ಕರ್ನಾಟಕ ಹೈಕೋರ್ಟ್‌ನ ಎಲ್ಲಾ ಪೀಠಗಳಲ್ಲಿ ಸೋಮವಾರದಿಂದ ವಿಡಿಯೊ ಕಾನ್ಫರನ್ಸ್ ಸೇವೆ ಪುನಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲು ವಕೀಲರು, ಪಾರ್ಟಿ ಇನ್‌ಪರ್ಸನ್ಸ್, ದಾವೆದಾರರಿಗೆ ಹೈಕೋರ್ಟ್ ಕಂಪ್ಯೂಟರ್ ವಿಭಾಗವು ಸುಧಾರಿತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಜೂಮ್ ಅಪ್ಲಿಕೇಶನ್‌ನಲ್ಲಿ ಸೈನ್‌ಅಪ್ ಪ್ರಕ್ರಿಯೆ ಮೂಲಕ ಒಂದು ಬಾರಿಯ ಕ್ರಮದ ಭಾಗವಾಗಿ ಎಲ್ಲಾ ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರು, ಮಾಧ್ಯಮದವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇಂಥ ನೋಂದಾಯಿತ ಬಳಕೆದಾರರನ್ನು ಮಾತ್ರವೇ ವಿಡಿಯೊ ಕಾನ್ಫರೆನ್ಸ್ ಮೂಲಕ ಕಲಾಪಕ್ಕೆ ಅನುಮತಿಸಲಾಗುತ್ತದೆ.
ಜೂಮ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೂ ಮುನ್ನ ಪ್ರತಿಯೊಬ್ಬ ವಕೀಲ, ಪಾರ್ಟಿ ಇನ್ ಪರ್ಸನ್, ದಾವೆದಾರರು, ಸರ್ಕಾರಿ ಇಲಾಖೆಗಳು ಕಡ್ಡಾಯವಾಗಿ ಹೈಕೋರ್ಟ್‌ನ ಆನ್‌ಲೈನ್ ಡಿಜಿಟಲ್ ಕೇಸ್ ಡೈರಿ ಪೋರ್ಟಲ್ (https://karnatakajudiciary.kar.nic.in/advreg/)ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲಿ ಕಡ್ಡಾಯ ನೋಂದಣಿಯಾದರೆ ಮಾತ್ರ ಇಮೇಲ್ ಐಡಿಗಳನ್ನು ವೈಟ್‌ಲಿಸ್ಟ್ ಮಾಡಲು ಸಾಧ್ಯ. ಸೈಬರ್ ಭದ್ರತಾ ದೃಷ್ಟಿಯಿಂದ ಈ ಕ್ರಮ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.
ಆನ್‌ಲೈನ್ ಡಿಜಿಟಲ್ ಕೇಸ್ ಡೈರಿ ಪೋರ್ಟಲ್‌ನಲ್ಲಿ ನೋಂದಣಿ ಮಾಡುವಾಗ ಬಳಕೆ ಮಾಡಲಾದ ಇಮೇಲ್ ಐಡಿ ಸೈನ್‌ಅಪ್/ಲಾಗಿನ್ ಐಡಿಯಾಗಿ ಜೂಮ್ ವಿಡಿಯೊ ಕಾನ್ಫರೆನ್ಸ್ ವೇದಿಕೆಯಲ್ಲಿ ಬಳಕೆಯಾಗಲಿದೆ. ಈಗಾಗಲೇ ಆನ್‌ಲೈನ್ ಡಿಜಿಟಲ್ ಕೇಸ್ ಡೈರಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರು, ಸರ್ಕಾರಿ ಇಲಾಖೆಯವರು ಅಲ್ಲಿ ಬಳಕೆ ಮಾಡಿರುವ ಇಮೇಲ್ ಐಡಿಯನ್ನು ಜೂಮ್‌ನಲ್ಲಿ ಬಳಕೆ ಮಾಡಬೇಕು.
ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರು ಕಾಸ್‌ಲಿಸ್ಟ್ ಪಟ್ಟಿ, ಪ್ರಕರಣದ ಸಂಖ್ಯೆ ಮತ್ತು ಹೆಸರನ್ನು ಉಲ್ಲೇಖಿಸಬೇಕು.
ಅಕ್ರೆಡಿಟೇಷನ್ ಪಟ್ಟಿಯಲ್ಲಿ ಉಲ್ಲೇಖಿತವಾಗಿರುವ ಮಾಧ್ಯಮ ಪ್ರತಿನಿಧಿಗಳು ತಮ್ಮ ಇಮೇಲ್ ಐಡಿಗಳನ್ನು ಹೈಕೋರ್ಟ್‌ನ ಕಂಪ್ಯೂಟರ್ಸ್ ರಿಜಿಸ್ಟ್ರಾರ್ ಅವರಿಗೆ ವೈಟ್‌ಲಿಸ್ಟ್ ಮಾಡಲು ಇಮೇಲ್ ಕಳುಹಿಸಬೇಕು. ಮಾಧ್ಯಮ ಪ್ರತಿನಿಧಿಗಳು ತಮ್ಮ ಹೆಸರು, ಸಂಸ್ಥೆಯ ಹೆಸರನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕು.
ಜೂಮ್ ಕೋರ್ಟ್ ಹಾಲ್‌ಗಳಲ್ಲಿ ವೈಟಿಗ್ ರೂಮ್‌ಗಳು ಇರಲಿದ್ದು, ಸರಿಯಾದ ಪ್ರಕರಣದ ಸಂಖ್ಯೆ ಹೊಂದಿರುವವರನ್ನು ಮಾತ್ರ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಅನುಮತಿಸಲಾಗುವುದು.
ವಿದೇಶಗಳಿಂದ ವಿಚಾರಣೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಅನುಮತಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.