ಯುಎಪಿಎ ರೀತಿಯ ಕಾಯಿದೆಗಳಲ್ಲಿನ ನಿರ್ಬಂಧಾತ್ಮಕ ಷರತ್ತುಗಳು ಜಾಮೀನು ನೀಡುವುದಕ್ಕೆ ಅಡ್ಡಿಯಾಗದು: ಸುಪ್ರೀಂ

"ದೀರ್ಘಕಾಲದ ಸೆರೆವಾಸಕ್ಕೆ ಒಳಗಾದ ವಿಚಾರಣಾಧೀನ ಕೈದಿಗಳ ಸ್ವಾತಂತ್ರ್ಯದ ವಿಷಯಕ್ಕೆ ಬಂದಾಗ, ನ್ಯಾಯಾಲಯಗಳು ಸಾಂವಿಧಾನಿಕತೆಯ ಕಡೆಗೆ ಒಲವು ತೋರಬೇಕು" ಎಂದು ಪೀಠ ನುಡಿಯಿತು
UAPA
UAPA
Published on

ಕಠಿಣ ದಂಡನೀಯ ಕಾಯಿದೆಗಳ ನಿರ್ಬಂಧಾತ್ಮಕ ಷರತ್ತುಗಳು ನ್ಯಾಯಾಲಯಗಳು ಜಾಮೀನು ನೀಡುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ [ಶೇಖ್ ಜಾವೇದ್ ಇಕ್ಬಾಲ್ @ ಅಶ್ಫಾಕ್ ಅನ್ಸಾರಿ @ ಜಾವೇದ್ ಅನ್ಸಾರಿ ಮತ್ತು  ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಖೋಟಾ ನೋಟು ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ನೇಪಾಳದ ಗಡಿಯಲ್ಲಿ ಬಂಧಿತನಾಗಿದ್ದ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡುವ ವೇಳೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

2015ರಲ್ಲಿ ಭಯೋತ್ಪಾದನಾ ನಿಗ್ರಹ ದಳದಿಂದ (ಎಟಿಎಸ್) ಬಂಧನಕ್ಕೊಳಗಾದ ವ್ಯಕ್ತಿ ಎಂಟು ವರ್ಷಗಳ ಕಾಲ ಜೈಲಿನಲ್ಲಿದ್ದರು.  

Also Read
ಪಾಕ್ ಪ್ರಾಯೋಜಿತ ಕಾಶ್ಮೀರಿ ಸಂಘಟನೆಗಳ ಮೇಲೆ ನಿಷೇಧ: ಗೃಹ ಸಚಿವಾಲಯದ ಆದೇಶ ಎತ್ತಿಹಿಡಿದ ಯುಎಪಿಎ ನ್ಯಾಯಮಂಡಳಿ

“ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಪ್ರತಿಪಾದಿಸಲಾದ ಜೀವಿಸುವ ಹಕ್ಕು ಮತ್ತು ವ್ಯಕ್ತಿಗತ ಸ್ವಾತಂತ್ರ್ಯಸಮಗ್ರ ಮತ್ತು ಪವಿತ್ರವಾದುದಾಗಿದೆ. ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಆರೋಪಿ-ವಿಚಾರಣಾಧೀನ ವ್ಯಕ್ತಿಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಕಂಡುಬಂದರೆ, ದಂಡನೀಯ ಕಾಯಿದೆಯಲ್ಲಿ ನಿರ್ಬಂಧಾತ್ಮಕ ಶಾಸನಬದ್ಧ ನಿಯಮಾವಳಿಗಳ ಕಾರಣಕ್ಕಾಗಿ ಸಾಂವಿಧಾನಿಕ ನ್ಯಾಯಾಲಯ ಆರೋಪಿಗೆ ಜಾಮೀನು ನೀಡುವುದನ್ನು ನಿರ್ಬಂಧಿಸುವಂತಿಲ್ಲ. ಆ ಸಂದರ್ಭದಲ್ಲಿ, ಅಂತಹ ಶಾಸನಬದ್ಧ ನಿರ್ಬಂಧಗಳು ಅಡ್ಡಿಯಾಗುವುದಿಲ್ಲ. ಶಿಕ್ಷೆಯ ಕಾಯಿದೆಯ ವ್ಯಾಖ್ಯಾನದ ಸಂದರ್ಭದಲ್ಲಿ, ಅದು ಎಷ್ಟೇ ಕಠಿಣವಾಗಿರಲಿ, ಸಾಂವಿಧಾನಿಕ ನ್ಯಾಯಾಲಯ ಸಾಂವಿಧಾನಿಕತೆ ಮತ್ತು ಸ್ವಾತಂತ್ರ್ಯದ ಆಂತರಿಕ ಭಾಗವಾಗಿರುವ ಕಾನೂನಾತ್ಮಕ ಆಡಳಿತದೆಡೆಗೆ ಒಲವು ತೋರಬೇಕಾಗುತ್ತದೆ... ನಿರ್ದಿಷ್ಟ ಕಾನೂನಿನ ಅಡಿಯಲ್ಲಿ, ಜಾಮೀನು ನೀಡಲಾಗುವುದಿಲ್ಲ. ಇದು ನಮ್ಮ ಸಾಂವಿಧಾನಿಕ ನ್ಯಾಯಶಾಸ್ತ್ರದ  ಆಶಯಕ್ಕೆ ವಿರುದ್ಧವಾಗಿರುತ್ತದೆ ಎಂದು ಹೇಳುವುದು ತುಂಬಾ ತಪ್ಪಾಗುತ್ತದೆ,” ಎಂಬುದಾಗಿ ನ್ಯಾಯಾಲಯ  ಹೇಳಿದೆ.

ಆರೋಪಿತ ವ್ಯಕ್ತಿಯ ಮೊದಲ ಜಾಮೀನು ಅರ್ಜಿಯನ್ನು ಲಕ್ನೋದ ಸೆಷನ್ಸ್ ನ್ಯಾಯಾಲಯ 2016 ರಲ್ಲಿ ತಿರಸ್ಕರಿಸಿತ್ತು, ನಂತರ ಪರಿಹಾರ ಕೋರಿ ಆತ  ಅಲಾಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ.

ಯುಎಪಿಎ ಅಡಿ ಆರೋಪಿ ವಿರುದ್ಧ ಆರಂಭಿಸಲಾದ ಕೆಲ ಪ್ರಕ್ರಿಯೆಗಳಿಗೆ ಸೂಕ್ತ ಅನುಮತಿ ಇರದ ಕಾರಣ ಅವುಗಳನ್ನು ಅಲಾಹಾಬಾದ್‌ ಹೈಕೋರ್ಟ್‌ ರದ್ದುಗೊಳಿಸಿತ್ತು. ಈ ಆದೇಶವನ್ನು ಎಟಿಎಸ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತಾದರೂ ಈ ಅಂಶದ ಕುರಿತು ಇನ್ನೂ ತೀರ್ಪು ಪ್ರಕಟಿಸಿರಲಿಲ್ಲ.

Also Read
ಜೈಲಿನಲ್ಲಿ ವಕೀಲರ ಜೊತೆ ಹೆಚ್ಚು ಸಭೆಗಳನ್ನು ನಡೆಸಲು ಕೇಜ್ರಿವಾಲ್‌ ಕೋರಿಕೆ: ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ಹೀಗಾಗಿ ಕ್ರಿಮಿನಲ್ ವಿಚಾರಣೆ ಶೀಘ್ರದಲ್ಲೇ ಮುಗಿಯುವ ಸಾಧ್ಯತೆ ಇಲ್ಲ ಆದ್ದರಿಂದ ಎಂಟು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಯನ್ನು ಪರಿಗಣಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೈಕೋರ್ಟ್ ಅನುಮತಿ ನೀಡಬೇಕು ಎಂದು ಆರೋಪಿ ಪರ ವಕೀಲರು ಒತ್ತಾಯಿಸಿದರು.

ಆದರೆ, ಏಪ್ರಿಲ್ 2023 ರಲ್ಲಿ, ಅಲಹಾಬಾದ್ ಹೈಕೋರ್ಟ್ ಆರೋಪಿಯು ನೇಪಾಳದಿಂದ ಬಂದಿದ್ದು ಜೈಲಿನಿಂದ ಬಿಡುಗಡೆ ಮಾಡಲು ಅನುಮತಿಸಿದರೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಅದು ಈಗ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.

Kannada Bar & Bench
kannada.barandbench.com