ಕೋವಿಡ್-19 ಸೋಂಕಿನ ವಿರುದ್ಧ ಲಸಿಕೆ ತಯಾರಿಸುತ್ತಿರುವ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಕೋವಿಶೀಲ್ಡ್ ಹೆಸರಿನ ವ್ಯಾಪಾರಿ ಚಿಹ್ನೆ (ಟ್ರೇಡ್‌ಮಾರ್ಕ್) ಬಳಸದಂತೆ ತಡೆಯಾಜ್ಞೆ ನೀಡಲು ಬಾಂಬೆ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಹೆಸರಿಗೆ ತಡೆ ನೀಡಿದರೆ ಲಸಿಕೆ ಕಾರ್ಯಕ್ರಮದಲ್ಲಿ ಗೊಂದಲ ಮತ್ತು ಅಡ್ಡಿ ಉಂಟಾಗುತ್ತದೆ ಎಂದು ಅದು ತಿಳಿಸಿದೆ. ಹೆಸರು ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ಕ್ಯೂಟಿಸ್ ಬಯೋಟೆಕ್ ಅರ್ಜಿ ಸಲ್ಲಿಸಿತ್ತು.
ಕ್ಯೂಟಿಸ್ ಈ ಕುರಿತಂತೆ ಮೊದಲು ಪುಣೆಯ ವಾಣಿಜ್ಯ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ನ್ಯಾಯಾಲಯ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಅದು ಹೈಕೋರ್ಟ್ ಮೆಟ್ಟಿಲೇರಿತ್ತು. ಕೊರೊನಾ ಎದುರಿಸಲು ಇರುವ ಲಸಿಕೆ ಎಂದು ಕೋವಿಶೀಲ್ಡನ್ನು ವ್ಯಾಪಕವಾಗಿ ಕರೆಯಲಾಗುತ್ತಿದೆ ಎಂಬುದಾಗಿ ಆಕ್ಷೇಪಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಸಿ ವಿ ಭಡಾಂಗ್ ಅವರಿದ್ದ ಪೀಠ ತಿರಸ್ಕರಿಸಿತು.
2020ರ ಏಪ್ರಿಲ್ 29ರಂದು ಕ್ಯೂಟಿಸ್ ಬಯೋಟೆಕ್ ಕೋವಿಶೀಲ್ಡ್ ಹೆಸರಿನ ವ್ಯಾಪಾರ ಚಿಹ್ನೆಗಾಗಿ ಮತ್ತು ಅದೇ ವರ್ಷ ಡಿಸೆಂಬರ್ 12 ರಂದು ಲಸಿಕೆಗಳಿಗಾಗಿ ನೋಂದಣಿ ಮಾಡಿಕೊಂಡಿತ್ತು. ಸಿರಂ 2020ರ ಜೂನ್ 6ರಂದು ಅದೇ ಹೆಸರಿನಲ್ಲಿ ವ್ಯಾಪರ ಚಿಹ್ನೆ ನೋಂದಣಿಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ತಾನು ಮಾರ್ಚ್‌ನಲ್ಲಿಯೇ ʼಕೋವಿಶೀಲ್ಡ್ʼ ಹೆಸರನ್ನು ಚಾಲ್ತಿಗೆ ತಂದಿರುವುದಾಗಿ ಸಿರಮ್ ವಾದ ಮಂಡಿಸಿತು.
ಕ್ಯೂಟಿಸ್ ಆಗಲೀ ಅಥವಾ ಸಿರಮ್ ಆಗಲೀ ಪ್ರಸ್ತುತ ಟ್ರೇಡ್‌ಮಾರ್ಕ್ ನೋಂದಣಿ ಹೊಂದಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ಕ್ಯೂಟಿಸ್ ಬಳಿ ನೋಂದಾಯಿತ ಟ್ರೇಡ್‌ಮಾರ್ಕ್ ಇಲ್ಲದಿರುವುದರಿಂದ ಟ್ರೇಡ್‌ಮಾರ್ಕ್ ನಿಯಮಗಳು ಅನ್ವಯಿಸುವುದಿಲ್ಲ. ಸಿರಮ್ ಈ ಟ್ರೇಡ್‌ಮಾರ್ಕ್‌ನ ಮೊದಲ ಬಳಕೆದಾರರಾಗಿರುವುದರಿಂದ ಮತ್ತು ವಹಿವಾಟಿನ ವರ್ಗಾವಣೆ ಹಕ್ಕನ್ನು ಪಡೆದಿರುವುದರಿಂದ ಹಾಗೂ ಗ್ರಾಹಕರು ಪ್ರಜ್ಞಾಪೂರ್ವಕವಾಗಿ ಕ್ಯೂಟಿಸ್ ಬಯೋಟೆಕ್ ವಸ್ತುಗಳನ್ನು ಖರೀದಿಸದ ಕಾರಣ ಸೆರಮ್ ಟ್ರೇಡ್‌ಮಾರ್ಕ್ ನಿಯಮಗಳನ್ನುಉಲ್ಲಂಘಿಸಿದೆ ಎನ್ನಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಸಿರಮ್ ಈವರೆಗೆ ರೂ. 37,507 ಲಕ್ಷ ರೂ ಮೊತ್ತದ ವಹಿವಾಟು ನಡೆಸಸಿದೆ. 28 ಕೋಟಿ ರೂಪಾಯಿಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವಿನಿಯೋಗಿಸಿದ್ದು ಇನ್ನೂ ರೂ 20 ಕೋಟಿಗಳನ್ನು ಅದಕ್ಕಾಗಿ ಮೀಸಲಿಟ್ಟಿದೆ ಇತ್ಯಾದಿ ಅಂಶಗಳನ್ನು ಗಮನಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡುವುದರಿಂದ ಸಿರಮ್ ವ್ಯವಹಾರಗಳ ಮೇಲೆ ಹಾಗೂ ಲಸಿಕಾ ಕಾರ್ಯಕ್ರಮದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿತು.