಿಯೋ ನಿರ್ಬಂಧಿಸದೆ ಅಶ್ಲೀಲ ಭಾಷೆ ಬಳಸಿರುವ ವಿಚಾರಗಳು ವಕೀಲರ ಪರಿಷತ್ತಿನ ಗಮನಕ್ಕೆ ಬಂದಿವೆ. ಇದನ್ನು ಯಾವುದೇ ಕಾರಣಕ್ಕೂ ಪರಿಷತ್ತು ಸಹಿಸುವುದಿಲ್ಲ” ಎಂದು ರಾಜ್ಯ ವಕೀಲರ ಪರಿಷತ್ತಿನ ಕಾರ್ಯದರ್ಶಿ ಕೆ ಮಹದೇವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಎಸ್‌ಬಿಸಿ ಮಾಧ್ಯಮ ಹೇಳಿಕೆ
ಕೆಎಸ್‌ಬಿಸಿ ಮಾಧ್ಯಮ ಹೇಳಿಕೆ

ರಾಜಸ್ಥಾನದ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಿರಿಯ ವಕೀಲ ರಾಜೀವ್‌ ಧವನ್‌ ಅವರು ಕಾಗದವೊಂದನ್ನು ಅರೆಬರೆ ಮರೆಮಾಡಿಕೊಂಡು ಹುಕ್ಕಾ ಸೇದಿದ್ದರು. ಧವನ್ ಅವರು ಹುಕ್ಕಾ ಸೇದುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದನ್ನು ಇಲ್ಲಿ ನೆನೆಯಬಹುದು.

Also Read
ಹೊಗೆಯಲ್ಲಿ ಮರೆಯಾಯಿತೇ ಕಲಾಪದ ಶಿಷ್ಟಾಚಾರ? ವಿಚಾರಣೆ ವೇಳೆ ಗುಟ್ಕಾ ಜಗಿದ ವಕೀಲನ ಕಿವಿಹಿಂಡಿದ ಸುಪ್ರೀಂ ಕೋರ್ಟ್‌

ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ನಲ್ಲಿ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರ ನೇತೃತ್ವದ ಪೀಠವು ವರ್ಚುವಲ್‌ ವಿಚಾರಣೆ ನಡೆಸುತ್ತಿದ್ದ ವೇಳೆ ವಕೀಲರೊಬ್ಬರು ಗುಟ್ಕಾ ಜಗಿಯುತ್ತಿದ್ದುದು ಕಂಡುಬಂದಿತ್ತು. ಇದನ್ನು ಗಮನಿಸಿದ ನ್ಯಾಯಮೂರ್ತಿ ಮಿಶ್ರಾ ಅವರು ಕೂಡಲೇ ಆ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದರು. ಗಲಿಬಿಲಿಗೊಂಡ ಆ ವಕೀಲ ಕ್ಷೀಣ ದನಿಯಲ್ಲಿ “ಸಾರಿ” ಎಂದು ಕ್ಷಮೆಯಾಚಿಸಿದ್ದರು.

“ಏನು ಮಾಡುತ್ತಿದ್ದೀರಿ? ನೀವು ಮಾಡಿದ್ದನ್ನು ಗಮನಿಸಿದೆವು. ಸಾರಿ ಹೇಳಬೇಡಿ. ಮುಂದೆ ಇದನ್ನುನೀವು ಪುನರಾವರ್ತಿಸದಂತೆ ನೋಡಿಕೊಳ್ಳಿ. ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ” ಎಂದು ನ್ಯಾ. ಮಿಶ್ರಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com